More

    ಅಭದ್ರತೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ದತ್ತಾಂಶ

    ಶ್ರವಣ್‌ಕುಮಾರ್ ನಾಳ ಪುತ್ತೂರು
    ಪರೀಕ್ಷಾ ನಿರ್ವಹಣೆಗೆ ಮಂಗಳೂರು ವಿಶ್ವವಿದ್ಯಾಲಯವೇ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದರಿಂದ ಕೋಟ್ಯಂತರ ರೂ. ಖಾಸಗಿ ಸಂಸ್ಥೆಗಳಿಗೆ ನೀಡುವ ಅಧಿಕಾರಿಗಳ ದಂಧೆಗೆ ಕೊನೆಗೂ ಇತಿಶ್ರೀ ಹಾಡಿದ ಬೆನ್ನಲ್ಲೇ ವಿವಿಯ 10 ಲಕ್ಷಕ್ಕೂ ಅಧಿಕ ದತ್ತಾಂಶಗಳಿಗೆ ಅಭದ್ರತೆ ಕಾಡಿದೆ. ಈವರೆಗೆ ಪರೀಕ್ಷಾ ನಿರ್ವಹಣೆ ಮಾಡಿರುವ ಸಂಸ್ಥೆ ಡೇಟಾ ಮರಳಿಸದಿರುವುದು ಕಾರಣ.

    2015ರಿಂದ 2021ರವರೆಗೆ ಮೈಸೂರಿನ ಸಂಸ್ಥೆ ಮಂಗಳೂರು ವಿವಿಯ ಪರೀಕ್ಷಾ ನಿರ್ವಹಣೆ ಮಾಡಿದ್ದು, 11 ಕೋಟಿ ರೂಪಾಯಿಗಳನ್ನು ವಿವಿ ಪಾವತಿಸಿದೆ. ಗುತ್ತಿಗೆ ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಸಂಸ್ಥೆಯು ಅವಧಿ ನವೀಕರಣಕ್ಕೂ ಯತ್ನಿಸಿತ್ತು. ಆದರೆ, 2021ರಿಂದ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿ ವಿವಿಯಿಂದಲೇ ಪರೀಕ್ಷಾ ನಿರ್ವಹಣೆ ನಡೆಸಲು ತೀರ್ಮಾನಿಸಲಾಗಿದೆ. ಅದರಂತೆ ಈ ಹಿಂದಿನ ಪರೀಕ್ಷಾ ನಿರ್ವಹಣಾ ಸಂಸ್ಥೆಯಿಂದ ದತ್ತಾಂಶವನ್ನು ಮರಳಿಸುವಂತೆ ಸೂಚಿಸಲಾಗಿತ್ತು.

    ಖಾಸಗಿ ಸಂಸ್ಥೆಯಲ್ಲೇ ವಿವಿ ಡೇಟಾ: ಗುತ್ತಿಗೆ ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಪರೀಕ್ಷಾ ನಿರ್ವಹಣಾ ಸಂಸ್ಥೆಗಳು ಡೇಟಾ ಮರಳಿಸಬೇಕು. 2010ರಿಂದ 2015ರವರೆಗೆ ಮೆಟೈ ಟೆಕ್ನಾಲಜಿ ಸಂಸ್ಥೆ ವಿವಿ ಪರೀಕ್ಷಾ ನಿರ್ವಹಣೆ ನಡೆಸುತ್ತಿತ್ತು. ಗುತ್ತಿಗೆ ಅವಧಿ ಪೂರ್ಣಗೊಂಡ ನಂತರ 2015ರಲ್ಲಿ ನೂತನ ಪರೀಕ್ಷಾ ನಿರ್ವಹಣಾ ಸಂಸ್ಥೆಗೆ ದತ್ತಾಂಶಗಳನ್ನು ವಿವಿಯ ಮೂಲಕ ಹಸ್ತಾಂತರಿಸಿದೆ. ಪ್ರಸ್ತುತ ಮಂಗಳೂರು ವಿವಿ ವ್ಯಾಪ್ತಿಯ 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಅಂಕಪಟ್ಟಿ, ಪರೀಕ್ಷಾ ದತ್ತಾಂಶ, ಘಟಿಕೋತ್ಸವ, ಸಂಶೋಧನಾ ಪತ್ರ ಸಹಿತ ಸಮಗ್ರ ದಾಖಲೆ ಖಾಸಗಿ ಸಂಸ್ಥೆಯ ಅಧೀನದಲ್ಲಿದೆ. ಸರ್ಕಾರಿ ಅಥವಾ ಇನ್ನಿತರ ಉದ್ಯೋಗ ಪಡೆಯುವ ಸಂದರ್ಭ ಶೈಕ್ಷಣಿಕ ದಾಖಲೆ ಪರಿಶೀಲನೆ, ನಿರಾಕ್ಷೇಪಣಾ ಪತ್ರ ಸಲ್ಲಿಸಬೇಕಿರುತ್ತದೆ. ಸಂಸ್ಥೆ ಡೇಟಾ ಮರಳಿಸದ ಕಾರಣ ವಿವಿಯಲ್ಲೂ ಶೈಕ್ಷಣಿಕ ದಾಖಲೆ ಇಲ್ಲ.

    ಸಿಂಡಿಕೇಟ್ ತನಿಖೆಗೆ ನಿರ್ಧಾರ: ಗುತ್ತಿಗೆ ಅವಧಿ ಮುಗಿಯುತ್ತಿದ್ದಂತೆ ಮಂಗಳೂರು ವಿವಿಯ 10 ಲಕ್ಷಕ್ಕೂ ಅಧಿಕ ದತ್ತಾಂಶವನ್ನು ಸಂಸ್ಥೆಗೆ ಮರಳಿಸದೆ ವಿವಿಯ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಉಂಟಾಗಿದೆ. ಈ ಬಗ್ಗೆ ಮಂಗಳೂರು ವಿವಿ ಸಿಂಡಿಕೇಟ್ ಮಂಡಳಿ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಲು ತೀರ್ಮಾನಿಸಿದೆ. ಜತೆಗೆ ಆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಅಧಿಕೃತ ನಿರ್ಣಯ ಪ್ರತಿ ನೀಡಲಾಗಿದೆ ಎಂದು ಸಿಂಡಿಕೇಟ್ ಸದಸ್ಯ ರಮೇಶ್ ತಿಳಿಸಿದ್ದಾರೆ.

    ತ್ತಾಂಶ ಮರಳಿಸದ ಪರೀಕ್ಷಾ ನಿರ್ವಹಣಾ ಸಂಸ್ಥೆಗೆ ಮಂಗಳೂರು ವಿವಿ ಸಿಂಡಿಕೇಟ್ ಮಂಡಳಿ ನಿರ್ಧಾರದಂತೆ ಲೀಗಲ್ ನೋಟಿಸ್ ನೀಡಲಾಗುವುದು. ಈ ಬಗ್ಗೆ ಬಂದ ಪ್ರತಿಕ್ರಿಯೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
    -ಪ್ರೊ.ಪಿಎಲ್ ಧರ್ಮ, ಪರೀಕ್ಷಾಂಗ ಕುಲಸಚಿವ, ಮಂಗಳೂರು ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts