More

    ಸಿಕ್ಕಿಬಿದ್ರು ಮೋಹದ ಬಲೆಗಾರರು

    ಮಂಗಳೂರು: ಕೇರಳ ಮೂಲದವರನ್ನು ಫೇಸ್‌ಬುಕ್ ಮೂಲಕ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿ ಮನೆಗೆ ಆಹ್ವಾನಿಸಿ ಬಳಿಕ ಬ್ಲಾೃಕ್‌ಮೇಲ್ ಮಾಡಿ ಹಣ ದೋಚುತ್ತಿದ್ದ ಹನಿಟ್ರಾೃಪ್ ಜಾಲವನ್ನು ಸುರತ್ಕಲ್ ಪೊಲೀಸರು ಭೇದಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ.

    ರೇಷ್ಮಾ ಯಾನೆ ನೀಮಾ (32), ಇಕ್ಬಾಲ್ ಮುಹಮ್ಮದ್ (35), ಝೀನತ್ ಮುಬೀನ್(28), ನಾಸಿಫ್ ಯಾನೆ ಅಬ್ದುಲ್ ಖಾದರ್ ನಾಜಿಫ್(34) ಬಂಧಿತರು. ಇನ್ನೂ ನಾಲ್ಕೈದು ಆರೋಪಿಗಳು ಈ ಜಾಲದಲ್ಲಿರುವ ಅನುಮಾನವಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

    ರೇಷ್ಮಾ ಮತ್ತು ಝೀನತ್ ಸಾಮಾಜಿಕ ಜಾಲತಾಣದ ಸ್ನೇಹ ಬೆಳೆಸಿ ಒಬ್ಬಂಟಿಯಾಗಿರುವುದಾಗಿ ನಂಬಿಸಿ ಮನೆಗೆ ಆಹ್ವಾನಿಸುತ್ತಿದ್ದರು. ಮನೆಗೆ ಬಂದವರನ್ನು ಇಕ್ಬಾಲ್ ಹಾಗೂ ಅಬ್ದುಲ್ ಖಾದರ್ ನಾಸಿಫ್ ಸಹಾಯದಿಂದ ಬೆದರಿಸಿ ಹಲ್ಲೆ ನಡೆಸಿ ಬ್ಲಾೃಕ್‌ಮೇಲ್ ಮಾಡಿ ಅವರಿಂದ ಹಣ ವಸೂಲಿ ಮಾಡಲಾಗುತ್ತಿತ್ತು.

    ಸಿಕ್ಕಿದ್ದು ಹೇಗೆ?: ಆರೋಪಿಗಳು ಕಾಸರಗೋಡಿನ ಕುಂಬಳೆ ಮೂಲದ ವ್ಯಕ್ತಿಯನ್ನು ಕೃಷ್ಣಾಪುರಕ್ಕೆ ಕರೆಸಿ, ಆತನಿಗೆ ಹಲ್ಲೆ ನಡೆಸಿ, 5 ಲಕ್ಷ ರೂ.ಗೆ ಬೇಡಿಕೆ ಇರಿಸಿದ್ದರು. ಆತನನ್ನು ವಿವಸ್ತ್ರಗೊಳಿಸಿ ವಿಡಿಯೋ ಮಾಡಿದ್ದಲ್ಲದೆ ಹಣ ಕೊಡದಿದ್ದರೆ ಅತ್ಯಾಚಾರದ ಕೇಸ್ ದಾಖಲಿಸುತ್ತೇವೆ, ನಿನ್ನ ಊರಿಗೆ ಬಂದು ಅಲ್ಲಿ ಪ್ರಚಾರ ಮಾಡುತ್ತೇವೆ ಎಂದೆಲ್ಲ ಬೆದರಿಸಿದ್ದರು. ತನ್ನಲ್ಲಿ ಹಣ ಇಲ್ಲ ಎಂದಾಗ ಆತನ ಕಾರನ್ನು ಒತ್ತೆ ಇರಿಸಿಕೊಂಡಿದ್ದರು. ಮೊದಲು ಸ್ವಲ್ಪ ಮೊತ್ತವನ್ನು ನೀಡಿದ ವ್ಯಕ್ತಿ ಗ್ಯಾಂಗ್‌ನ ಕಿರಿಕ್ ಜೋರಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದ. ಪೊಲೀಸರ ಸೂಚನೆಯಂತೆ 30 ಸಾವಿರ ರೂ. ನೀಡುತ್ತೇನೆ ಎಂದು ತಿಳಿಸಿ ಅದನ್ನು ಪಡೆಯಲು ಬಂದ ಗ್ಯಾಂಗನ್ನು ಬಂಧಿಸಲಾಗಿದೆ. ಆರೋಪಿಗಳಿಂದ ನಾಲ್ಕು ಮೊಬೈಲ್ ಫೋನ್, ಐದು ಎಟಿಎಂ- ಕ್ರೆಡಿಟ್ ಕಾರ್ಡ್, ನಗದು, ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು. ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ಸುದ್ದಿಗೋಷ್ಠಿಯಲ್ಲಿದ್ದರು.

    ಬೀಡಿ ಕಾರ್ಮಿಕೆ, ಇನ್ಯೂರೆನ್ಸ್ ಏಜೆಂಟ್, ಚಾಲಕರು: ಆರೋಪಿಗಳ ಪೈಕಿ ರೇಷ್ಮಾ ಮತ್ತು ಝೀನತ್ ಸಹೋದರಿಯರು. ರೇಷ್ಮಾ ಬೀಡಿ ಕಾರ್ಮಿಕಳಾಗಿದ್ದರೆ, ಝೀನತ್ ಇನ್ಯೂರೆನ್ಸ್ ಏಜೆಂಟ್. ಓರ್ವ ಆರೋಪಿ ಇಕ್ಬಾಲ್ ಎಂಬಾತ ಝೀನತ್‌ಳ ಗಂಡ. ಇಕ್ಬಾಲ್-ಝೀನತ್ ದಂಪತಿ ಕಾನ- ಕಟ್ಲಾ ಪರಿಸರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದಾರೆ. ಆರೋಪಿ ನಾಸಿಫ್ ಸೂರಿಂಜೆ ಮೂಲದವನಾಗಿದ್ದು, ಪ್ರಸ್ತುತ ಚೊಕ್ಕಬೆಟ್ಟುವಿನಲ್ಲಿ ವಾಸಿಸುತ್ತಿದ್ದ. ಇಕ್ಬಾಲ್ ಮತ್ತು ನಾಸಿಫ್ ಇಬ್ಬರೂ ವೃತ್ತಿಯಲ್ಲಿ ಚಾಲಕರಾಗಿದ್ದಾರೆ.

    ಐದಾರು ಮಂದಿಗೆ ಬ್ಲಾೃಕ್‌ಮೇಲ್?: ಹನಿಟ್ರಾೃಪ್‌ಗೊಳಪಡಿಸುವ ವ್ಯಕ್ತಿಗಳಿಂದ ಈ ಆರೋಪಿಗಳು ಲಕ್ಷಗಟ್ಟಲೆ ಹಣ ವಸೂಲಿಗೆ ಮುಂದಾಗುತ್ತಾರೆ. ಸಿಗದಿದ್ದರೆ 15ರಿಂದ 20 ಸಾವಿರ ರೂ.ಗಳನ್ನೂ ದೋಚುತ್ತಾರೆ. ಬಂಧಿತ ಆರೋಪಿಗಳು ಸುಮಾರು 8 ತಿಂಗಳಿನಿಂದ ಈ ಹನಿಟ್ರಾೃಪ್ ನಡೆಸುತ್ತಿರುವ ಶಂಕೆ ಇದೆ. ಇನ್ನೂ ಐದಾರು ಮಂದಿ ಇವರ ಬ್ಲಾೃಕ್‌ಮೇಲ್ ತಂತ್ರಕ್ಕೆ ಒಳಗಾಗಿರುವುದು ಕಂಡು ಬಂದಿದೆ. ಮಾರ್ಯಾದೆಗೆ ಅಂಜಿ ಹೆಚ್ಚಿನವರು ದೂರು ನೀಡಲು ಮುಂದಾಗುವುದಿಲ್ಲ. ಇದನ್ನೇ ಆರೋಪಿಗಳು ಬಂಡವಾಳವಾಗಿಸಿ ಮತ್ತಷ್ಟು ಜನರನ್ನು ತಮ್ಮ ಬಲೆಗೆ ಬೀಳಿಸಲು ಪ್ರಯತ್ನಿಸುತ್ತಾರೆ. ಆದ್ದರಿಂದ ಈ ರೀತಿ ಹನಿಟ್ರಾೃಪ್‌ಗೆ ಒಳಗಾದವರು ಅಂಜಿಕೆ ಇಲ್ಲದೆ ಪೊಲೀಸರಿಗೆ ಮಾಹಿತಿಯನ್ನು ಗೌಪ್ಯವಾಗಿ ನೀಡುವ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿ ಇನ್ನಷ್ಟು ಅಮಾಯಕರು ಇಂತಹ ಆರೋಪಿಗಳ ಕೃತ್ಯಕ್ಕೆ ಬಲಿಯಾಗುವುದನ್ನು ತಡೆಯಬಹುದು ಎಂದು ಕಮಿಷನರ್ ತಿಳಿಸಿದರು.

    ಐಷಾರಾಮಿ ಜೀವನ: ಬಂಧಿತರು ಐಷಾರಾಮಿ ಬದುಕು ಸಾಗಿಸುತ್ತಿದ್ದು, ಅದಕ್ಕಾಗಿ ಇಂತಹ ಕೃತ್ಯ ನಡೆಸುತ್ತಿದ್ದರು. ಲಕ್ಷಗಟ್ಟಲೆ ವಸೂಲಿ ಮಾಡುತ್ತಿದ್ದ ಇವರೆಲ್ಲ ನಾಲ್ಕಾರು ಕ್ರೆಡಿಟ್ ಕಾರ್ಡ್ ಹೊಂದಿದ್ದು, ಎಕ್ಸ್‌ಯುವಿ 500 ವಾಹನ, ಹನಿಟ್ರಾೃಪ್ ಕೆಲಸಕ್ಕೆಂದೇ ಕೃಷ್ಣಾಪುರದಲ್ಲಿ ಬಾಡಿಗೆ ಮನೆ ಹೊಂದಿದ್ದರು. ಆನ್‌ಲೈನ್ ಶಾಪಿಂಗ್, ವಾಚ್ ಖರೀದಿ ಇವರ ಹವ್ಯಾಸವಾಗಿತ್ತು. ಅಲ್ಲದೆ ಎಕ್ಸ್‌ಯುವಿ ವಾಹನವನ್ನು ಆಲ್ಟರೇಶನ್ ಮಾಡಿ ದನ ಸಾಗಾಟಕ್ಕೂ ಚಾಮರಾಜನಗರದಲ್ಲಿ ಬಳಸಿರುವುದು ತಿಳಿದುಬಂದಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts