More

    ಅಮೃತ್ ಯೋಜನೆ ಕಾಮಗಾರಿ ವಿಳಂಬ

    ಅಮೃತ್ ಯೋಜನೆ ಕಾಮಗಾರಿ ವಿಳಂಬ

    ಚಿಕ್ಕಮಗಳೂರು: ನಗರಕ್ಕೆ ದಿನದ 24 ಗಂಟೆ ನೀರುಣಿಸುವ ಅಮೃತ್ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ನಿರೀಕ್ಷಿಸಿದಂತೆ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳುವ ಲಕ್ಷಣ ಗೋಚರವಾಗುತ್ತಿಲ್ಲ. ಕಾಮಗಾರಿಯ ವಿಳಂಬಗತಿಯ ಬಗ್ಗೆ ಜನರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

    ಮೊದಲಿಗೆ ಫೆಬ್ರವರಿ ಅಂತ್ಯಕ್ಕೆ ಈ ಕಾಮಗಾರಿ ಪೂರ್ಣಗೊಂಡು ಮಾ.1 ರಿಂದ ನೀರು ಒದಗಿಸುವ ಭರವಸೆ ನೀಡಲಾಗಿತ್ತು. ಆದರೆ ಏಪ್ರಿಲ್ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಬಗ್ಗೆ ಸ್ವತಃ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.

    ಪ್ರಮುಖವಾಗಿ ಪ್ರತಿ ಮನೆಗೆ ಸಂಪರ್ಕ ಕಲ್ಪಿಸಲು ಪೈಪ್ ಅಳವಡಿಸುವ ಕಾರ್ಯ ಸಹ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮೇ ಬಳಿಕ ನೀರು ಪೂರೈಕೆಯಾಗಲಿದ್ದು, ಮೀಟರ್ ಆಧಾರದಲ್ಲಿ ಶುಲ್ಕ ಬೀಳಲಿರುವುದರಿಂದ ನೀರು ಪೋಲಾಗುವುದಕ್ಕೆ ಸಂಪೂರ್ಣ ಕಡಿವಾಣ ಬೀಳಲಿದೆ. 102.57 ಕೋಟಿ ರೂ. ಮೊತ್ತದ ಈ ಯೋಜನೆಗೆ 70 ಕೋಟಿ ರೂ. ವೆಚ್ಚವಾಗಿದೆ.

    ನಗರದ ನೀರಿನ ಸಮಸ್ಯೆ ಶೀಘ್ರ ಬಗೆಹರಿಯುತ್ತದೆ ಎಂದು ನಾಗರಿಕರು ಭಾರಿ ನಿರೀಕ್ಷೆಯಲ್ಲಿದ್ದರು. ಯೋಜನೆಯಲ್ಲಿರುವಂತೆ ಪ್ರತಿ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾರಣಕ್ಕೆ ಪೈಪ್​ಲೈನ್ ಅಳವಡಿಸಲು ರಸ್ತೆ ಅಗೆದಿರುವುದರಿಂದ ಪ್ರತಿ ಮನೆ ಅಂತರದಲ್ಲಿ ರಸ್ತೆಯನ್ನು ಅಗೆದಿರುವುದರಿಂದ ವಾಹನ ಸವಾರರು ಅಡಚಣೆ ಅನುಭವಿಸುತ್ತಲೇ ಚಾಲನೆ ಮಾಡಬೇಕಿದೆ. ಹೀಗಾಗಿ ನಿತ್ಯ ಅಸಮಾಧಾನದಿಂದಲೇ ವಾಹನ ಚಾಲಕರು, ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.

    ನಗರಸಭೆಗೆ ಚುನಾವಣೆ ನಡೆಯದೆ ಆಡಳಿತ ಮಂಡಳಿ ಅಸ್ತಿತ್ವದಲ್ಲಿಲ್ಲ. ಅಧಿಕಾರ ಸಂಪೂರ್ಣವಾಗಿ ಅಧಿಕಾರಿಗಳ ಕೈಯಲ್ಲಿದೆ. ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕವಾಗಿ ಚಾಲನೆ ದೊರೆಯುತ್ತಿಲ್ಲ ಎನ್ನುವ ಆರೋಪ ನಗರಸಭೆ ಸದಸ್ಯರಿಂದ ಕೇಳಿ ಬರುತ್ತಿದೆ. ಪೌರಾಯುಕ್ತರ ಕಾರ್ಯವೈಖರಿ ಬಗ್ಗೆ ಉತ್ತಮ ಅಭಿಪ್ರಾಯವಿದ್ದರೂ ಆಡಳಿತ ನಡೆಸಲು ಸಮಸ್ಯೆಯಾಗಿದೆ.

    ಕಾಮಗಾರಿ ಏನಾಗಿದೆ?: ಯಗಚಿ ನದಿಯಲ್ಲಿ ಅಳವಡಿಸಿರುವ ಜಾಕ್​ವೆಲ್​ನಿಂದ ಮುಗಳವಳ್ಳಿ ಬಳಿ ನಿರ್ವಿುಸಿರುವ ನೀರೆತ್ತುವ ಕೇಂದ್ರಕ್ಕೆ ಎಂಎಸ್ ಪೈಪ್​ಲೈನ್​ಗಳನ್ನು ಅಳವಡಿಸಲಾಗಿದೆ. ಗೃಹಮಂಡಳಿ ಬಡಾವಣೆಯಲ್ಲಿ ನಿರ್ವಿುಸಿರುವ ಮತ್ತೊಂದು ಪಂಪಿಂಗ್ ಸ್ಟೇಷನ್​ಗೆ ಪೈಪ್​ಲೈನ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದಾದ ಬಳಿಕ ನಗರದಲ್ಲಿ ನಿರ್ವಿುಸಿರುವ ನೆಲಮಟ್ಟದ ನೀರು ಸಂಗ್ರಹಾಗಾರಗಳಿಗೆ ಸಂಸ್ಕರಿಸಿದ ನೀರು ತುಂಬಿ ಮನೆಗಳಿಗೆ ಹರಿಸುವ ಕಾರ್ಯ ಆರಂಭವಾಗಲಿದೆ.

    ನಗರದ ಅಂಧ ಮಕ್ಕಳ ಶಾಲೆ ಬಳಿ 5 ಲಕ್ಷ ಗ್ಯಾಲನ್ ಸಾಮರ್ಥ್ಯದ ಒಂದು ನೆಲಮಟ್ಟದ ಟ್ಯಾಂಕ್, ಹೊಸ ಕಾರಾಗೃಹದ ಬಳಿ 12 ಲಕ್ಷ ಸಾಮರ್ಥ್ಯದ ಮತ್ತೊಂದು ಟ್ಯಾಂಕ್ ಹಾಗೂ ಗೃಹಮಂಡಳಿ ಬಡಾವಣೆಯಲ್ಲಿ 60 ಲಕ್ಷ ಗ್ಯಾಲನ್ ಸಾಮರ್ಥ್ಯದ ಇನ್ನೊಂದು ನೀರು ಸಂಗ್ರಹಣಾ ಕೇಂದ್ರ ನಿರ್ವಿುಸಲಾಗಿದ್ದು, ಯಥೇಚ್ಚ ನೀರು ಸಂಗ್ರಹಿಸಿಕೊಳ್ಳಲು ಅವಕಾಶವಾಗಲಿದೆ.

    17,300 ಮನೆಗಳಿಗೆ ಸಂಪರ್ಕ: ಯೋಜನೆ ಆರಂಭದಲ್ಲಿ ಒಟ್ಟು 30 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸುವ ಅಂದಾಜು ಮಾಡಲಾಗಿದ್ದು, ಇದುವರೆಗೂ 17,300 ಮನೆಗಳಿಗೆ ಮಾತ್ರ ಸಂಪರ್ಕ ನೀಡಲಾಗಿದೆ. ಉಳಿದ 13 ಸಾವಿರ ಮನೆಗಳಿಗೆ ಸಂಪರ್ಕ ನೀಡುವ ಕಾರ್ಯ ನಡೆಯಬೇಕಿದೆ. ಪೈಪ್ ಅಳವಡಿಸಿ ಮನೆಯ ಸಂಪ್ ಅಥವಾ ನಲ್ಲಿ ಸಂಪರ್ಕದ ಮೂಲಕ ನೀರು ಒದಗಿಸಲಾಗುವುದು. ಸಂಪರ್ಕ ಕಲ್ಪಿಸುವ ಸ್ಥಳದಲ್ಲೇ ಮೀಟರ್ ಅಳವಡಿಸಲಾಗುವುದು. ನಗರದ ಎಲ್ಲ ಮನೆಗಳಿಗೆ ಸಂಪರ್ಕ ಒದಗಿಸಿದ ಬಳಿಕ ಯೋಜನೆ ಕಾರ್ಯಗತವಾಗಲಿದೆ.

    ಒಳಚರಂಡಿಗೆ ಹೊಸ ಟೆಂಡರ್: ನಗರದಲ್ಲಿ 82 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಕೂಡ ವಿಳಂಬ ಗತಿಯಲ್ಲಿದ್ದು ನಿರಾಸೆಗೆ ಕಾರಣವಾಗಿದೆ. ಪ್ಯಾಕೇಜ್ ಒಂದರಲ್ಲಿ ಗುತ್ತಿಗೆದಾರರು ವಿಳಂಬ ಧೋರಣೆ ಅನುಸರಿಸಿದ ಹಿನ್ನೆಲೆಯಲ್ಲಿ ಅವರನ್ನು ಕೈಬಿಟ್ಟು ಹೊಸದಾಗಿ ಟೆಂಡರ್ ಕರೆದು ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಚಿಂತನೆ ನಡೆಸಲಾಗಿದೆ.

    ಪ್ಯಾಕೇಜ್ 2ರ ಕಾಮಗಾರಿ ಪ್ರಗತಿಯಲ್ಲಿದ್ದು ಬಹುತೇಕ ಮುಕ್ತಾಯ ಹಂತ ತಲುಪಿದೆ. ಆದರೆ ಈ ಯೋಜನೆ ಹೊಸದಾಗಿ ಟೆಂಡರ್ ಕರೆದಿರುವ ಹಿನ್ನೆಲೆಯಲ್ಲಿ ಸೆಪ್ಟ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts