More

    ಮಕ್ಕಳಿಗೆ ಅಕ್ಷರ ಜತೆ ಸಂಸ್ಕಾರ ಅತ್ಯಗತ್ಯ

    ಐಮಂಗಲ: ಶಾಲೆಗಳಲ್ಲಿ ಮಕ್ಕಳಿಗೆ ಅಕ್ಷರ ಜತೆ ಸಂಸ್ಕಾರ ನೀಡುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಅಭಿಪ್ರಾಯಪಟ್ಟರು.

    ಮರಡಿಹಳ್ಳಿ ಗ್ರಾಮದ ಸರ್ಕಾರಿ ಪಾಠ ಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸರ್ಕಾರಿ ಮಾಧ್ಯಮಿಕ ಶಾಲೆಯ ಶತಮಾನೋತ್ಸವ ಮತ್ತು ಪ್ರೌಢಶಾಲೆಯ ಅಮೃತ ಮಹೋತ್ಸವ ಸಮಾರೋಪದಲ್ಲಿ ಮಾತನಾಡಿದರು.

    ಅಕ್ಷರ ಕಲಿಸಲು, ಪಠ್ಯ ಬೋಧಿಸಲು ಸಾಕಷ್ಟು ಶಾಲೆಗಳು ಇವೆ. ಆದರೆ, ವಿದ್ಯೆಯೊಂದಿಗೆ ಸಂಸ್ಕಾರ ಮತ್ತು ಜೀವನಕ್ಕೆ ಅಗತ್ಯ ಜ್ಞಾನ ನೀಡುವುದು ಅಗತ್ಯವಿದೆ ಎಂದರು.

    ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಭಾರತೀಯರಿಗೆ ವಿದ್ಯಾಭ್ಯಾಸ ಕೊಡುವ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರಲಿಲ್ಲ. ಶಿಕ್ಷಣ ಪಡೆಯಲು ಬಯಸಿದ್ದವರಿಗೆ ಶಾಲೆಗಳು ಲಭ್ಯ ಇರುತ್ತಿರಲಿಲ್ಲ. ಆಗ ಮರಡಿಹಳ್ಳಿ ಗ್ರಾಮದ ಹಿರಿಯರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಛಲದಿಂದ 1901ರಲ್ಲಿ ಪ್ರಾಥಮಿಕ ಶಾಲೆ ಮತ್ತು 1920ರಲ್ಲಿ ಮಾಧ್ಯಮಿಕ ಶಾಲೆ ತೆರೆದಿರುವುದು ಸ್ಮರಣೀಯ ಎಂದು ಹೇಳಿದರು.

    ಈ ಶಾಲೆಯಲ್ಲಿ ಸಾವಿರಾರು ಮಂದಿ ಅಕ್ಷರ ಕಲಿತು ಜೀವನ ಸಾರ್ಥಕ ಮಾಡಿಕೊಂಡಿದ್ದಾರೆ. ಬೇರೆ ಊರುಗಳಿಂದ ಈ ಶಾಲೆಗೆ ಬರುತ್ತಿದ್ದ ಮಕ್ಕಳಿಗೆ ಗ್ರಾಮಸ್ಥರು ಊಟದ ವ್ಯವಸ್ಥೆ ಮಾಡುತ್ತಿದ್ದ ವಿಷಯ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದ ಅವರು, ಕೊಠಡಿ ನಿರ್ಮಾಣಕ್ಕಾಗಿ 10 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

    ಮಾಜಿ ಸಚಿವ ಎಚ್.ಏಕಾಂತಯ್ಯ ಮಾತನಾಡಿ, ಮಾಧ್ಯಮಿಕ ಶಾಲೆಗಳೆಂದರೆ ಏನೆಂಬ ತಿಳಿವಳಿಕೆ ಇಲ್ಲದ ಸಂದರ್ಭದಲ್ಲಿ ಹಿರಿಯೂರು ತಾಲೂಕಿನಲ್ಲಿ ಮೂರು ಮಾಧ್ಯಮಿಕ ಶಾಲೆಗಳು ಆರಂಭಗೊಂಡವು. ಅದರಲ್ಲಿ ಮರಡಿಹಳ್ಳಿ ಶಾಲೆಯೂ ಒಂದು ಎಂದರು.

    ಈ ಶಾಲೆಯಲ್ಲಿ ವಿದ್ಯೆ ಜಗತೆಗೆ ಜೀವನದ ಜ್ಞಾನವು ದೊರೆಯುತ್ತಿದೆ. ಹಿರಿಯ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಜನರು ಪ್ರಜ್ಞಾವಂತರಿರುವ ಫಲವಾಗಿ ಕಲಿಕೆಯಲ್ಲಿ ನಿರೀಕ್ಷೆಗೂ ಮೀರಿದ ಗುಣಮಟ್ಟ ಕಾಣುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಊಹೆಗೂ ಮೀರಿ ಪ್ರತಿಭಾವಂತರು, ಸಾಧಕರು ಈ ಶಾಲೆಯಿಂದ ಹೊರಹೊಮ್ಮಲಿದ್ದಾರೆ ಎಂದರು.

    ಬೆಳಗ್ಗೆ ಪಶುಸಂಗೋಪನೆ, ಕೃಷಿ, ಪೌಷ್ಟಿಕ ಆಹಾರ, ಜಾನುವಾರುಗಳಲ್ಲಿ ಬರುವ ಸಾಂಕ್ರಾಮಿಕ ರೋಗಗಳು ಮತ್ತು ಅಂಟುರೋಗಗಳು ಕುರಿತು ವಿಚಾರಗೋಷ್ಠಿ ನಡೆಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು.

    ಶತಮಾನೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ 10ನೇ ತರಗತಿಯ ಶುಭಾ (ಪ್ರಥಮ), ಕೆ.ವಿ.ಲಕ್ಷ್ಮಿ (ದ್ವಿತೀಯ), ತೃತೀಯ ಸ್ಥಾನ ಗಳಿಸಿದ 9ನೇ ತರಗತಿಯ ಆರ್.ಮೇಘನಾ ಇತರರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಪಿ.ಟಿ.ಚಂದ್ರಹಾಸ್, ಡಾ.ಎಂ.ಆರ್.ಹನುಮಂತಪ್ಪ, ಪ್ರೊ.ಜಿ.ಶರಣಪ್ಪ, ಡಾ.ಜಯಪ್ರಕಾಶ್, ಪ್ರೊ.ಶರಣಪ್ಪ, ಮೈಲಾರಸ್ವಾಮಿ, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಶಿಕ್ಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

    ನನ್ನ ತಂದೆ ಮುಖ್ಯಶಿಕ್ಷಕರಾಗಿದ್ದ ಶಾಲೆ ಶತಮಾನೋತ್ಸವ ಸಂಭ್ರಮವನ್ನು ಕಂಡು ಸಂತಸವಾಗುತ್ತಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಪಡೆಯುವ ವಿದ್ಯಾರ್ಥಿಗೆ ಚಿನ್ನದ ಪದಕ ವಿತರಿಸುತ್ತೇನೆ. ಈ ಶಾಲೆ ದೇಶದ ಕೀರ್ತಿಯನ್ನು ಎತ್ತಿ ಹಿಡಿಯುವಂತೆ ಉನ್ನತಿ ಸಾಧಿಸಬೇಕೆಂಬುದು ನನ್ನ ಆಶಯ.
    ಪ್ರೊ.ರವಿವರ್ಮಕುಮಾರ್, ಹಿರಿಯ ವಕೀಲ, ಬೆಂಗಳೂರು

    ಈಗಿನ ಶಿಕ್ಷಣ ವ್ಯವಸ್ಥೆ ದುಬಾರಿಯಾಗಿದೆ. ಆದ್ದರಿಂದ ಸರ್ಕಾರಿ ಶಾಲೆಗಳತ್ತ ಪಾಲಕರು, ವಿದ್ಯಾರ್ಥಿಗಳು ಬರುವ ರೀತಿ ವ್ಯವಸ್ಥೆ ಸುಧಾರಿಸಬೇಕು. ಜತೆಗೆ ಶಿಕ್ಷಕರು ಬದ್ಧತೆ ಪ್ರದರ್ಶಿಸಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಸರ್ಕಾರ ಇಚ್ಛಾಶಕ್ತಿ ತೋರಬೇಕು.

    ಡಿ.ಸುಧಾಕರ್ ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts