More

    ಪಪಂ ಸ್ಥಾನ ಸಿಕ್ಕರೂ ತಪ್ಪದ ತಾಪತ್ರಯ!

    ಚಿದಾನಂದ ಮಾಣೆ ರಟ್ಟಿಹಳ್ಳಿ

    ಹದಗೆಟ್ಟು ಹೋಗಿರುವ ರಸ್ತೆಗಳು, ದುರ್ವಾಸನೆ ಬೀರುತ್ತಿರುವ ಗಟಾರಗಳು, ಪಟ್ಟಣಕ್ಕೆ ಸ್ವಾಗತಿಸುವ ಕಸದ ರಾಸಿಗಳು, ಖಾಯಂ ಅಧಿಕಾರಿಗಳ ಕೊರತೆ, ಸಿಬ್ಬಂದಿ ವೇತನ ವಿಳಂಬ… ಇದು ನೂತನ ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳ ಸರಮಾಲೆ.

    4 ತಿಂಗಳ ಹಿಂದೆ ರಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಸರ್ಕಾರ ನೂತನ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿದೆ. ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಅನುದಾನ ಬಾರದ ಕಾರಣ ಅಭಿವೃದ್ಧಿ ಕುಂಠಿತಗೊಂಡಿದೆ. ಸ್ಥಳೀಯ ನಿವಾಸಿಗಳು ಮೂಲಸೌಕರ್ಯಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದು, ಪಟ್ಟಣ ಪಂಚಾಯಿತಿಗೆ ಅಲೆದು ಬೇತ್ತತ್ತು ಹೋಗಿದ್ದಾರೆ.

    ಹದಗೆಟ್ಟ ರಸ್ತೆಗಳು: ಪಟ್ಟಣ ಪಂಚಾಯಿತಿ ಅನುದಾನ ಕೊರತೆಯಿಂದಾಗಿ ರಸ್ತೆಗಳ ಕಾಮಗಾರಿ ನಡೆಯುತ್ತಿಲ್ಲ. ಪಟ್ಟಣದ ಹೊಸಪೇಟೆ ಈಶ್ವರ ದೇವಸ್ಥಾನ, ಕುರಬಗೇರಿ, ಕುಮಾರೇಶ್ವರ ಶಾಲೆಯ ರಸ್ತೆ, ತಾ.ಪಂ. ಕಚೇರಿ ಎದುರಿನ ಕಡ್ಕೋಳರ ಓಣಿ, ತರಳಬಾಳು ಬಡವಾಣೆ ಸೇರಿ ವಿವಿಧೆಡೆ ರಸ್ತೆಗಳು ಹದಗೆಟ್ಟು ಹೋಗಿವೆ. ಈಶ್ವರ ದೇವಸ್ಥಾನದ ರಸ್ತೆಯನ್ನು ಸುವರ್ಣ ಗ್ರಾಮ ಯೋಜನೆಯಡಿ 2008ರಲ್ಲಿ ಕಾಂಕ್ರೀಟೀಕರಣಗೊಳಿಸಲಾಗಿತ್ತು. ಸದ್ಯ ರಸ್ತೆ ಹದಗೆಟ್ಟುಹೋಗಿದ್ದು, ದುರಸ್ತಿ ಕಾರ್ಯ ನಡೆದಿಲ್ಲ. ಹೀಗಾಗಿ ಮುಖ್ಯ ರಸ್ತೆಯಲ್ಲಿ ವಾಹನ ಸವಾರರು ಮತ್ತು ಪಾದಚಾರಿಗಳು ಬಿದ್ದು ಏಳುವುದು ಸಾಮಾನ್ಯವಾಗಿದೆ. ಈ ರಸ್ತೆಗಳನ್ನು ಅಭಿವೃದ್ಧಿಪಡಿ ಸುವಂತೆ ಸ್ಥಳೀಯ ನಿವಾಸಿಗಳು ಹಲವಾರು ಬಾರಿ ಪಟ್ಟಣ ಪಂಚಾ ಯಿತಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

    ಊರಿಗೆ ಸ್ವಾಗತಿಸುವ ತಿಪ್ಪೆಗಳು: ಪಟ್ಟಣದ ರಾಣೆಬೆನ್ನೂರ ರಸ್ತೆಯ ಬೇಡರ ಕಣಪ್ಪ ದೇವಸ್ಥಾನದ ಬಳಿ ಗಟಾರ ನಿರ್ಮಾಣ ಕಾರ್ಯ ಅರ್ಧಕ್ಕೇ ನಿಲ್ಲಿಸಿರುವುದರಿಂದ ಕೊಳಕು ನೀರು ನಿಂತಲ್ಲಿಯೇ ನಿಂತು ದುರ್ವಾಸನೆ ಬೀರುತ್ತಿದೆ. ಸ್ಥಳೀಯ ನಿವಾಸಿ ಇರಬಸಪ್ಪ ಅಡ್ಮನಿ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ. ಪಟ್ಟಣದ ಸರ್ಕಾರಿ ಆಸ್ಪತ್ರೆಯ ಬಳಿ ಕಿಚಡೇರ ಮನೆ ವಟಾರ, ಕುರಬಗೇರಿ ಹಿಂಭಾಗ ಓಣಿ, ಈಶ್ವರ ದೇವಸ್ಥಾನದ ರಸ್ತೆಯಲ್ಲಿ ಕುಡಿಯುವ ನೀರಿಗೆ ಕಲುಷಿತ ನೀರು ಸೇರುತ್ತಿದೆ. ಪಟ್ಟಣಕ್ಕೆ ಪ್ರವೇಶಿಸುವ ಎಲ್ಲ ದಿಕ್ಕುಗಳ ರಸ್ತೆಯ ದ್ವಾರದಲ್ಲಿ ವಿಪರೀತವಾಗಿ ತ್ಯಾಜ್ಯ ಕಾಣಬಹುದು. ತ್ಯಾಜ್ಯ ವಿಲೇವಾರಿ ಘಟಕ ಇರದ ಕಾರಣ ಪಟ್ಟಣದ ರಾಣೆಬೆನ್ನೂರು ರಸ್ತೆ, ಚಿಕ್ಕಯಡಚಿ, ರಸ್ತೆ, ಕುಮದ್ವತಿ ನದಿ, ಮಳಗಿ ರಸ್ತೆ, ತರಳಬಾಳು ಶಾಲೆಯ ಸ್ವಲ್ಪ ಮುಂಭಾಗದ ಹಿರೇಕೆರೂರು ರಸ್ತೆ, ಮಾಸೂರು ರಸ್ತೆ ಹೀಗೆ ವಿವಿಧೆಡೆ ಕಸದ ತಿಪ್ಪೆಗಳು ಎಲ್ಲರನ್ನೂ ಸ್ವಾಗತಿಸುತ್ತಿವೆ.

    ಪ್ರಭಾರಿ ಅಧಿಕಾರಿಗಳ ನೇಮಕ: ಪ್ರಸ್ತುತ ಪಟ್ಟಣ ಪಂಚಾಯಿತಿಗೆ ಹಿರೇಕೆರೂರ ಪಟ್ಟಣ ಪಂಚಾಯಿತಿಗೆ ತಾತ್ಕಾಲಿಕವಾಗಿ ಪ್ರಾಭಾರಿ ಮುಖ್ಯಾಧಿಕಾರಿಯನ್ನು ನೇಮಿಸಲಾಗಿದೆ. ದೊಡ್ಡದಾದ ರಟ್ಟಿಹಳ್ಳಿ ನೂತನ ಪಟ್ಟಣ ಪಂಚಾಯಿತಿಗೆ ಖಾಯಂ ಅಧಿಕಾರಿಯ ಅವಶ್ಯಕತೆ ಇದೆ. ಪ್ರಸ್ತುತ ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾರ್ವಿುಕರು, ಪ.ಪಂ. ಸಿಬ್ಬಂದಿ ಹೀಗೆ ಒಟ್ಟು 35 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ 4 ತಿಂಗಳಿನಿಂದ ಈ ಸಿಬ್ಬಂದಿಗೆ ವೇತನ ಬಂದಿಲ್ಲ. ಕೋವಿಡ್-19 ಲಾಕ್​ಡೌನ್ ಸಂದರ್ಭದಲ್ಲಿ ಸಿಬ್ಬಂದಿ ಜೀವನ ನಿರ್ವಹಣೆ ತೀರಾ ಕಷ್ಟಕರವಾಗಿತ್ತು.

    ರಸ್ತೆಗಳು ಹದಗೆಟ್ಟು ಹೋಗಿವೆ. ಪಟ್ಟಣದ ಕೆಲವೆಡೆ ರಸ್ತೆಗಳ ಅಭಿವೃದ್ಧಿ ಸೇರಿ ಮೂಲಸೌಕರ್ಯಗಳಿಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಆದ್ಯತೆ ನೀಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

    | ಲಿಂಗರಾಜ ವಾಲಿ ಸ್ಥಳೀಯ ನಿವಾಸಿ

    ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಸರ್ಕಾರದಿಂದ ಯಾವುದೇ ಅನುದಾನ ದೊರೆತಿಲ್ಲ. ಇಲ್ಲಿನ ಮೂಲಸೌಕರ್ಯಗಳ ಸಮಸ್ಯೆಗಳ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ಸದ್ಯ ನೂತನ ಪಟ್ಟಣ ಪಂಚಾಯಿತಿಗೆ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್​ಗಳ ವಿಂಗಡಣೆ ಕಾರ್ಯ ಮಾಡಲಾಗುತ್ತಿದೆ. ಸರ್ಕಾರದಿಂದ ಅನುದಾನ ಬಂದ ಮೇಲೆ ಟೆಂಡರ್ ಪ್ರಕ್ರಿಯೆ ಮುಗಿಸಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಪಟ್ಟಣ ಪಂಚಾಯಿತಿ ಸಿಬ್ಬಂದಿ ಬಾಕಿ ವೇತನಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಕೋವಿಡ್-19 ಕರೊನಾ ವೈರಸ್ ಹಾವಳಿಯಿಂದಾಗಿ ವಿಳಂಭವಾಗುತ್ತಿದೆ.

    | ರಾಜಾರಾಂ ಪವಾರ

    ರಟ್ಟಿಹಳ್ಳಿ ಪಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts