More

    ಮಂಗಳೂರು-ಕೊಚ್ಚಿನ್ ಗ್ಯಾಸ್ ಪೈಪ್‌ಲೈನ್ ಪೂರ್ಣ

    ಮಂಗಳೂರು: ಬಹುನಿರೀಕ್ಷೆಯ ಕೊಚ್ಚಿನ್-ಮಂಗಳೂರು ನೈಸರ್ಗಿಕ ಅನಿಲ ಪೈಪ್‌ಲೈನ್‌ನ ಚಂದ್ರಗಿರಿ ಭಾಗವೂ ಪೂರ್ತಿಯಾಗಿದ್ದು, ಗ್ಯಾಸ್ ಪೂರೈಕೆಗೆ ಸಿದ್ಧಗೊಂಡಿದೆ. ಕೆಲವೇ ದಿನಗಳಲ್ಲಿ ಮಂಗಳೂರಿಗೆ ಗ್ಯಾಸ್ ಆಗಮನ ನಿರೀಕ್ಷೆಗಳಿದ್ದು, ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

    ಈಗಾಗಲೇ ಕಣ್ಣೂರುವರೆಗೆ ಪೈಪ್‌ಲೈನ್ ಕಮಿಷನಿಂಗ್ ನಡೆದಿದ್ದು, ಗ್ಯಾಸ್ ಕೂಡ ಬಂದಿದೆ. ಕ್ಲಿಷ್ಟಕರವಾಗಿದ್ದ ಕಾಸರಗೋಡು ಜಿಲ್ಲೆಯ ಚಂದ್ರಗಿರಿ ನದಿಗೆ ಅಡ್ಡವಾಗಿ 540 ಮೀಟರ್ ಉದ್ದದ ಪೈಪ್‌ಲೈನ್ ಹಾಕುವ ಕೆಲಸ ಕೊನೆಗೂ ಶನಿವಾರ ಪೂರ್ಣಗೊಂಡಿದೆ. ಪೈಪ್ ವೆಲ್ಡಿಂಗ್‌ನಂತಹ ಸಣ್ಣಪುಟ್ಟ ಕೆಲಸವಷ್ಟೇ ಬಾಕಿ ಉಳಿದಿದ್ದು, ಒಂದೆರಡು ದಿನಗಳಲ್ಲಿ ಅದೂ ಪೂರ್ಣಗೊಳ್ಳಲಿದೆ. ಬಳಿಕ ಗ್ಯಾಸ್ ಪೂರೈಕೆಯ ಟೆಸ್ಟಿಂಗ್ ನಡೆಯಲಿದೆ. ಎಲ್ಲವೂ ಸರಿಯಿದ್ದರೆ ಇನ್ನೊಂದು ತಿಂಗಳೊಳಗೆ ಮಂಗಳೂರಿಗೆ ಗ್ಯಾಸ್ ತಲುಪುವ ಕನಸು ನಿಜಗೊಳ್ಳುತ್ತದೆ.

    ಮಂಗಳೂರಿನಲ್ಲಿ ರಸಗೊಬ್ಬರ ಕಂಪನಿ ಎಂಸಿಎಫ್ ಸೇರಿದಂತೆ ಕೆಲವು ಕಂಪನಿಗಳು ನೈಸರ್ಗಿಕ ಅನಿಲ ಬಳಕೆಗೆ ಪೂರಕ ವ್ಯವಸ್ಥೆ ಸಿದ್ಧಪಡಿಸಿ ವರ್ಷಗಳಿಂದ ಕಾಯುತ್ತಿವೆ. ಅವುಗಳಿಗೆ ಈ ಅನಿಲ ಸಿಕ್ಕಿದಲ್ಲಿ ಲಾಭದಾಯಕವಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

    ‘ಡಿಸೆಂಬರ್‌ನಲ್ಲಿ ಕೊಚ್ಚಿ-ಮಂಗಳೂರು ಪೈಪ್‌ಲೈನ್ ಕಮಿಷನಿಂಗ್ ನಡೆಯಲಿದೆ. ವಾರದೊಳಗೆ ಮಂಗಳೂರಿನ ಕೈಗಾರಿಕೆಗಳಿಗೆ ನೈಸರ್ಗಿಕ ಅನಿಲ ಲಭಿಸಲಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
    ಒಟ್ಟು 444 ಕಿ.ಮೀ ಉದ್ದದ ಪೈಪ್‌ಲೈನ್‌ನ ಕೆಲಸವನ್ನು 2915 ಕೋಟಿ ರೂ. ವೆಚ್ಚದಲ್ಲಿ 2009ರಲ್ಲಿ ಆರಂಭಿಸಲಾಗಿತ್ತು. ಆದರೆ ಭೂಸ್ವಾಧೀನದಲ್ಲಿ ಆದ ವಿಳಂಬದಿಂದಾಗಿ ಯೋಜನೆ ಅನುಷ್ಠಾನದಲ್ಲಿ ಪ್ರಗತಿ ಕುಂಠಿತವಾಗಿತ್ತು. ಇದರಿಂದಾಗಿ ಯೋಜನಾ ವೆಚ್ಚವೂ 5,750 ಕೋಟಿ ರೂ.ಗೆ ಏರಿಕೆ ಕಂಡಿತು.

    ಕೊಚ್ಚಿಯಿಂದ 90 ಕಿ.ಮೀ ಉತ್ತರಕ್ಕೆ ಕುಟ್ಟನಾಡುವರೆಗೆ 2019ರಲ್ಲೇ ಗ್ಯಾಸ್ ಪೂರೈಕೆ ಆರಂಭಗೊಂಡಿತ್ತು. ಅಲ್ಲಿಂದ 354 ಕಿ.ಮೀ ದೂರದ ಕಣ್ಣೂರುವರೆಗೆ ಪೈಪ್‌ಲೈನ್ ಪೂರ್ಣಗೊಂಡು ಗ್ಯಾಸ್ ಪೂರೈಕೆಯಾಗುತ್ತಿದೆ.
    ಪ್ರಸ್ತುತ ಕೊಚ್ಚಿನ್‌ನಲ್ಲಿ ಗ್ಯಾಸ್ ವಿತರಣೆ ಮಾಡಲಾಗುತ್ತಿದ್ದು, ಅಲ್ಲಿನ ಪ್ರತಿದಿನದ ಬೇಡಿಕೆ 3.8 ದಶಲಕ್ಷ ಘನ ಮೀಟರ್. ಮಂಗಳೂರಿನಲ್ಲಿ 2.5 ದಶಲಕ್ಷ ಘನ ಮೀಟರ್ ಅನಿಲ ಬೇಡಿಕೆಯ ನಿರೀಕ್ಷೆಯನ್ನು ಗೈಲ್ ಅಧಿಕಾರಿಗಳು ಇರಿಸಿಕೊಂಡಿದ್ದಾರೆ.

    24*7 ನಿರಂತರ ಪೂರೈಕೆ: ಕೊಚ್ಚಿನ್-ಮಂಗಳೂರು ಗ್ಯಾಸ್ ಪೈಪ್‌ಲೈನ್ ಲೋಕಾರ್ಪಣೆಯಾದ ನಂತರ ನಿರಂತರ ಪೂರೈಕೆಯಾಗಲಿದೆ. ಮಂಗಳೂರಿನಲ್ಲಿ ಸ್ವೀಕರಣಾ ಕೇಂದ್ರವೂ ಸಿದ್ಧಗೊಂಡಿದೆ. ಕೊಚ್ಚಿನ್‌ನಲ್ಲಿರುವ ಪೆಟ್ರೋನೆಟ್ ಕಂಪನಿಯಿಂದ ಅನಿಲ ಬರಲಿದೆ. ಈ ಗ್ಯಾಸ್‌ನ್ನು ಸಂಗ್ರಹ ಮಾಡಿ ಇರಿಸಲಾಗದು. ಪೈಪ್‌ಲೈನ್‌ನಲ್ಲಿ ಯಾವಾಗಲೂ ಲಭ್ಯವಾಗಿರುತ್ತದೆ. ಅಗತ್ಯವಿದ್ದಷ್ಟು ಅನಿಲವನ್ನು ಬಳಕೆ ಮಾಡಿಕೊಳ್ಳಬಹುದು. ಕೈಗಾರಿಕೆಗಳು ಮಾತ್ರವಲ್ಲ, ಮನೆಮನೆಗಳಿಗೂ ಗ್ಯಾಸ್ ಪೂರೈಕೆಗೆ ಪೈಪ್‌ಲೈನ್ ಕಾರ್ಯ ಪ್ರಗತಿಯಿಂದ ಸಾಗುತ್ತಿದೆ. ವಾಹನಗಳ ಬಳಕೆಗಾಗಿ ಪೆಟ್ರೋಲ್ ಪಂಪ್‌ಗಳಲ್ಲೂ ವಿತರಣೆಗೆ ಸಿದ್ಧತೆ ನಡೆದಿದೆ.

    ನದಿಯ ಅಡಿಯಲ್ಲಿ ಸುರಂಗ: ಪೈಪ್‌ಲೈನ್‌ನ್ನು ಚಂದ್ರಗಿರಿ ನದಿಯಿಂದ ದಾಟಿಸುವುದು ದೊಡ್ಡ ಸವಾಲಾಗಿತ್ತು. ನದಿಯ ಅಡಿಭಾಗದಲ್ಲಿ ಸುರಂಗ ಕೊರೆದು ಪೈಪ್ ಅಳವಡಿಸಲು ಮುಂದಾದಾಗ ಪೈಪ್ ಸಿಲುಕಿಕೊಂಡು ಸಮಸ್ಯೆಯಾಗಿತ್ತು. ಕೊನೆಗೆ 24 ಇಂಚಿನ ಪೈಪ್ ಬದಲು ತಾತ್ಕಾಲಿಕವಾಗಿ 6 ಇಂಚಿನ ಪೈಪ್ ಅಳವಡಿಸಲಾಗಿದೆ. ಪೈಪ್‌ಲೈನ್ ಕಮಿಷನಿಂಗ್ ಬಳಿಕ 6 ಇಂಚಿನ ಪೈಪ್ ತೆಗೆದು 24 ಇಂಚಿನ ಪೈಪ್ ಅಳವಡಿಕೆ ಕಾರ್ಯ ನಡೆಯಲಿದೆ.

    ಹಲವು ವರ್ಷಗಳ ವಿಳಂಬದ ಬಳಿಕ ಗ್ಯಾಸ್ ಪೈಪ್‌ಲೈನ್ ಪೂರ್ಣಗೊಂಡಿದೆ. ಕಾಸರಗೋಡಿನ ಚಂದ್ರಗಿರಿ ಭಾಗವನ್ನು ಮೊನ್ನೆಯಷ್ಟೇ ಪೂರ್ಣಗೊಳಿಸಿದ್ದೇವೆ, ಇನ್ನು ಕೆಲ ದಿನಗಳೊಳಗೆ ಮಂಗಳೂರಿಗೆ ಗ್ಯಾಸ್ ಪೂರೈಕೆಯಾಗುವ ನಿರೀಕ್ಷೆ ಇದೆ.
    – ಮುರುಗೇಶ್ ಪಿ, ಕಾರ್ಯನಿರ್ವಾಹಕ ನಿರ್ದೇಶಕ, ಗೈಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts