More

    ಮರವಂತೆಗೆ ಬೇಕಿದೆ ಪ್ರವಾಸಿಮಿತ್ರ

    ಗಂಗೊಳ್ಳಿ: ತ್ರಾಸಿ-ಮರವಂತೆ ಬೀಚ್‌ಗೆ ದೂರದ ಊರುಗಳಿಂದ ಪ್ರತಿ ನಿತ್ಯ ಸಾವಿರಾರು ಮಂದಿ ಬರುತ್ತಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ಅಲೆಗಳ ಅಬ್ಬರ ಹೆಚ್ಚುತ್ತಿದ್ದು, ಇದರ ಮಧ್ಯೆಯೂ ಪ್ರವಾಸಿಗರು ಅಪಾಯಕಾರಿ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆಯುವುದು, ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಮಕ್ಕಳು, ಮಹಿಳೆಯರ ಸಹಿತ ಅನೇಕರು ತಡೆಗೋಡೆಯಲ್ಲಿ, ನೀರಿಗಿಳಿದು ವಿಹರಿಸುತ್ತಿರುವುದು ಕಂಡು ಬಂದಿದೆ.

    ಲಾಕ್‌ಡೌನ್ ತೆರವಾದ ಬಳಿಕ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ತ್ರಾಸಿ- ಮರವಂತೆ ಚತುಷ್ಪಥ ಹೆದ್ದಾರಿಯುದ್ದಕ್ಕೂ ನಿರ್ಮಿಸಿದ ತಡೆಗೋಡೆಗೆ ಅಲೆಗಳು ಅಪ್ಪಳಿಸುತ್ತಿರುವ ದೃಶ್ಯ ಕಣ್ತುಂಬಲು ಪ್ರವಾಸಿಗರು ಮುಗಿ ಬೀಳುವುದು ಭೀತಿ ಹುಟ್ಟಿಸುವಂತಿದೆ. ಕಡಲ್ಕೊರೆತ ತಡೆಗೆ ಹಾಕಿದ ಕಲ್ಲು, ಬಂಡೆಗಳ ತುದಿಯವರೆಗೆ ಹೋಗಿ ಭಾರಿ ಅಲೆಗಳು ಅಪ್ಪಳಿಸುವ ಸನಿಹದಲ್ಲೇ ಫೋಟೋ ತೆಗೆಯುವುದು, ಸಮುದ್ರಕ್ಕೆ ಇಳಿಯುವುದು ಮಾಡುತ್ತಿದ್ದಾರೆ. ಇಲ್ಲಿನ ಕಡಲ ತೀರದಲ್ಲಿ ಸುರಕ್ಷತೆ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಗೃಹರಕ್ಷಕ ದಳ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಪ್ರವಾಸಿಗರ ದಂಡು
    ಮರವಂತೆಗೆ ಸೋಮವಾರ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಕರಾವಳಿಯ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಬಂದ ಉತ್ತರ ಕರ್ನಾಟಕ ಭಾಗದವರು ವಾಪಾಸು ತೆರಳುವಾಗ ಹೆದ್ದಾರಿಯಲ್ಲೇ ಇರುವ ಮರವಂತೆ ಕಡಲ ಕಿನಾರೆಯ ಸೊಬಗನ್ನು ಸವಿದು ತೆರಳುತ್ತಿದ್ದಾರೆ.

    ಅಪಾಯಕಾರಿ ಅಲೆಗಳು
    ಪ್ರವಾಸಿಗರು ಸ್ನೇಹಿತರು, ಸಂಬಂಧಿಕರೊಂದಿಗೆ ಮೈಮರೆತು ಅಪಾಯವನ್ನು ಲೆಕ್ಕಿಸದೆ ನೀರಿಗಿಳಿಯುತ್ತಿದ್ದು, ಇಲ್ಲಿ ಯಾರೂ ಕೂಡ ಕೇಳುವವರೇ ಇಲ್ಲದಂತಾಗಿದೆ. ದಡದಿಂದ 90 ಮೀ. ಉದ್ದಕ್ಕಿರುವ ತಡೆಗೋಡೆ ಮೇಲೆ ನಿಲ್ಲುವುದು, ಸ್ನಾನ ಮಾಡುವುದು ಹಾಗೂ ಫೋಟೋ ತೆಗೆದುಕೊಳ್ಳುವುದು ಅಪಾಯಕಾರಿ. ಆದ್ದರಿಂದ ಪ್ರವಾಸಿಗರಿಗೆ ಎಚ್ಚರಿಕೆ ನೀಡಲು ಶೀಘ್ರ ಪ್ರವಾಸಿಮಿತ್ರರನ್ನು ನೇಮಿಸಬೇಕಿದೆ. ಮಳೆಗಾಲದಲ್ಲಿ ಸಮುದ್ರದ ಅಲೆಗಳು ಅತ್ಯಂತ ಅಪಾಯಕಾರಿಯಾಗಿದ್ದು, ಇದರ ಅಬ್ಬರವನ್ನು ಅಂದಾಜಿಸುವುದು ಕೂಡ ಕಷ್ಟ.

    ತ್ರಾಸಿ-ಮರವಂತೆ ಕಡಲ ತೀರದಲ್ಲಿ ಅಪಾಯಕಾರಿ ಸ್ಥಳದಲ್ಲಿ ನಿಂತು ಪ್ರವಾಸಿಗರ ಸೆಲ್ಫಿ ತೆಗೆಯುವುದು, ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಮಕ್ಕಳು, ಮಹಿಳೆಯರ ಸಹಿತ ಅನೇಕರು ತಡೆಗೋಡೆಯಲ್ಲಿ ನಿಲ್ಲುತ್ತಿರುವುದು ಹಾಗೂ ನೀರಿಗಿಳಿದು ವಿಹರಿಸುತ್ತಿರುವವರಿಗೆ ಎಚ್ಚರಿಕೆ ನೀಡಲಾಗಿದೆ. ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಬೀಟ್ ಪೊಲೀಸರು ಕೂಡ ಗಸ್ತು ತಿರುಗಿ ಪ್ರವಾಸಿಗರನ್ನು ನಿಯಂತ್ರಿಸುವ, ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
    ನಂಜಾ ನಾಯ್ಕ, ಉಪನಿರೀಕ್ಷಕರು, ಗಂಗೊಳ್ಳಿ ಪೊಲೀಸ್ ಠಾಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts