More

  ತಾಯಿಯಿಂದ ಬೇರ್ಪಟ್ಟ ಮರಿಯಾನೆ

  ಅಂತೋಣಿ ಪಿ.ವಿ. ಸಿದ್ದಾಪುರ
  ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟಿರುವ ಮರಿಯಾನೆ ದಾರಿ ತೋಚದೆ ಅಲೆದಾಡುತ್ತಿದೆ.

  ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದಲ್ಲಿ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆಗಳ ಹಿಂಡಿನಿಂದ ನಾಲ್ಕ್ಕು ತಿಂಗಳ ಗಂಡು ಮರಿ ಬೇರ್ಪಟ್ಟಿದೆ. ಹೆತ್ತಮ್ಮನಿಂದ ದೂರವಾದ ಮರಿಯಾನೆಯನ್ನು ತಾಯಿಯೊಂದಿಗೆ ಸೇರಿಸಲು ಅರಣ್ಯ ಇಲಾಖೆ ಹರಸಾಹಸಪಡುತ್ತಿದೆ.

  ಮಾಲ್ದಾರೆ ಗ್ರಾಮದಲ್ಲಿರುವ ಮೈಲಾಪುರ ಖಾಸಗಿ ಎಸ್ಟೇಟ್‌ನಲ್ಲಿ ಕಾಡಾನೆ ಮರಿ ತಾಯಿಯಿಂದ ಬೇರ್ಪಟ್ಟಿದೆ. ಕಾಫಿ ತೋಟದಲ್ಲಿ ದಿಕ್ಕು ತೋಚದೆ ಪುಟ್ಟ ಆನೆ ಮರಿ ಸುತ್ತಾಡುತ್ತಿದ್ದು, ಇದನ್ನು ಗಮನಿಸಿದ ತೋಟದ ಕಾರ್ಮಿಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

  ಕಳೆದ ಒಂದು ವಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಆರ್‌ಆರ್‌ಟಿ ಸಿಬ್ಬಂದಿ ಕಾಡಾನೆ ಮರಿಗೆ ಅಪಾಯವಾಗದಂತೆ ಕಾಫಿ ಎಸ್ಟೇಟ್‌ನಲ್ಲಿ ಅದರ ಚಲನವಲನಗಳನ್ನು ಗಮನಿಸುತ್ತಿದ್ದು, ಮರಿಯನ್ನು ಮರಳಿ ಗುಂಪಿಗೆ ಸೇರಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಇದು ಫಲ ಕಂಡಿಲ್ಲ.
  ದಿಕ್ಕು ಕಾಣದ ಮರಿಯಾನೆ ಸದ್ಯ ಜನವಸತಿ ಪ್ರದೇಶದತ್ತ ಬಂದಿದೆ. ಇನ್ನು ಸರಿಯಾಗಿ ಓಡಾಡಲು ಆಗದ ಆನೆ ಮರಿಯನ್ನು ಕಂಡು ಜನರು ಮರುಗಿದ್ದು, ಆಹಾರ, ನೀರು ನೀಡಲು ಪ್ರಯತ್ನಿಸುತ್ತಿದ್ದಾರೆ. ತಾಯಿಯಿಂದ ದೂರವಾಗಿ ತಬ್ಬಲಿಯಾಗಿರುವ ಗಂಡು ಆನೆ ಮರಿಯನ್ನು ತಿತಿಮತಿ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಮೈಲಾಪುರ ಆರ್ಗನಿಕ್ ಎಸ್ಟೇಟ್‌ನಲ್ಲಿ ಕಾಣಿಸಿಕೊಂಡಿದ ಆನೆಗಳ ಗುಂಪಿಗೆ ಬಿಟ್ಟಿದ್ದರು. ಆದರೆ, ಮರಿಯಾನೆಯನ್ನು ಆನೆಗಳ ಹಿಂಡು ಬಿಟ್ಟು ಹೋಗಿವೆ. ನಂತರ ದುಬಾರೆ ಕಾಡಿನಲ್ಲಿ ಕಂಡ ಕಾಡಾನೆ ಗುಂಪಿಗೆ ಸೇರಿಸಿದರೂ ಪ್ರಯೋಜನವಾಗಿಲ್ಲ.

  ಕಾಡಿಗೆ ಬಿಟ್ಟರೂ ಮತ್ತೆ ತೋಟಕ್ಕೆ ಬರುತ್ತಿರುವ ಮರಿಯಾನೆ ತಾಯಿಗಾಗಿ ಘೀಳಿಡುತ್ತಾ ಅತ್ತಿಂದಿತ್ತ ಓಡಾಡುತ್ತಿದೆ. ತಾಯಿ ಆನೆ ಯಾವುದು ಎಂಬ ಹುಡುಕಾಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೊಡಗಿದ್ದಾರೆ.

  ಮರಿಯಾನೆ ಕಾಫಿ ತೋಟದಲ್ಲಿ ಉಳಿದಿರುವುದರಿಂದ ಕಾಡಾನೆಗಳು ಮರಿಯನ್ನು ಕರೆದೊಯ್ಯಲು ಬರುತ್ತವೆ ಎಂಬ ಆತಂಕದಿಂದ ಕಾರ್ಮಿಕರು ತೋಟಗಳತ್ತ ತೆರಳುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಆದಷ್ಟು ಬೇಗ ಮರಿಯಾನೆಗೆ ಚಿಕಿತ್ಸೆ ನೀಡಿ, ಸ್ಥಳಾಂತರಿಸಬೇಕು ಎಂದು ಕಾರ್ಮಿಕರು ಆಗ್ರಹಿಸಿದ್ದಾರೆ.
  ಚೆನ್ನಂಗಿ ವಲಯ ಅರಣ್ಯ ಅಧಿಕಾರಿ ಶ್ರೀನಿವಾಸ್, ಅಮತ್ತಿ ವಲಯಾಧಿಕಾರಿ ದೇವಯ್ಯ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಆರ್‌ಆರ್‌ಟಿ ಸಿಬ್ಬಂದಿ ತಾಯಿ ಆನೆ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts