More

    ಶಿಕ್ಷಕರ ರೂಪಿಸುವ ಸರ್ಕಾರಿ ಕಾಲೇಜು ವಿವಿ ತೆಕ್ಕೆಗೆ

    – ಪ್ರಕಾಶ್ ಮಂಜೇಶ್ವರ ಮಂಗಳೂರು

    ಶಿಕ್ಷಕರನ್ನು ರೂಪಿಸುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆ ವ್ಯಾಪ್ತಿಯ ಮಂಗಳೂರು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯವನ್ನು ಮಂಗಳೂರು ವಿಶ್ವವಿದ್ಯಾಲಯದ ಘಟಕ ಕಾಲೇಜಾಗಿ ಪರಿವರ್ತಿಸುವ ಪ್ರಸ್ತಾವನೆ ವಷರ್ದ ಬಳಿಕ ಮರುಜೀವ ಪಡೆದಿದೆ.
    ಈ ಕುರಿತ ಪ್ರಸ್ತಾವನೆಯನ್ನು ಅನುಮೋದಿಸಿ ಸರ್ಕಾರಕ್ಕೆ ಸಲ್ಲಿಸುವ ನಿರ್ಣಯವನ್ನು ಜೂನ್ 23ರ ವಿವಿ ಸಿಂಡಿಕೇಟ್ 2020ನೇ ಸಾಲಿನ ಸಭೆಯಲ್ಲಿ ಕೈಗೊಳ್ಳಲಾಗಿದೆ. 72 ವರ್ಷಗಳ ಇತಿಹಾಸ ಹೊಂದಿರುವ ಮಹಾವಿದ್ಯಾಲಯವನ್ನು ಮಂಗಳೂರು ವಿವಿ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಪ್ರಯತ್ನದ ಬಗ್ಗೆ ಶಿಕ್ಷಕರು, ಮುಖ್ಯೋಪಾಧ್ಯಾರು, ಶಿಕ್ಷಣಾಧಿಕಾರಿ ಸಂಘಟನೆಗಳು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

    ಯಾಕೆ ವಿರೋಧ?
    ಇದು ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಏಕೈಕ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ. ಈ ನಾಲ್ಕು ಜಿಲ್ಲೆಗಳ ಶಾಲಾ ಶಿಕ್ಷಣದ ಮೇಲುಸ್ತುವಾರಿ ಹೊಂದಿದೆ. ಈ ಕಾಲೇಜು ವಿವಿಯ ಘಟಕ ಸಂಸ್ಥೆಯಾದರೆ ಈ ನಾಲ್ಕು ಜಿಲ್ಲೆಗಳ ಶೈಕ್ಷಣಿಕ ಮೇಲುಸ್ತುವಾರಿ ರದ್ದಾಗುತ್ತದೆ. ಸಂಸ್ಥೆಗೆ ಕ್ಷೇತ್ರ ಮಟ್ಟದ ಅನುಭವದ ಲಾಭ ಕೈತಪ್ಪಬಹುದು ಎನ್ನುವ ಆತಂಕ ಸೇರ್ಪಡೆ ವಿರೋಧಿಸುವ ಸಂಘ ಸಂಸ್ಥೆಗಳದು. ಈ ಸಂಸ್ಥೆ ಪ್ರಸ್ತುತ ಮೂರು ವಿಭಾಗಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಬಿ ಇಡಿ ಶಿಕ್ಷಣ ನೀಡುವ ಜತೆಗೆ ಸೇವಾಂತರ್ಗತ ಶಿಕ್ಷಕರಿಗೆ ತರಬೇತಿ ಹಾಗೂ ಶಿಕ್ಷಣದಲ್ಲಿ ಸಂಶೋಧನಾ ಮತ್ತು ಆವಿಷ್ಕಾರಗಳನ್ನು ನಡೆಸಲು ದಕ್ಷಿಣ ಕರ್ನಾಟಕ ಪ್ರಾಂತದಲ್ಲಿ ಯಾವುದೇ ಸಂಸ್ಥೆ ಇಲ್ಲದಂತಾಗುತ್ತದೆ. ವಿವಿಧ ಹುದ್ದೆಗಳೂ ನಷ್ಟವಾಗುತ್ತದೆ.

    ಸಾರ್ವಜನಿಕರಿಗೆ ಏನು ನಷ್ಟ ?
    ಮಂಗಳೂರು ವಿಶ್ವವಿದ್ಯಾಲಯ ಸ್ವಾಯತ್ತ ಸಂಸ್ಥೆ. ಇಲ್ಲಿ ಶುಲ್ಕ ನಿಗದಿಪಡಿಸಲು ವಿವಿ ಸ್ವತಂತ್ರ. ಪ್ರಸ್ತುತ ಇಲ್ಲಿ ವಿದ್ಯಾರ್ಥಿಗಳು ಕನಿಷ್ಠ ಶುಲ್ಕದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಭಾಗಶಃ ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಈ ವ್ಯವಸ್ಥೆ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟರೆ ಸಹಜವಾಗಿಯೇ ಶುಲ್ಕಗಳು ಏರಿಕೆಯಾಗಲಿವೆ ಎನ್ನುವುದು ಪ್ರತಿಭ ಟಿಸುವ ಸಂಘ ಸಂಸ್ಥೆಗಳ ವಾದ.

    ಇದು ನಗರದ ಹೃದಯ ಭಾಗದಲ್ಲಿರುವ ಶಿಕ್ಷಣ ಇಲಾಖೆಯ ಬಲುದೊಡ್ಡ ಆಸ್ತಿ. ಪ್ರೌಢಶಾಲಾ ಶಿಕ್ಷಕರ ಪುನಶ್ಚೇತನ, ಅವರಿಗೆ ಮಾರ್ಗದರ್ಶನ, ತರಬೇತಿ ನೀಡುವ ಪ್ರಧಾನ ಕೇಂದ್ರ. ಡಿಡಿಪಿಐ, ಬಿಇಒ ಸಹಿತ ಇಲಾಖೆಯ ಅನೇಕ ಪ್ರಮುಖ ಹುದ್ದೆಗಳು ಒಳಪಡುವ ಕೇಂದ್ರ. ಆದ್ದರಿಂದ ಈ ವಿದ್ಯಾಲಯವನ್ನು ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಳಿಸಬಾರದು.
    – ಗೀತಾ, ಕಾರ್ಯದರ್ಶಿ, ಕರ್ನಾಟಕ ಶಿಕ್ಷಣಾಧಿಕಾರಿಗಳ ಸಂಘ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts