More

    ಇಂದು ಭೂಮಿಯ ಸನಿಹಕ್ಕೆ ಅಂಗಾರಕ, ಕೆಂಬಣ್ಣದಿಂದ ಹೊಳೆವ ಗ್ರಹ ವೀಕ್ಷಣೆಗೆ ಅಪೂರ್ವ ಅವಕಾಶ

    ಉಡುಪಿ: ಅಂಗಾರಕ ಎಂದರೆ ಕೆಂಪಗೆ ಕಾದ ಕೆಂಡ. ಈ ಗ್ರಹ ಕೆಂಪಾದ ಕೆಂಡದಂತೆ ಕಂಡ ಕಾರಣ ಹಿರಿಯರು ಮಂಗಳಗ್ರಹವನ್ನು ಅಂಗಾರಕವೆಂದು ಕರೆದರು. ಮಂಗಳನಿಗೆ ಇನ್ನೊಂದು ಹೆಸರು ಲೋಹಿತಾಂಗ. ಅಂದರೆ ಕಾದ ಲೋಹದ (ಕಬ್ಬಿಣದ) ಮೈಯುಳ್ಳವನು. ಇದನ್ನು ಅ.13ರಂದು ಸ್ಪಷ್ಟವಾಗಿ ಸಾಕ್ಷೀಕರಿಸಬಹುದು.

    ಮಂಗಳ ಗ್ರಹ ಸೂರ್ಯನಿಂದ ಸುಮಾರು 24 ಕೋಟಿ ಕಿ.ಮೀ. ದೂರದಲ್ಲಿ ದೀರ್ಘ ವೃತ್ತಾಕಾರದಲ್ಲಿ ಸುತ್ತುತ್ತಿದ್ದರೂ, ಭೂಮಿಗೆ ಒಂದೇ ದೂರದಲ್ಲಿ ಕಾಣುವುದಿಲ್ಲ. ಸುಮಾರು 2.2 ವರ್ಷಕ್ಕೊಮ್ಮೆ ಸಮೀಪಿಸಿ, ದೂರ ಸರಿದಂತೆ ಕಾಣುತ್ತಿರುತ್ತಾನೆ. ಸಮೀಪ ಬಂದಾಗ ಕೆಂಬಣ್ಣದಿಂದ ದೊಡ್ಡದಾಗಿ ಹೊಳೆದು ರಾತ್ರಿ ಇಡೀ ಆಕಾಶದಲ್ಲಿ ಸೆಳೆಯುತ್ತಾನೆ.

    ಇಂಥ ಮಂಗಳ ಗ್ರಹ ಅ.13ರಂದು ಭೂಮಿಗೆ ಸಮೀಪ 6.20 ಕೋಟಿ ಕಿ.ಮೀ. ದೂರದಲ್ಲಿದ್ದು, ಸುಂದರವಾಗಿ ಬರಿಗಣ್ಣಿಗೆ ಗೋಚರಿಸಲಿದೆ. ಈ ದಿನದ ಆರು ದಿನ ಮೊದಲು ಮತ್ತು ಆರು ದಿನ ನಂತರ ವೀಕ್ಷಿಸಬಹುದಾಗಿದ್ದರೂ, 13ರಂದು ಕಾಣುವಷ್ಟು ಸ್ಪಷ್ಟವಾಗಿ ವೀಕ್ಷಣೆಗೆ ಸಿಗದು. ಸೂರ್ಯಾಸ್ತದ ನಂತರ ಪೂರ್ವ ದಿಕ್ಕಿನಲ್ಲಿ ಬರಿಗಣ್ಣಿನಲ್ಲಿ ಜಗತ್ತಿನಾದ್ಯಂತ ವೀಕ್ಷಿಸಬಹುದಾಗಿದೆ.
    ಪ್ರಸ್ತುತ ಕಾಣುವಷ್ಟು ಸನಿಹಕ್ಕೆ ಇನ್ನು ಮಂಗಳನನ್ನು ಕಾಣಬೇಕಾದರೆ 2035ರವರೆಗೆ ಕಾಯಬೇಕು. ಹಿಂದೆ 2003 ಮತ್ತು 2018ರಲ್ಲಿ ಹೀಗೆಯೇ ಹತ್ತಿರದಿಂದ ನೋಡುವ ಅವಕಾಶ ಲಭಿಸಿತ್ತು.

    ಮಂಗಳನ ವಿಶೇಷಗಳು:
    1.ಸೂರ್ಯನಿಂದ ಭೂಮಿ ಸುಮಾರು 15 ಕೋಟಿ ಕಿ.ಮೀ. ದೂರದಲ್ಲಿದ್ದರೆ, ಮಂಗಳ ಗ್ರಹ ಸುಮಾರು 24 ಕೋಟಿ ಕಿ.ಮೀ. ದೂರದಲ್ಲಿರುತ್ತದೆ.
    2.ಮಂಗಳನ ವ್ಯಾಸ ಭೂಮಿಯ ಅರ್ಧದಷ್ಟಿದೆ. ಗಾತ್ರದಲ್ಲಿ ಭೂಮಿಯ ಶೇ.15ರಷ್ಟು ಮಾತ್ರ.
    3.ಮಂಗಳ ಗ್ರಹದ ದ್ರವ್ಯರಾಶಿ ಭೂಮಿಯ ಸುಮಾರು ಹತ್ತನೇ ಒಂದರಷ್ಟು. ಭೂಮಿಯಲ್ಲಿನ 100 ಕೆ.ಜಿ. ಮಂಗಳನಲ್ಲಿ ತೂಗಿದಾಗ 38 ಕೆ.ಜಿ. ಇರುತ್ತದೆ.
    4. ಭೂಮಿಗೆ ಸೂರ್ಯನನ್ನು ಒಮ್ಮೆ ಸುತ್ತಲು 365 ದಿನಗಳು ಬೇಕಾದರೆ ಮಂಗಳನಿಗೆ 687 ದಿನ.
    5. ಭೂಮಿಯ ವಾತಾವರಣದ ನೂರನೇ ಒಂದರಷ್ಟು ಕಡಿಮೆ ವಾತಾವರಣ ಮಂಗಳದಲ್ಲಿದೆ. ಈ ತೆಳು ವಾತಾವರಣದಲ್ಲಿ ಅತಿ ಹೆಚ್ಚು ಅಂದರೆ ಶೇ.95ರಷ್ಟು ಇಂಗಾಲದ ಡೈ ಆಕ್ಸೈಡ್.
    6.ಮಂಗಳನಲ್ಲಿ ಸುಮಾರು 4000 ಕಿ.ಮೀ. ಉದ್ದದ, 200 ಕಿ.ಮೀ. ಅಗಲದ, 78 ಕಿ.ಮೀ. ಆಳದ ಕಣಿವೆ ಇದೆ. ಇದು ಸೌರವ್ಯೆಹದಲ್ಲೇ ಅತೀ ಉದ್ದದ ಕಣಿವೆ.
    7.ಭೂಮಿಯ ಸರಾಸರಿ ಉಷ್ಣತೆ 14 ಡಿಗ್ರಿ ಸೆಲ್ಸಿಯಸ್. ಮಂಗಳನಲ್ಲಿ ಮೈನಸ್ 63 ಡಿಗ್ರಿ ಸೆಲ್ಸಿಯಸ್.

    ಮಂಗಳನಲ್ಲಿಗೆ 1960ರಿಂದ ಇವತ್ತಿನ ವರೆಗೆ ಸುಮಾರು 56 ಕೃತಕ ಉಪಗ್ರಹಗಳು ಅಧ್ಯಯನಕ್ಕೆ ತೆರಳಿದ್ದರೂ 26 ಮಾತ್ರ ಸಫಲವಾಗಿವೆ. 2018ರ ಹೊತ್ತಿಗೆ ಸುಮಾರು 8 ಕೃತಕ ಉಪಗ್ರಹಗಳು ಅಧ್ಯಯನ ನಡೆಸುತ್ತಿವೆ. ರಷ್ಯಾ, ಅಮೆರಿಕ ಮಾತ್ರ ಮಂಗಳನ ಅಂಗಳದಲ್ಲಿ ಕೃತಕ ಉಪಗ್ರಹಗಳನ್ನು ಇಳಿಸಿ ಅಧ್ಯಯನ ಮಾಡಿವೆ. ಮೊದಲ ಬಾರಿ ಕಳುಹಿಸಿ ಯಶಸ್ಸು ಗಳಿಸಿದ್ದು ಭಾರತದ ಹೆಗ್ಗಳಿಕೆ. ಅಧ್ಯಯನಕಾರರು ಮಂಗಳನ ಅಧ್ಯಯನಕ್ಕಾಗಿ 2 ವರ್ಷ 2 ತಿಂಗಳಿನ ಭೂಮಿಗೆ ಸಮೀಪ ಕಾಲವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
    – ಡಾ.ಎ.ಪಿ. ಭಟ್, ನಿವೃತ್ತ ಪ್ರಾಧ್ಯಾಪಕ, ಭೌತಶಾಸ್ತ್ರ ವಿಭಾಗ, ಪಿಪಿಸಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts