More

    ವಸತಿ ನಿಲಯಕ್ಕೆ ತಡೆಗೋಡೆ ನಿರ್ಮಿಸಿ; ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಸೂಚನೆ

    ಮಾನ್ವಿ ತಾಪಂ ಕೆಡಿಪಿ ಸಭೆ

    ಮಾನ್ವಿ: ಪಟ್ಟಣ ಹೊರವಲಯದ ನಂದಿಹಾಳ ಹಳ್ಳದ ಬಳಿ ನಿರ್ಮಿಸಿರುವ ಬಿಸಿಎಂ ವಸತಿ ನಿಲಯಕ್ಕೆ ತಡೆಗೋಡೆ ನಿರ್ಮಿಸಿ, ನೀರು ಒಳ ಬರುವುದನ್ನು ತಡೆಯಿರಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿ ಉಪ್ಪಾರ್‌ಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಸೂಚಿಸಿದರು.

    ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಳ್ಳದ ಸಮೀಪ ವಸತಿ ನಿಲಯ ನಿರ್ಮಿಸಿದ್ದರಿಂದ ನಿಲಯದೊಳಗೆ ನೀರು ನುಗ್ಗಲಿದೆ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ಶೀಘ್ರ ತಡೆಗೋಡೆ ನಿರ್ಮಿಸಬೇಕು. ಇಲ್ಲದಿದ್ದರೆ ಕಟ್ಟಡಕ್ಕೆ ಬಿಡುಗಡೆಯಾದ 3 ಕೋಟಿ ರೂ. ಅನುದಾನವನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿ ಉಪ್ಪಾರ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಮಾನಪ್ಪ ಬಡಿಗೇರ ಪ್ರತಿಕ್ರಿಯಿಸಿ, ತಡೆಗೋಡೆ ನಿರ್ಮಾಣ ಕುರಿತು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು. ವಸತಿ ನಿಲಯಕ್ಕೆ ಹೋಗಲು ಸೂಕ್ತ ರಸ್ತೆಯಿಲ್ಲ. ಸಂಬಂಧಪಟ್ಟ ಇಂಜಿನಿಯರ್‌ರಿಂದ ಅಂದಾಜು ಪಟ್ಟಿ ಸಿದ್ಧಪಡಿಸಿಕೊಟ್ಟರೆ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು. ಮುಂಗಾರು ಮಳೆ ಉತ್ತಮವಾಗಿದ್ದು, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಕ್ಕೆ ತೊಂದರೆ ಆಗದಂತೆ ಕ್ರಮ ವಹಿಸಬೇಕು ಎಂದು ಕೃಷಿ ಅಧಿಕಾರಿ ಹುಸೇನ್‌ಬಾಷಾಗೆ ಶಾಸಕರು ಸೂಚಿಸಿದರು.

    ಸಿಡಿಪಿಒ ಸುಭದ್ರಾದೇವಿ, ತಾಲೂಕಿನಲ್ಲಿ ಸ್ತ್ರೀಶಕ್ತಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ರೂ. ಹಣ ಬಂದಿದ್ದು, ಸೂಕ್ತ ಸ್ಥಳ ಸಿಗುತ್ತಿಲ್ಲ ಎಂದು ಸಭೆ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸ್ತ್ರೀಶಕ್ತಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಪಟ್ಟಣದಲ್ಲಿ ಸಿಎ ಸೈಟ್ ನೋಡಿ ಕೊಡುವಂತೆ ಪುರಸಭೆ ಮುಖ್ಯಾಧಿಕಾರಿ ಜಗದೀಶ್‌ಗೆ ಸೂಚಿಸಿದರು. ಕೇವಲ 10 ಲಕ್ಷ ರೂ.ದಿಂದ ಕಟ್ಟಡ ನಿರ್ಮಾಣ ಅಸಾಧ್ಯ. ಸಿಂಧನೂರಿನಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ನಮ್ಮಲ್ಲೂ ಹಾಗೆಯೇ ಆಗಬೇಕು. ಅಂದಾಜು ಪಟ್ಟಿ ಸಿದ್ಧಪಡಿಸಿ. ನಾನು ಶಾಸಕರ ಅನುದಾನದಡಿ ಹೆಚ್ಚುವರಿ ಹಣ ನೀಡುವೆ ಎಂದರು.

    ಆರೋಗ್ಯ ಇಲಾಖೆಗೆ ಎರಡು ಆಂಬುಲೆನ್ಸ್ ಖರೀದಿಸಲು ಶಾಸಕರ ಅನುದಾನದಲ್ಲಿ 50 ಲಕ್ಷ ರೂ. ನೀಡಿದ್ದರೂ ಈವರೆಗೆ ಯಾಕೆ ಕೊಂಡುಕೊಂಡಿಲ್ಲ. ಕೂಡಲೇ ಸಿರವಾರ ಮತ್ತು ಮಾನ್ವಿ ಆಸ್ಪತ್ರೆಗೆ ಆಂಬುಲೆನ್ಸ್ ವ್ಯವಸ್ಥೆಯಾಗಬೇಕು. ಕಲ್ಲೂರು ಆಸ್ಪತ್ರೆಗೆ ಒಂದು ವಾರದಲ್ಲಿ ಒಬ್ಬ ಎಂಬಿಬಿಎಸ್ ವೈದ್ಯರನ್ನು ನೇಮಿಸಲು ತಾಲೂಕು ವೈದ್ಯಾಧಿಕಾರಿ ಚಂದ್ರಶೇಖರಯ್ಯ ಅವರಿಗೆ ಗಡುವು ನೀಡಿದರು.

    ಸಭೆಯಲ್ಲಿ ವಿವಿಧ ಅಧಿಕಾರಿಗಳು ಇಲಾಖೆ ವರದಿಗಳನ್ನು ಒಪ್ಪಿಸಿದರು. ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ತಾಪಂ ಇಒ ಸ್ಟೆಲ್ಲಾ ವರ್ಗೀಸ್, ಸಿರವಾರ ಇಒ ಉಮೇಶ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts