More

    ಕಾಯಕಲ್ಪಕ್ಕೆ ಕಾಯುತ್ತಿದೆ ಮಂಗಳೂರು ಪಾಲಿಕೆ ಈಜುಕೊಳ

    ಪ್ರಕಾಶ್ ಮಂಜೇಶ್ವರ ಮಂಗಳೂರು

    ನಗರದ ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳವೊಂದು ನಿರ್ಮಾಣ ಹಂತದಲ್ಲಿದೆ. ಅಲೋಶಿಯಸ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಆಗಲೇ ಬಳಕೆಯಾಗುತ್ತಿದೆ. ಆದರೆ ನಗರದ ಹೃದಯ ಭಾಗದಲ್ಲಿ ಮಹಾನಗರ ಪಾಲಿಕೆ ನಿರ್ವಹಿಸುತ್ತಿರುವ 34 ವರ್ಷಗಳ ಇತಿಹಾಸ ಹೊಂದಿರುವ ಮಂಗಳಾ ಸಾರ್ವಜನಿಕ ಈಜುಕೊಳ ಇನ್ನೂ ರಾಷ್ಟ್ರೀಯ ಮಟ್ಟದ ಪಂದ್ಯ ಆಯೋಜಿಸಲೂ ಲಾಯಕ್ಕಿಲ್ಲದ ಸ್ಥಿತಿಯಲ್ಲಿದೆ.

    ಗುಣಮಟ್ಟದಲ್ಲಿ ಮಂಗಳಾ ಈಜುಕೊಳ ಖಾಸಗಿ ವ್ಯವಸ್ಥೆಗಿಂತ ಚೆನ್ನಾಗಿದೆ. ಓರೆನ್ ನೀರು ಶುದ್ಧೀಕರಣ ಘಟಕ ಅತ್ಯುತ್ತಮವಾಗಿದೆ. ಆದರೆ ಇತರ ಮೂಲಸೌಕರ್ಯಗಳ ಕೊರತೆ ತುಂಬಾ ಇದೆ. ಕಚೇರಿ ಕಟ್ಟಡದ ಕೆಲ ಭಾಗದಲ್ಲಿ ಮಳೆಗಾಲದಲ್ಲಿ ಒಳಗೆ ಕೊಡೆ ಹಿಡಿದು ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಸುಸಜ್ಜಿತ ಗ್ಯಾಲರಿ ಆವಶ್ಯಕತೆ ಇದೆ. ಸ್ನಾನದ ಮನೆ ವ್ಯವಸ್ಥಿತವಾಗಿಲ್ಲ ಎನ್ನುವ ಬೇಸರ ಈಜುಗಾರರಲ್ಲಿ ಇದೆ.

    ಪ್ರಸ್ತುತ ಆರು ಸಾಲುಗಳನ್ನು ಹೊಂದಿರುವ ಈ ಈಜುಕೊಳ ಗರಿಷ್ಠ ವಲಯ ಮತ್ತು ರಾಜ್ಯ ಮಟ್ಟದ ಪಂದ್ಯಗಳ ಆಯೋಜನೆಗೆ ಸೀಮಿತ. ರಾಷ್ಟ್ರೀಯ ಮಟ್ಟದ ಪಂದ್ಯ ಆಯೋಜಿಸಲು ಕನಿಷ್ಠ ಎಂಟು ಸಾಲುಗಳು ಬೇಕು.

    ದಟ್ಟವಾದ ಹಸಿರು, ಸುಂದರ ಹೊರಾಂಗಣ ಹೊಂದಿರುವ ಮಂಗಳಾ ಈಜುಕೊಳದಲ್ಲಿ ಇರುವ ಹಳೇ ಕಚೇರಿ ಕಟ್ಟಡವನ್ನು ತೆಗೆದು ಸುಂದರ ಕಟ್ಟಡ ನಿರ್ಮಿಸಿದರೆ ಈಜುಕೊಳದ ಸೊಬಗು ಹೆಚ್ಚುವುದು. ಈಜು ಕಲಿಕೆಗೆ ಹೆಚ್ಚಿನ ಆಸಕ್ತಿ ತೋರುತ್ತಿರುವ ಮಕ್ಕಳು ಹಾಗೂ ಯುವಜನರಿಗೆ ಮಂಗಳೂರು ನಗರದಲ್ಲಿ ಒಳ್ಳೆಯ ಆವಕಾಶ ಒದಗಿಸಿದಂತಾಗುತ್ತದೆ.

    ಇತ್ತೀಚಿನ ವರ್ಷಗಳಲ್ಲಿ ಮಂಗಳಾ ಈಜುಕೊಳ ಬಳಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ಕರೊನಾ ಅವಧಿ ಹೊರತುಪಡಿಸಿ ಇತರ ಸಂದರ್ಭ ಪಾಸ್ ಇರುವವರು ಸಹಿತ ಸುಮಾರು 500 ಮಂದಿ ಸಾರ್ವಜನಿಕರು ಹಾಗೂ 200 ಕ್ರೀಡಾಪಟುಗಳು ದಿನಂಪ್ರತಿ ಈ ಈಜುಕೊಳ ಉಪಯೋಗಿಸುತ್ತಿದ್ದಾರೆ. ಇದಲ್ಲದೆ ವರ್ಷಂಪ್ರತಿ ಶಾಲಾ ರಜಾ ಅವಧಿಯಲ್ಲಿ(ಏಪ್ರಿಲ್ ಮತ್ತು ಮೇ) ನಡೆಯುವ ತರಬೇತಿ ಶಿಬಿರದಲ್ಲಿ ಸುಮಾರು 1,300 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸುತ್ತಾರೆ. ವಿದ್ಯಾರ್ಥಿನಿಯರು, ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ಬ್ಯಾಚುಗಳಿವೆ.

    ಮಂಗಳಾ ಈಜುಕೊಳದ ಪರಿಸರವೇ ಕ್ರೀಡಾ ಸಂಕೀರ್ಣವಾಗಿದೆ. ಈ ರಸ್ತೆ ಸಾಲು ಹಾಗೂ ಆಸುಪಾಸಿನಲ್ಲೇ ಮಂಗಳಾ ಕ್ರೀಡಾಂಗಣ, ವಾಲಿಬಾಲ್ ಮೈದಾನ, ಬಾಸ್ಕೆಟ್‌ಬಾಲ್, ಶಟ್ಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣಗಳಿವೆ. ಕರಾವಳಿ ಭಾಗದಲ್ಲಿ ಇರುವ ಅವಶ್ಯಕತೆ ಮತ್ತು ಬೇಡಿಕೆ ಗಮನಿಸಿದರೆ ಇಲ್ಲಿ ಇನ್ನು 7-8 ಸುಸಜ್ಜಿತ ಈಜುಕೊಳ ನಿರ್ಮಿಸಿದರೂ ಕಡಿಮೆಯೇ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೇರಿಸಿ ಮಂಗಳಾ ಈಜುಕೊಳದ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿದರೆ ಉತ್ತಮ.

    ಲೋಕರಾಜ ವಿಟ್ಲ, ಮುಖ್ಯ ತರಬೇತುದಾರರು, ಮಂಗಳೂರು ಅಕ್ವಟಿಕ್ ಕ್ಲಬ್

    ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಈಜುಗಾರರ ಭವಿಷ್ಯಕ್ಕೆ ಭದ್ರ ಬುನಾದಿ ನಿರ್ಮಿಸಿದ ಮಂಗಳಾ ಈಜುಕೊಳದ ಕಚೇರಿ ಕಟ್ಟಡ ಇಂದು ಸೋರುತ್ತಿದೆ. ಮೂಲಸೌಕರ್ಯಗಳ ಕೊರತೆ ಇದೆ. ವರ್ಷಂಪ್ರತಿ ದುರಸ್ತಿ ನಡೆಯುತ್ತಿದೆ. ಹೊಸ ಈಜುಕೊಳಗಳ ಜತೆ ಮಂಗಳಾ ಈಜುಕೊಳವನ್ನು ಕೂಡ ಅಭಿವೃದ್ದಿಪಡಿಸುವುದು ಅವಶ್ಯ.

    ಲಕ್ಷ್ಮೀಪ್ರಕಾಶ್ ಶೆಟ್ಟಿ, ಈಜುಗಾರರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts