More

    ಕಾರ್ಕಳ ಬಾರ್‌ನಲ್ಲಿ ವೇಟರ್ ಆಗಿದ್ದ ಆದಿತ್ಯ

    ಕಾರ್ಕಳ: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆದಿತ್ಯ ರಾವ್ ಕೃತ್ಯ ಎಸಗಿದ್ದ ಮೂರು ದಿನಗಳ ಹಿಂದೆ ಕಾರ್ಕಳದ ಬಾರ್‌ವೊಂದರಲ್ಲಿ ವೇಟರ್ ಆಗಿ ದುಡಿದಿದ್ದ.
    ಜ.17ರಂದು ಬೆಳಗ್ಗೆ 11ರ ವೇಳೆಗೆ ವೇಳೆಗೆ ಭಾರಿ ಗಾತ್ರದ ಬ್ಯಾಗ್ ಬೆನ್ನಿಗೆ ಹಾಕಿಕೊಂಡಿದ್ದ ಆದಿತ್ಯ ರಾವ್, ಕಾರ್ಕಳದ ಕರಿಯಕಲ್ಲಿನ ರಾಕ್‌ಸೈಡ್ ಬಾರ್ ಆ್ಯಂಡ್ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಸಪ್ಲಾಯರ್ ಕೆಲಸ ನೀಡುವಂತೆ ಮನವಿ ಮಾಡಿದ್ದ. ಕೆಲಸ ಖಾಲಿ ಇಲ್ಲ ಎಂದು ಮ್ಯಾನೇಜರ್ ತಿಳಿಸಿದಾಗ ಬಾರ್ ಮಾಲೀಕ ಉದಯ ಲೂವಿಸ್ ಅವರ ಮೊಬೈಲ್ ಸಂಖ್ಯೆ ಪಡೆದು ತೆರಳಿದ್ದ.
    18ರ ಸಂಜೆ ವೇಳೆಗೆ ಕಾರ್ಕಳದ ‘ಉಡುಪಿ ಬಸ್ ನಿಲ್ದಾಣ’ದಲ್ಲಿ ಇರುವ ಮಾಕ್ಸ್ ಜಿಮ್ಸ್ ಸೆಂಟರ್‌ಗೆ ಹೋಗಿ, ನಿರರ್ಗಳವಾಗಿ ಆಂಗ್ಲ ಭಾಷೆಯಲ್ಲಿ ಮಾತನಾಡಿದ್ದ. ಜಿಮ್ ಸದಸ್ಯನಲ್ಲದಿದ್ದರೂ ಕೋರಿಕೆ ಮೇರೆಗೆ ಜಿಮ್ ಮಾಲೀಕ ಕನ್ವೆಲ್ ಅವರು ಒಂದು ದಿನ ಜಿಮ್ ಉಪಯೋಗಿಸಲು ಅವಕಾಶ ನೀಡಿದ್ದರು. ಆದಿತ್ಯ ಇದಕ್ಕೆ ಯಾವುದೇ ಶುಲ್ಕ ಪಾವತಿಸಿರಲಿಲ್ಲ.

    ನಗರದ ಅನಂತಶಯನ ದೇವಳ ರಸ್ತೆಯತ್ತ ಹೋಗಿ, ಮತ್ತೊಂದು ಭಾರಿ ಗಾತ್ರದ ಬ್ಯಾಗ್ ಹಿಡಿದುಕೊಂಡು ಕಿಂಗ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಸಪ್ಲಾಯರ್ ಕೆಲಸ ಕೇಳಿದ್ದಾನೆ. ಗುರುತು ಚೀಟಿ ಇಲ್ಲವೆಂದಾಗ ಮ್ಯಾನೇಜರ್ ಉದ್ಯೋಗ ನೀಡಲು ನಿರಾಕರಿಸಿದ್ದರು. ನಂತರ ಬ್ಯಾಗ್‌ನಿಂದ ಆಧಾರ್ ಕಾರ್ಡ್‌ನ ಪ್ರತಿ ತೆಗೆದು ತನ್ನ ಮೊಬೈಲ್ ನಂಬರ್ ಬರೆದು ಬಾರ್ ಕೊಟ್ಟಿದ್ದ. ಶನಿವಾರ ರಾತ್ರಿ ಹಾಗೂ ಭಾನುವಾರ ಪೂರ್ತಿ ಕಿಂಗ್ಸ್ ಬಾರ್‌ನಲ್ಲಿ ಸಪ್ಲಾಯರ್ ಆಗಿ ಕೆಲಸ ಮಾಡಿ ರಾತ್ರಿ ಮಲಗಿದ್ದ. ತಡರಾತ್ರಿ ಬಾರ್‌ನ ಹೊರಾಂಗಣದಲ್ಲಿ ತಿರುಗಾಡುತ್ತಿದ್ದುದು ಸಿಸಿಟಿವಿ ಫೂಟೇಜ್‌ನಲ್ಲಿ ಕಂಡುಬಂದಿದೆ. ಸೋಮವಾರ ನಸುಕಿನಲ್ಲಿ ಬ್ಯಾಗ್‌ನೊಂದಿಗೆ ಕಿಂಗ್ಸ್ ಬಾರ್‌ನಿಂದ ತೆರಳಿದ್ದಾನೆ.

    ಸ್ಫೋಟಕ ಮದ್ದುಗಳ ದಾಸ್ತಾನು ಕೇಂದ್ರ
    ಕಾರ್ಕಳ ವ್ಯಾಪ್ತಿಯಲ್ಲಿ ಅಧಿಕೃತ, ಅನಧಿಕೃತ ಕರಿಕಲ್ಲಿನ ಕ್ವಾರಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅನಧಿಕೃತವಾಗಿ ಸ್ಫೋಟಕ ಮದ್ದುಗಳನ್ನು ಬಳಸಲಾಗುತ್ತಿದೆ. ಇಂಥ ಅಕ್ರಮ ಸ್ಫೋಟಕ ಮದ್ದುಗಳನ್ನು ಆದಿತ್ಯ ರಾವ್ ಸಂಗ್ರಹಿಸಿ ಕೃತ್ಯಕ್ಕೆ ಬಳಸಿದ್ದಾನೆಯೇ ಎಂಬ ಶಂಕೆಗಳಿದ್ದು, ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.

    ಬಾಂಬು ಪತ್ತೆ ದಿನವೇ ಆದಿತ್ಯನ ಮಾಹಿತಿ: ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ದಿನದಂದೇ ಆದಿತ್ಯ ರಾವ್ ಬಗ್ಗೆ ಮಾಹಿತಿ ಪೊಲೀಸ್ ಇಲಾಖೆಗೆ ಲಭಿಸಿತ್ತು. ಬೆಂಗಳೂರಿನ ಏರ್‌ಪೋರ್ಟ್ ಠಾಣಾ ಪೊಲೀಸರ ಮಾಹಿತಿಯಂತೆ ಮಂಗಳೂರು ಏರ್‌ಪೋರ್ಟ್ ಸಿಸಿ ಕ್ಯಾಮರಾದ ಫೂಟೇಜ್ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೂ ರವಾನೆಯಾಗಿತ್ತು. ಅದರಂತೆ ಮಣಿಪಾಲಕ್ಕೆ ಹೋಗಿ ಆದಿತ್ಯನ ಮೊಬೈಲ್ ನಂಬರ್ ಸಂಗ್ರಹಿಸಿ, ಮೊಬೈಲ್ ಕರೆ ಮಾಹಿತಿ ಪಡೆದಿದ್ದರು. ಆಗ ಕೆಲದಿನಗಳ ಹಿಂದೆ ಕಾರ್ಕಳದಲ್ಲಿ ಇದ್ದ ಮಾಹಿತಿ ಸಿಕ್ಕಿದ್ದು, ತನಿಖಾ ತಂಡ ತಕ್ಷಣ ಕಾರ್ಕಳಕ್ಕೆ ಆಗಮಿಸಿ ಕೆಲವರಿಂದ ಮಾಹಿತಿ ಸಂಗ್ರಹಿಸಿತ್ತು. ಅದರಲ್ಲಿ ಕೆಲ ಬಾರ್ ಮಾಲೀಕರು ಒಳಗೊಂಡಿದ್ದರು. ಈ ಬೆಳವಣಿಗೆ ನಡುವೆ ಕೃತ್ಯ ಎಸಗಿದ ಬಳಿಕ ಆದಿತ್ಯ ಮಲ್ಪೆಗೆ ತೆರಳಿ ಮೊಬೈಲ್ ಸ್ವಿಚ್‌ಆಫ್ ಮಾಡಿದ್ದ. ಮತ್ತೆ ಕಾರ್ಕಳದ ಕಡೆಗೆ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿ ತನಿಖಾ ತಂಡ ಇದ್ದರೂ ಆತ ಶಿವಮೊಗ್ಗದತ್ತ ತೆರಳಿದ್ದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts