More

    ನೆರೆಯಿಂದ ಕಲಿತಿಲ್ಲ ಪಾಠ

    ಭರತ್ ಶೆಟ್ಟಿಗಾರ್ ಮಂಗಳೂರು
    ಮಳೆ ಆರಂಭವಾಯಿತೆಂದರೆ ಮಂಗಳೂರು ನಗರ ಪ್ರದೇಶದ ನಿವಾಸಿಗಳು ಬೆಚ್ಚಿ ಬೀಳುತ್ತಾರೆ. 2018ರ ಮೇ 29ರಂದು ಸುರಿದ ಧಾರಾಕಾರ ಮಳೆ, ನೆರೆ, ಪ್ರವಾಹವನ್ನು ಜನ ಇನ್ನೂ ಮರೆತಿಲ್ಲ. ಆದರೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.
    2018ರ ಕುಂಭದ್ರೋಣ ಮಳೆಗೆ ಮಂಗಳೂರು ನಗರ ಭಾಗಶಃ ಮುಳುಗಡೆಯಾಗಿತ್ತು. ಅದರಲ್ಲೂ ಕೊಟ್ಟಾರ ಚೌಕಿ, ಮಾಲೆಮಾರ್, ಫೋರ್ತ್ ಮೈಲ್, ಮಾಲಾಡಿ ಎಸ್ಟೇಟ್ ಪ್ರದೇಶದಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ಅಂದು ಒಂದೇ ದಿನಕ್ಕೆ 400 ಮಿ.ಮೀ. ಮಳೆ ಸುರಿದಿದೆ. ಮಹಾನಗರ ಪಾಲಿಕೆ ಮಳೆಗಾಲಕ್ಕೆ ಸಿದ್ಧತೆ ನಡೆಸದೆ, ತೋಡಿನ ಹೂಳುಗಳನ್ನು ತೆಗೆಯದೆ ಮಳೆ ನೀರು ಸರಿಯಾಗಿ ಹರಿದು ಹೋಗಲು ಸಾಧ್ಯವಾಗದೆ ಯಾರೂ ಯೋಚಿಸದಂಥ ಪರಿಸ್ಥಿತಿ ಬಂದಿತ್ತು. 2019ರ ಮಳೆಗಾಲಕ್ಕೆ ಮುನ್ನ ಪಾಲಿಕೆ ಕಾಲುವೆಗಳ ಹೂಳು ತೆಗೆಯಲಾಗಿತ್ತಾರೂ, ಮತ್ತೆ ನೆರೆ ಬಂದು ಜನ ಕಂಗಾಲಾಗಿದ್ದರು.

    ಕಾಟಾಚಾರಕ್ಕೆ ಹೂಳು ತೆರವು
    ಮಹಾನಗರ ಪಾಲಿಕೆಯಿಂದ ಪ್ರತಿವರ್ಷ ಮಳೆಗಾಲಕ್ಕೆ ಮುನ್ನ ಹೂಳು ತೆಗೆಸಲಾಗುತ್ತಾದರೂ ಅದು ಕಾಟಾಚಾರಕ್ಕೆ ಮಾತ್ರ. ಬಿಲ್ ಮಾಡಿ ಹಣ ಹೊಡೆಯುವ ಯೋಜನೆ ಎಂದು ಅದನ್ನು ನೋಡಿದರೆ ತಿಳಿಯುತ್ತದೆ. ಸರಿಯಾಗಿ ಹೂಳು ತೆಗೆದಿದ್ದರೆ ತೋಡುಗಳು ಆಳವಾಗಬೇಕಿತ್ತು. ಆದರೆ ತೋಡುಗಳಲ್ಲಿ ಆರಂಭದಿಂದ ಕೊನೇವರೆಗೆ ಹಲವು ಅಡಿಗಳಷ್ಟು ಹೂಳು ತುಂಬಿದ್ದು, ಮಳೆಗಾಲ ಆರಂಭಕ್ಕೆ ಮುನ್ನ ಕಾಣುವಲ್ಲಿ ತೋರಿಕೆಗೆ ಹೂಳು ತೆಗೆದು ಹೋಗುತ್ತಾರೆ ಎಂದು ಆರೋಪಿಸುತ್ತಾರೆ ಮಾಲೆಮಾರ್ ನಿವಾಸಿ ಸುರೇಶ್ ಉಡುಪ.

    ಕಾಲುವೆಗಳ ಪರಿಶೀಲನೆ
    ವಿಜಯವಾಣಿ ತಂಡ ಸುರೇಶ್ ಉಡುಪ ಹಾಗೂ ಸ್ಥಳಿಯ ನಿವಾಸಿಗಳೊಂದಿಗೆ ಕೊಟ್ಟಾರ ಚೌಕಿಯಾಗಿ ಹರಿಯುವ ಕಾಲುವೆಗಳನ್ನು ಪರಿಶೀಲಿಸಿತು. ಈ ವೇಳೆ ಹಲವು ಅಡಿಗಳಷ್ಟು ಹೂಳು ತುಂಬಿ, ಕಳೆ ಗಿಡಗಳು ಬೆಳೆದಿರುವುದು ಕಂಡು ಬಂದಿದೆ. ಮಾಲೆಮಾರ್‌ನ ನೆರೆಗೆ ಪ್ರಮುಖ ಕಾರಣವಾಗಿರುವ ಲ್ಯಾಂಡ್‌ಲಿಂಕ್ಸ್ ಬಳಿಕ ನಾಗಕನ್ನಿಕಾ ದೇವಳ ಬಳಿಯಿಂದ ಆರಂಭವಾಗುವ ಕಾಲುವೆ ಹಾಗೂ ಕುಂಟಿಕಾನ ಪ್ರದೇಶದಿಂದ ಬರುವ ಕಾಲುವೆ, ಕೊಟ್ಟಾರ ಭಾಗದಿಂದ ಬರುವ ಕಾಲುವೆ ಕೊಟ್ಟಾರ ಚೌಕಿಯಲ್ಲಿ ಒಂದಾಗುತ್ತದೆ. ಅಲ್ಲಿಂದ ಮುಂದಕ್ಕೆ ಮಹೇಶ್ ಕಾಲೇಜು ಮುಂಭಾಗವಾಗಿ ಫೋರ್ತ್‌ಮೈಲ್ ಬಳಿ ಹೆದ್ದಾರಿ ದಾಟಿ, ಎಜೆ ಕಾಲೇಜು ಮುಂಭಾಗದಿಂದ ಬಂಗ್ರಕೂಳೂರು, ದಂಬೆಲ್ ಮೂಲಕ ಗುರುಪುರ ನದಿ ಸೇರುತ್ತದೆ. ಆರಂಭದಿಂದ ಕೊನೆವರೆಗೆ 2 ಅಡಿಯಿಂದ 15 ಅಡಿಗಳಷ್ಟು ಹೂಳು ತುಂಬಿದೆ. ಈ ಬಾರಿಯ ಮಳೆಗೆ ನೆರೆ ಬಾರದಂತೆ ತಡೆಯಬೇಕಾದರೆ ದೊಡ್ಡ ಪ್ರಮಾಣದಲ್ಲಿ ಹೂಳು ತೆಗೆಯಬೇಕಾಗಿದೆ.

    ಪೈಪ್, ಕೇಬಲ್‌ಗಳೇ ಅಡ್ಡಿ
    ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಪೈಪ್, ಕೇಬಲ್‌ಗಳು ಅಡ್ಡಿಯಾಗಿವೆ. ನೀರಿನೊಂದಿಗೆ ಹರಿದು ಬರುವ ಕಸ-ಕಡ್ಡಿಗಳು ಇವುಗಳಿಗೆ ಸಿಲುಕಿ ನೀರು ಹರಿಯಲು ತಡೆಯಾಗುತ್ತದೆ. ಗುಡ್ಡ ಭಾಗದಿಂದ ಬರುವ ಮಣ್ಣ್ಣು-ಮರಳು ಕೂಡ ಇಂಥ ಸ್ಥಳದಲ್ಲಿ ಸಂಗ್ರಹವಾಗುತ್ತದೆ. ಕೆಲವು ಕಡೆಗಳಲ್ಲಿ ಜೆಸಿಬಿ ಯಂತ್ರಗಳಿಂದಲೂ ಇವುಗಳನ್ನು ತೆರವುಗೊಳಿಸಲು ಸಾಧ್ಯವಾಗದೆ, ಹಲವು ವರ್ಷಗಳಿಂದ ಹಾಗೆಯೇ ಉಳಿದುಕೊಂಡಿವೆ. ಕುಡಿಯುವ ನೀರಿನ ಪೈಪ್‌ಗಳನ್ನೂ ಈ ಕಾಲುವೆಗಳಲ್ಲೇ ಅಳವಡಿಸಲಾಗಿದ್ದು, ಕೆಲವೆಡೆ ಲೀಕೇಜ್ ಆಗಿ ಕೊಳಚೆ ನೀರು ಪೈಪ್ ಒಳಗೆ ಹೋಗುತ್ತಿದೆ.

    ಯೆಯ್ಯಡಿ, ಕೊಂಚಾಡಿ, ಮೇರಿಹಿಲ್ ಹೆಲಿಪ್ಯಾಡ್, ಲ್ಯಾಂಡ್‌ಲಿಂಕ್ಸ್ ಸೇರಿದಂತೆ ಸುತ್ತಲಿನ ಎತ್ತರ ಪ್ರದೇಶಗಳ ಸುಮಾರು 15 ಚ.ಕಿ.ಮೀ. ವ್ಯಾಪ್ತಿಯ ನೀರು ಹರಿದು ಕೊಟ್ಟಾರ ಚೌಕಿಗೆ ಹರಿದು ಬರುತ್ತದೆ. ಈ ವೇಳೆ ನೀರು ಹರಿದು ಹೋಗಲು ತಕ್ಕಂತೆ ತೋಡುಗಳಿರಬೇಕು. ಆದರೆ ನಮ್ಮಲ್ಲಿರುವ ತೋಡುಗಳಲ್ಲಿ ಹೂಳು ತುಂಬಿ ನೀರು ಹೋಗಲು ಸಾಧ್ಯವಾಗುತ್ತಿಲ್ಲ. ಹೂಳು ತೆಗೆದರೂ ಕಾಟಾಚಾರಕ್ಕೆ ಮಾತ್ರ. ಇದುವೇ ನೆರೆ ಬರಲು ಕಾರಣ.
    ಸುರೇಶ್ ಉಡುಪ
    ಹೋರಾಟಗಾರ

    ಒಂದು ಮೀಟರ್‌ವರೆಗಿನ ಹೂಳನ್ನು ಪಾಲಿಕೆಯ ಆರೋಗ್ಯ ಇಲಾಖೆ ಮೂಲಕ ತೆಗೆಸಲಾಗುತ್ತದೆ. ಉಳಿದಂತೆ ಪಾಲಿಕೆಯಿಂದ ಗ್ಯಾಂಗ್‌ಗಳನ್ನು ರಚಿಸಿ ಹೂಳು ತೆರವು ಮಾಡಲಾಗುತ್ತದೆ.
    ಶಾನಾಡಿ ಅಜಿತ್ ಕುಮಾರ್ ಹೆಗ್ಡೆ
    ಮಹಾನಗರ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts