More

    ಮಣಿಪಾಲ-ಉಡುಪಿ ನಡುವೆ ಸೈಕಲ್ ಪಥ

    ಉಡುಪಿ: ಸಂಚಾರ ದಟ್ಟಣೆ ನಿಯಂತ್ರಿಸಲು, ಪರಿಸರಕ್ಕೆ ಪೂರಕವಾಗಿ ಸೈಕಲ್ ಬಳಕೆ ಉತ್ತೇಜಿಸಲು ಮಣಿಪಾಲ-ಉಡುಪಿ ಪ್ರತ್ಯೇಕ ಸೈಕಲ್ ಟ್ರಾೃಕ್ ನಿರ್ಮಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ನಗರದಲ್ಲಿ ವಾಹನ ದಟ್ಟಣೆ ತಗ್ಗಿಸಲು, ಪರಿಸರ ಸಂರಕ್ಷಣೆ ಉದ್ದೇಶದಿಂದ ಸೈಕಲ್ ಬಳಕೆಗೆ ಒತ್ತು ನೀಡುವ ಆಶಯವನ್ನು ಜಿಲ್ಲಾಡಳಿತ ಹೊಂದಿದೆ. ನಗರದಲ್ಲಿ ಸಂಚಾರ ದಟ್ಟಣೆ ದಿನೇದಿನೆ ಹೆಚ್ಚಳವಾಗುತ್ತಿದೆ. ವಾಹನಗಳು ವೇಗವಾಗಿ ಚಲಿಸುವ ರಸ್ತೆಗಳಲ್ಲಿ ಸೈಕಲ್ ಸವಾರರು ಸುಲಭವಾಗಿ ಹೋಗಲು ಸಾಧ್ಯವಿಲ್ಲ. ಇದಕ್ಕಾಗಿ ರಸ್ತೆ ಬದಿಯಲ್ಲಿ ಪಾದಚಾರಿ ಮಾರ್ಗದ ಮಾದರಿಯಲ್ಲೇ ಸೈಕಲ್ ಪಥ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಪರ್ಕಳ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 169ಎ ಕಾಮಗಾರಿ ಪ್ರಗತಿಯಲ್ಲಿದ್ದು, ಕಲ್ಸಂಕದಿಂದ ಮಣಿಪಾಲದವರೆಗೆ ಚತುಷ್ಪಥ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಈ ಪ್ರದೇಶದಲ್ಲಿ ಚರಂಡಿ, ಫುಟ್‌ಪಾತ್ ನಿರ್ಮಾಣ ಕಾಮಗಾರಿ ಬಾಕಿ ಇದೆ. ರಸ್ತೆ ಮತ್ತು ಚರಂಡಿ, ಫುಟ್‌ಪಾತ್ ನಡುವೆ 2 ಮೀಟರ್‌ನಿಂದ 4 ಮೀ.ಜಾಗವಿದ್ದು, ಇಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಿಸುವ ಬಗ್ಗೆ ಯೋಚಿಸಲಾಗಿದೆ. ಮೂಲ ಯೋಜನೆಯಲ್ಲಿ ಸೈಕಲ್ ಟ್ರ್ಯಾಕ್ ಚಿಂತನೆ ಇರಲಿಲ್ಲ. ಕಾಂಕ್ರೀಟ್ ರಸ್ತೆ ಮತ್ತು ಚರಂಡಿ-ಫುಟ್‌ಪಾತ್ ಮಧ್ಯೆ ನಡುವಿನ ಜಾಗದಲ್ಲಿ ಇಂಟರ್‌ಲಾಕ್ ಅಳವಡಿಸುತ್ತೇವೆ. ಅದನ್ನು ಸೈಕಲ್ ಟ್ರ್ಯಾಕ್‌ಗಾಗಿ ಬಳಸಬಹುದು ಅಥವಾ ಪಾರ್ಕಿಂಗ್‌ಗೂ ಉಪಯೋಗಿಸಬಹುದು ಎಂದು ಹೆದ್ದಾರಿ ಇಂಜಿನಿಯರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

    ಹೆದ್ದಾರಿ ಕಾಮಗಾರಿ ಪ್ರಯೋಜನ: ಸ್ಮಾರ್ಟ್ ಸಿಟಿ ಕಲ್ಪನೆಯಲ್ಲಿ ಉಡುಪಿ ಮತ್ತು ಮಣಿಪಾಲ ಮಧ್ಯೆ ಆರೇಳು ಕಿ.ಮೀ. ಉದ್ದದ ಪ್ರತ್ಯೇಕ ಪಥ ನಿರ್ಮಿಸುವ ಬಗ್ಗೆ ಖಾಸಗಿ ಸಂಸ್ಥೆಯೊಂದು ವಿಸ್ತೃತ ವರದಿಯೊಂದು ತಯಾರಿಸಿದೆ. ಮಲ್ಪೆ-ಉಡುಪಿ-ಮಣಿಪಾಲ ಸ್ಮಾರ್ಟ್‌ಸಿಟಿ ನಿರ್ಮಾಣ ವ್ಯಾಪ್ತಿಯಲ್ಲಿದೆ. ಈ ಕಲ್ಪನೆಯಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣಕ್ಕೆ ಪ್ರಮುಖ ಆದ್ಯತೆ ನೀಡಲಾಗಿದ್ದು, ಪ್ರಸ್ತುತ ಹೆದ್ದಾರಿ ಕಾಮಗಾರಿ ಚಾಲ್ತಿಯಲ್ಲಿರುವುದರಿಂದ ಅದರ ಪ್ರಯೋಜನ ಪಡೆಯಲಾಗುತ್ತಿದೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.

    ಪರಿಸರ ಹಾಗೂ ಆರೋಗ್ಯ, ಸೈಕಲ್ ಸವಾರರಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಸೈಕಲ್ ಟ್ರಾೃಕ್ ನಿರ್ಮಾಣ ಯೋಜನೆ ಬಗ್ಗೆ ಚಿಂತಿಸಲಾಗಿದೆ. ಈಗಾಗಲೆ ಉಡುಪಿ ನಗರದ ರಸ್ತೆಗಳು ಅಭಿವೃದ್ಧಿ ಹೊಂದುತ್ತಿದ್ದು, ಮಣಿಪಾಲ-ಉಡುಪಿ ಹೆದ್ದಾರಿಗೆ ಹೊಂದಿಕೊಂಡು ಪ್ರತ್ಯೇಕ ಸೈಕಲ್ ಟ್ರಾೃಕ್ ನಿರ್ಮಿಸುವ ಯೋಜನೆ ಹೊಂದಿದ್ದೇವೆ.
    -ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts