More

    ಗುಂಡು ಹಾರಿಸಿದ್ದು ಎಎಪಿ ಕಾರ್ಯಕರ್ತ ಅಥವಾ ಶಹೀನ್​ ಬಾಗ್​ನವನೇ ಆಗಿರಬೇಕು: ಮನೋಜ್​ ತಿವಾರಿ ವ್ಯಂಗ್ಯ

    ನವದೆಹಲಿ: ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಸಿಎಎ ವಿರೋಧದ ಹೋರಾಟದಲ್ಲಿ ಯುವಕನೊಬ್ಬನಿಂದ ನಡೆದ ಗುಂಡಿನ ದಾಳಿ ರಾಜಕೀಯ ತಿರುವುಗಳನ್ನು ಪಡೆದುಕೊಂಡಿದೆ. ಈ ದುಷ್ಕೃತ್ಯದ ಹಿಂದೆ ಎಎಪಿ ಕೈವಾಡವಿರಬೇಕು ಅಥವಾ ಆತ ಶಹೀನ್​ ಬಾಗ್​ನಿಂದ ಬಂದವನೇ ಆಗಿರಬೇಕು ಎಂದು ಬಿಜೆಪಿ ನಾಯಕ ಮನೋಜ್​ ತಿವಾರಿ ವ್ಯಂಗ್ಯವಾಡಿದ್ದಾರೆ.

    ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟದಲ್ಲಿ ಏಕಾಏಕಿ ಯುವಕನೊಬ್ಬ ಬಂದೂಕಿನೊಂದಿಗೆ ನುಗ್ಗಿ ಗುಂಡನ್ನು ಹಾರಿಸಿದ್ದ. ಪೊಲೀಸರ ಸಮ್ಮುಖದಲ್ಲೇ ಈ ದುಷ್ಕೃತ್ಯ ನಡೆದಿದ್ದರಿಂದ ಇದರ ಹಿಂದೆ ಕೇಂದ್ರಾಡಳಿತ ಪಕ್ಷವಾದ ಬಿಜೆಪಿಯ ಕೈವಾಡವಿದೆ ಎಂದು ವಿರೋಧ ಪಕ್ಷದವರು ಆರೋಪ ನಡೆಸುತ್ತಿದ್ದರು. ಇದೀಗ ಬಿಜೆಪಿ ಈ ಆರೋಪವನ್ನು ತಳ್ಳಿ ಹಾಕಿದ್ದು, ಇದರಲ್ಲಿ ವಿರೋಧ ಪಕ್ಷದವರದ್ದೇ ಕೈವಾಡವಿದೆ ಎಂದು ಆರೋಪಿಸಿದೆ. ಈ ಕುರಿತಾಗಿ ಮಾತನಾಡಿರುವ ದೆಹಲಿಯ ಬಿಜೆಪಿ ಅಧ್ಯಕ್ಷ ಮನೋಜ್​ ತಿವಾರಿ, “ಆ ಯುವಕ ಎಎಪಿ ಕಾರ್ಯಕರ್ತ ಆಗಿರಬೇಕು ಅಥವಾ ಶಹೀನ್​ ಬಾಗ್​ನಿಂದ ಬಂದವನೇ ಆಗಿರಬೇಕು. ಸಿಎಎ ವಿರೋಧದ ಪ್ರತಿಭಟನೆಗೆ ವ್ಯಾಪಕ ಪ್ರತಿಕ್ರಿಯೆ ದೊರಕುತ್ತಿಲ್ಲ, ಅದಕ್ಕಾಗಿ ಅವರು ಈ ರೀತಿಯ ತಂತ್ರಗಳನ್ನು ಮಾಡುತ್ತಿದ್ದಾರೆ.” ಎಂದು ಮಾಧ್ಯಮದೆದುರು ದೂರಿದ್ದಾರೆ.

    ಗುಂಡಿನ ದಾಳಿ ನಡೆಸಿರುವ ಯುವಕನನ್ನು ಪೊಲೀಸರು ನ್ಯಾಯಾಂಗ ಬಂಧನದಲ್ಲಿರಿಸಿದ್ದು ವಿಚಾರಣೆ ನಡೆಸಲಾಗುತ್ತಿದೆ. ಯುವಕನ ಫೇಸ್​ಬುಕ್​ ಖಾತೆಯನ್ನು ನೋಡಿದಾಗ ಮೇಲ್ನೋಟಕ್ಕೆ ಯುವಕ ಬಲ ಪಂಥದ ಬೆಂಬಲಿಗನಂತೆ ಕಂಡು ಬಂದಿದ್ದಾನೆ. ಯುವಕನ ಫೇಸ್​ಬುಕ್​ ಪ್ರೊಫೈಲ್​ ಫೋಟೋದಲ್ಲಿ ಬಿಜೆಪಿಯ ಸ್ಕಾರ್ಫ್​ ಹಾಕಿಕೊಂಡಿರುವುದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts