More

    ಸಹನೆ ಮೀರಿದರೆ ಗಣಚಾರಿಗಳಾಗುತ್ತೇವೆ, ವೀರಶೈವ ಲಿಂಗಾಯತ ಸ್ವಾಮೀಜಿಗಳ ಆಕ್ರೋಶ

    ಮಸ್ಕಿ: ಪ್ರತಿಯೊಬ್ಬರಿಗೂ ಲೇಸನ್ನೇ ಬಯಸುವ, ಇತರರಿಗೆ ಸಮಾನತೆಯನ್ನು ಕೊಟ್ಟ ವೀರಶೈವ ಲಿಂಗಾಯತ ಸಮುದಾಯದ ನೌಕರರ ಮೇಲೆ ಅನಗತ್ಯವಾಗಿ ಹಲ್ಲೆ, ಕಿರುಕುಳದಂತ ಘಟನೆಗಳು ನಡೆಯುತ್ತಿರುವುದು ಖಂಡನೀಯ ಎಂದು ಕಲ್ಯಾಣ ಆಶ್ರಮದ ಮುದಗಲ್ ಮಹಾಂತಸ್ವಾಮೀಜಿ ಹೇಳಿದರು. ಪಟ್ಟಣದ ಸಿಂಧನೂರು ರಸ್ತೆಯ ಬಸವೇಶ್ವರ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮುದಾಯ ಮಂಗಳವಾರ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

    ವೀರಶೈವ ಲಿಂಗಾಯತರ ಮೇಲೆ ಇತ್ತೀಚೆಗೆ ಹಲ್ಲೆ ನಡೆಯುತ್ತಿರುವುದನ್ನು ನೋಡಿ ಸಮಾಜ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಸಮಾಜ ಬಾಂಧವರಲ್ಲಿ ಆಂತರಿಕ ಕುದಿ ಹೆಚ್ಚುತ್ತಿದೆ. ಇದಕ್ಕೆಲ್ಲ ಅವಕಾಶ ಮಾಡಿಕೊಡಬಾರದು. ಪ್ರತಿಯೊಬ್ಬರನ್ನು ಅಪ್ಪಿಕೊಳ್ಳುವುದು ಗೊತ್ತು, ತಿರುಗಿ ಬಿದ್ದವರಿಗೆ ಪಾಠ ಕಲಿಸುವುದು ಗೊತ್ತು ಎಂದು ಮುದಗಲ್ ಮಹಾಂತ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನೆಗೆ ಚಾಲನೆ ನೀಡಿ ನೇತೃತ್ವ ವಹಿಸಿದ್ದ ಮಸ್ಕಿಯ ಗಚ್ಚಿನ ಹಿರೇಮಠದ ವರರುದ್ರಮುನಿ ಸ್ವಾಮೀಜಿ ಮಾತನಾಡಿ ಇಂದಿನ ಪ್ರತಿಭಟನೆ ಯಾವ ಸಮುದಾಯದ ವಿರುದ್ಧವಲ್ಲ. ಕಿಡಿಗೇಡಿಗಳ ವಿರುದ್ಧವಾಗಿದೆ. ಹುಮನಾಬಾದ್ ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು. ಸರ್ಕಾರಿ ನೌಕರರು ನಿರ್ಭೀತಿಯಿಂದ ಸಾರ್ವಜನಿಕ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದರು.

    ಮುಂಬರುವ ದಿನಗಳಲ್ಲಿ ಮಸ್ಕಿ ತಾಲೂಕಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳು ಒಗ್ಗೂಡಿಕೊಂಡು ತಾಲೂಕು ಮಟ್ಟದ ವೀರಶೈವ ಲಿಂಗಾಯತ ಸಮಾಜದ ಸಂಘಟನೆ, ಭವಿಷ್ಯತ್ತಿನ ದೂರದೃಷ್ಟಿ, ಶೈಕ್ಷಣಿಕ, ಆರ್ಥಿಕ ಸಾಮಾಜಿಕವಾಗಿ ಸದೃಢವಾಗಿ ಸಮಾಜ ಕಟ್ಟಲು ಚಿಂತನೆ ನಡೆಸುವುದಾಗಿ ತಿಳಿಸಿದರು. ನಂತರ ತಹಸೀಲ್ದಾರ ಕವಿತಾ ಆರ್‌ಗೆ ಮನವಿ ಸಲ್ಲಿಸಿದರು.

    ಸಂತೆಕೆಲ್ಲೂರಿನ ಮಹಾಂತಿನಮಠದ ಮಹಾಂತಸ್ವಾಮೀಜಿ, ಶಿವಕುಮಾರ ಎನ್, ವೀರೇಶ ಪಾಟೀಲ ಮಾತನಾಡಿದರು. ಅಪ್ಪಾಜಿಗೌಡ ಪಾಟೀಲ, ಅಂದಾನಪ್ಪ ಗುಂಡಳ್ಳಿ, ಡಾ.ಶಿವಶರಣಪ್ಪ ಇತ್ಲಿ, ಡಾ.ಬಿ.ಎಚ್.ದಿವಟರ್, ಬಸವಂತರಾಯ ಕುರಿ, ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಜಗದೀಶ ತಾತ ಹಾಲಾಪೂರು, ಸಿದ್ಧಲಿಂಗಯ್ಯ ಸೊಪ್ಪಿಮಠ, ಘನಮಠದಯ್ಯ ಸಾಲಿಮಠ, ಸುರೇಶ ಹರಸೂರು, ಎಂ.ಅಮರೇಶ, ಉಮಾಕಾಂತಪ್ಪ ಸಂಗನಾಳ, ಬಸವರಾಜಸ್ವಾಮಿ ಹಸಮಕಲ್, ಪಂಚಾಕ್ಷರಯ್ಯ ಕಂಬಾಳಿಮಠ, ಸಿದ್ದಲಿಂಗಯ್ಯ ಗಚ್ಚಿನಮಠ, ದೊಡ್ಡಪ್ಪ ಕಡಬೂರು, ಉಮಾಕಾಂತಪ್ಪ ಸಂಗನಾಳ, ಶಶಿಕಾಂತ ಬ್ಯಾಳಿ, ಅಜಯ ನಾಡಗೌಡ, ಚಂದ್ರಕಾಂತ ಗೂಗೆಬಾಳ, ಮಲ್ಲಿಕಾರ್ಜುನ ಬ್ಯಾಳಿ, ಬಸನಗೌಡ ಮುದಬಾಳ, ಶ್ರೀಶೈಲಪ್ಪ ಸಜ್ಜನ್ ಹಾಗೂ ಇತರರು ಇದ್ದರು.

    ರಸ್ತೆ ಬಂದ್ ಮಾಡಿ ಸಾಂಕೇತಿಕವಾಗಿ ಆಕ್ರೋಶ
    ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಸ್ಕಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಮುದಗಲ್ ವಹಾಂತಸ್ವಾಮೀಜಿ, ಸಂತೆಕೆಲ್ಲೂರಿನ ಮಹಾಂತಸ್ವಾಮೀಜಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಪ್ರತಿಭಟನೆಯಲ್ಲಿ ಪ್ರತಿಯೊಬ್ಬರೂ ಬಿಳಿವಸ್ತ್ರ ಧರಿಸಿ ನೀರಪಂಚೆ ಹಾಕಿಕೊಂಡು ಶಿಸ್ತಿನ ಸಿಪಾಯಿಗಳಂತೆ ಪ್ರತಿಭಟನೆ ನಡೆಸಿದರು. ಚನ್ನಮ್ಮ ಸರ್ಕಲ್, ಅಂಬೇಡ್ಕರ್ ಸರ್ಕಲ್, ಅಶೋಕ ವೃತ್ತದ ಬಳಿ ಯುವಕರು ರಸ್ತೆ ಬಂದ್ ಮಾಡಿ ಸಾಂಕೇತಿಕವಾಗಿ ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts