More

    ಮಣೂರು ಪಡುಕರೆ ಶಾಲೆಗೆ ಡಿಸಿ ಭೇಟಿ

    ಕೋಟ: ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಏನಾಗ ಬಯಸುತ್ತಾರೋ, ಆ ಗುರಿಯನ್ನು ಸಾಧಿಸಲು ಈಗಿನಿಂದಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
    ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಂದ ಇತ್ತೀಚೆಗೆ ಉದ್ಘಾಟನೆಗೊಂಡ ಮಣೂರು ಪಡುಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಯೊಬ್ಬ ನಾನೂ ನಿಮ್ಮಂತೆ ಉನ್ನತ ಅಧಿಕಾರಿಯಾಗಬೇಕು ಎಂದಾಗ, ಉನ್ನತ ಹುದ್ದೆ ಪಡೆಯಲು ಶೈಕ್ಷಣಿಕ ಪರಿಶ್ರಮ, ಅಗತ್ಯ ಅದನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಶಾಲಾ ವಿನ್ಯಾಸ, ಕೈತೋಟ ಬಗ್ಗೆ ಶಿಕ್ಷಕರು, ಎಸ್.ಡಿ.ಎಂ.ಸಿ ಮುತುವರ್ಜಿಯನ್ನು ಶ್ಲಾಘಿಸಿದರು. ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಇಷ್ಟೊಂದು ವಿದ್ಯಾರ್ಥಿಗಳಿರುವುದನ್ನು ಕಂಡು ಖುಷಿಪಟ್ಟರು. ಶಾಲಾ ಕಟ್ಟಡದ ಮೇಲ್ಗಡೆ ನಿರ್ಮಿಸಿದ ಕೆ.ಸಿ. ಕುಂದರ್ ಹೆಸರಿನ ಸಭಾಂಗಣ ಕಂಡು ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳೊಂದಿಗೆ ಸ್ವಲ್ಪ ಹೊತ್ತು ಸಂವಾದ ನಡೆಸಿದರು. ಕರಾವಳಿ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಹಾಗೂ ಶಾಲೆಯ ಬಗ್ಗೆ ಇದ್ದ ಕಳಕಳಿ, ಕೆ.ಸಿ ಕುಂದರ್ ಅಂಥವರು ಆಯಾ ಊರುಗಳಲ್ಲಿದ್ದರೆ ಆ ಊರು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜಿಲ್ಲಾಧಿಕಾರಿ ಪ್ರಶಂಸಿದರು. ಶಾಲಾ ಅಮೃತೋತ್ಸವ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಜೈರಾಮ ಶೆಟ್ಟಿ, ಶಾಲಾ ಮುಖ್ಯಶಿಕ್ಷಕಿ ಜಯಂತಿ, ವಾಹಿನಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಎಚ್. ಕುಂದರ್, ಶಿಕ್ಷಕರಾದ ಪ್ರಕಾಶ್ ಜೋಗಿ, ಸ್ಪಂದನ ಫ್ರೆಂಡ್ಸ್ ಸದಸ್ಯರು, ಕೋಟ ನಾಡಕಚೇರಿ ಆರ್.ಐ. ರಾಜು, ಕೋಟ ವಿ.ಎ. ಚಲುವರಾಜು, ಸಹಾಯಕ ರಾಜು ಮರಕಾಲ ಮತ್ತಿತರರು ಉಪಸ್ಥಿತರಿದ್ದರು.

    ಗುತ್ತಿಗೆದಾರರಿಗೆ ತರಾಟೆ
    ಶಾಲೆಯ ಅಭಿವೃದ್ಧಿ ಕಾಮಗಾರಿಯಲ್ಲಿ ಎಲ್ಲೂ ಲೋಪವಾಗಬಾರದು. ಹೊಸದಾಗಿ ನಿರ್ಮಾಣಗೊಂಡ ಶಾಲಾ ಶೌಚಗೃಹದ ಬಾಗಿಲು, ಮೂತ್ರದೊಡ್ಡಿಯ ಪೈಪ್‌ಲೈನ್, ವಾಶ್ ಬೇಸಿನ್‌ಗಳನ್ನು ಒಳ್ಳೆಯ ಗುಣಮಟ್ಟದ್ದು ಹಾಕ್ರೀ… ಲೋ ಕ್ವಾಲಿಟಿ ಯಾಕ್ರೀ ಹಾಕಿದ್ದು ಎಂದು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಬದಲಾಯಿಸುವಂತೆ ಸೂಚಿಸಿದರು.

    ಪುಟಾಣಿಗಳೊಂದಿಗೆ ಬೆರೆತ ಡಿಸಿ
    ಶಾಲೆಯ ಪ್ರಾಂಗಣದ ಪಕ್ಕದಲ್ಲಿ ಅಂಗನವಾಡಿ ಕೇಂದ್ರವಿದ್ದು, ಅಲ್ಲಿಗೂ ಭೇಟಿ ನೀಡಿ ಪುಟಾಣಿ ಮಕ್ಕಳೊಂದಿಗೆ 15 ನಿಮಿಷ ಬೆರೆತು ಹರಟೆ, ಹಾಡು ಹೇಳಿಸಿಕೊಂಡರು. ಮಕ್ಕಳ ಅಕ್ಷರ ಜ್ಞಾನದ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts