More

    ಗಾಂಧೀಜಿಯವರ ಬದುಕು ಅನುಸರಿಸಿ, ಪ್ರಾಧ್ಯಾಪಕ ಡಾ.ಬಸವರಾಜ ಕೊಡುಗುಂಟಿ ಸಲಹೆ

    ಮಸ್ಕಿ: ಹುಟ್ಟು ಶ್ರೀಮಂತರಾಗಿದ್ದ ಗಾಂಧೀಜಿ ಪಕೀರನಂತೆ ತುಂಡು ಬಟ್ಟೆ ಉಟ್ಟುಕೊಂಡು ಬದಲಾದ ಚಿತ್ರಣವನ್ನು ಗಮನಿಸಬೇಕಾಗಲಿ, ಗಾಂಧೀಜಿಯ ಬಗ್ಗೆ ಇಲ್ಲ ಸಲ್ಲದ ಅಪವಾದ ಮಾಡಬಾರದು ಎಂದು ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಬಸವರಾಜ ಕೊಡುಗುಂಟಿ ಹೇಳಿದರು.

    ಪಟ್ಟಣದ ಅಭಿನಂದನ್ ಸ್ಪೂರ್ತಿಧಾಮದಲ್ಲಿ ಕಸಾಪ ಮತ್ತು ಅಕ್ಷರ ಸಾಹಿತ್ಯ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಗಾಂಧಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಾಂಧೀಜಿಯಂತೆ ವೇಷ ಹಾಕುವುದು, ಪ್ರತಿ ಗ್ರಾಮದಲ್ಲಿ ಗಾಂಧಿ ಮೂರ್ತಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಗಾಂಧಿ ತತ್ವ ಅನುಸರಿಸಿದಾಗ ಮಾತ್ರ ಗಾಂಧಿ ಅರ್ಥವಾಗಲು ಸಾಧ್ಯ. ಗಾಂಧೀಜಿಯನ್ನು ಎಡ ಮತ್ತು ಬಲ ಪಂಥಿಯರು ಟೀಕಿಸುತ್ತಿದ್ದಾರೆ. ಆದರೆ ಗಾಂಧೀಜಿಯ ದೂರದೃಷ್ಟಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದರು.

    ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವೀರೇಶ ಸೌದ್ರಿ ಮಾತನಾಡಿ, ಸಹಕಾರ ತತ್ವದ ಅಡಿಯಲ್ಲಿ ದೇವನಾಂಪ್ರಿಯ ಪ್ರಕಾಶನ ಮತ್ತು ಓದುಗರ ಸಂಘ ಸ್ಥಾಪಿಸಿದ್ದು ಈ ಭಾಗದ ಲೇಖಕರ ಪುಸ್ತಕಗಳ ಪ್ರಕಟಣೆ ಮತ್ತು ರಿಯಾಯಿತಿ ದರದಲ್ಲಿ ಓದುಗರಿಗೆ ತಲುಪಿಸುವ ಉದ್ದೇಶ ಹೊಂದಿದೆ. ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಈ ಭಾಗದಲ್ಲಿ ಪ್ರಕಾಶನ ಸಂಸ್ಥೆಗಳು ಬೆರಳಣಿಕೆಯಷ್ಟು ಇದ್ದು ಪ್ರಕಾಶನ ಸಂಸ್ಥೆಯನ್ನು ಬೆಳೆಸುವಂತೆ ಮನವಿ ಮಾಡಿದರು.

    ದೇವನಾಂಪ್ರಿಯ ಪ್ರಕಾಶನ ಮತ್ತು ಓದುಗರ ಸಂಘದ ಮಾಹಿತಿ ಪತ್ರಿಕೆಯನ್ನು ಬಿಡುಗಡೆ ಮಾಡಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಾಹಾಂತೇಶ ಮಸ್ಕಿ ಮಾತನಾಡಿ, ವಾಟ್ಸ್‌ಆಪ್‌ನಲ್ಲಿ ಗಾಂಧಿಯನ್ನು ಕುರಿತು ಬರುತ್ತಿರುವ ಮಾಹಿತಿಗಳನ್ನು ನಂಬುವ ಇಂದಿನ ಯುವ ಜನಾಂಗ ಗಾಂಧಿ ಕುರಿತು ತಪ್ಪು ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ನೋವಿನ ಸಂಗತಿ. ಗಾಂಧೀಜಿಯನ್ನು ವಿದೇಶಿಗರು ಅರ್ಥಮಾಡಿಕೊಂಡಷ್ಟು ಭಾರತೀಯರಾದ ನಾವು ಅರ್ಥ ಮಾಡಿಕೊಳ್ಳದಿರುವುದು ದುರದೃಷ್ಟಕರ ಎಂದರು.

    ಮಸ್ಕಿ ತಾಲೂಕು ಕಸಾಪ ಅಧ್ಯಕ್ಷ ಆದಪ್ಪ ಹೆಂಬಾ, ಅಕ್ಷರ ಸಾಹಿತ್ಯ ವೇದಿಕೆ ಅಧ್ಯಕ್ಷ ಗುಂಡೂರಾವ್ ದೇಸಾಯಿ, ಶಿಕ್ಷಕ ಮಹೇಶ ಶೆಟ್ಟರ್, ಅಭಿನಂದನ್ ಸಂಸ್ಥೆಯ ಗೌರವಾಧ್ಯಕ್ಷ ಶಿವಪ್ರಸಾದ ಕ್ಯಾತ್ನಟ್ಟಿ ಮಾತನಾಡಿದರು. ಸಿಂಧನೂರು ತಾಲೂಕು ಕಸಾಪ ಅಧ್ಯಕ್ಷ ಪಂಪಯ್ಯ ಸ್ವಾಮಿ ಅಂತರಗಂಗಿ, ಶಂಕರ್ ಸಕ್ರಿ, ಬಾಲಯ್ಯ ನಾಯಕ, ಕಾಮಾಕ್ಷಿ ತೋಟದ್, ಷೇಖಖಾಜಿ, ದೇವರಾಜ ಗಂಟಿ ಗಾಂಧಿ ಕುರಿತು ಕವಿತೆ ವಾಚಿಸಿದರು. ಅಭಿನಂದನ್ ಸಂಸ್ಥೆಯ ಅನಾಥ ಮಕ್ಕಳು ನಡೆಸಿದ ರೂಪಕಗಳು ಮನಸೊರೆಗೊಂಡವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts