More

    ಹಣವಂತರೆಲ್ಲ ಸಮಾಜ ಸೇವೆ ಮಾಡಲ್ಲ: ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ

    ಮಂಡ್ಯ: ಎಲ್ಲ ಹಣವಂತರು ಸಮಾಜ ಸೇವೆಗೆ ಮುಂದೆ ಬರುವುದಿಲ್ಲ ಎಂದು ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
    ತಾಲೂಕಿನ ಬಸರಾಳು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ಅವರು ನಿರ್ಮಾಣ ಮಾಡಿರುವ ತಾರಾಭವನ ಉದ್ಘಾಟನೆ, ಉಚಿತ ಸಾಮೂಹಿಕ ವಿವಾಹ ಮತ್ತು ಭೀಮರಥ ಶಾಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಆರ್ಥಿಕವಾಗಿ ಬಲಿಷ್ಠವಾಗಿರುವವರು ಸಮಾಜದಲ್ಲಿ ಕೆಳವರ್ಗದಲ್ಲಿರವವರನ್ನು ಮೇಲಕ್ಕೆತ್ತಬೇಕು. ಅದೇ ನಿಜವಾದ ಸಮಾಜ ಸೇವೆ. ಈ ನಿಟ್ಟಿನಲ್ಲಿ ಮಹಾಲಿಂಗೇಗೌಡ ಅವರು ಬಡವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
    ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಜನರ ಕಲ್ಯಾಣಕ್ಕಾಗಿ ಕಲ್ಯಾಣ ಮಂಟಪವನ್ನು ಕಟ್ಟಿ ಉಚಿತ ಸಾಮೂಹಿಕ ವಿವಾಹ ನಡೆಸುತ್ತಿರುವುದು ತುಂಬಾ ಶ್ಲಾಘನೀಯ. ಚಂಚಲ ಮನಸ್ಸಿನಿಂದ ಉತ್ತಮ ಆರೋಗ್ಯ ಸಿಗುವುದಿಲ್ಲ, ಕಾಯಕವೇ ಕೈಲಾಸ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಏಕಾಗ್ರತೆ ಇದ್ದಾಗ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸೇವೆ ಮಾಡುವುದು ಮುಖ್ಯವಾಗಬೇಕು. ಗುರು-ಹಿರಿಯರನ್ನು ಗೌರವಿಸುವ ಕಾರ್ಯಕ್ರಮವೂ ಸಹ ಇದಾಗಿದೆ ಎಂದರು.
    ಕಾಗಿನೆಲೆ ಮಠದ ಪೀಠಾಧ್ಯಕ್ಷ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಜೀವನ ಒಂದು ಸಾಗರವಿದ್ದಂತೆ. ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ನವಜೋಡಿಗಳು ಉತ್ತಮ ಜೀವನ ಕಟ್ಟಿಕೊಳ್ಳಿ. ಬದುಕಿನಲ್ಲಿ ಏರಿಳಿತ ಸರ್ವೇ ಸಾಮಾನ್ಯ. ಕಷ್ಟ ಬಂದಾಗ ಕುಗ್ಗದೇ ಸಂತೋಷ ಬಂದಾಗ ಹಿಗ್ಗದೇ ಸಮತೋಲನ ಜೀವನ ಸಾಗಿಸಬೇಕು. ದುಬಾರಿ ವೆಚ್ಚ ಮಾಡಿ ಮದುವೆ ಮಾಡುವುದಕ್ಕಿಂತ ಇಂತಹ ಸರಳ ಮದುವೆಗಳು ಎಲ್ಲರನ್ನೂ ಉಳಿಸುವ ಮಹಾತ್ಕಾರ್ಯ ಎಂದು ತಿಳಿಸಿದರು.
    ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಐದು ನವ ಜೋಡಿಗಳಿಗೆ ಮಾಂಗಲ್ಯ ವಿತರಣೆ ಮಾಡಿ, ಶುಭ ಕೋರಿದರು. ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಚಂದ್ರವನ ಆಶ್ರಮದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಗ್ರಾಪಂ ಮಾಜಿ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಘವೇಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts