More

    ಕುಡಿಯುವ ನೀರು ಅಭಾವಕ್ಕೆ ಸೋರಿಕೆಯೇ ಹೊರೆ

    ಮಂಗಳೂರು: ನಗರದಲ್ಲಿ ಜೀವ ಜಲಕ್ಕೆ ತತ್ವಾರ ಎದುರಾಗಿದೆ. ವಾರದಿಂದೀಚೆಗೆ ದಿನ ಬಿಟ್ಟಿ ದಿನ ರೇಷನಿಂಗ್ ಪ್ರಕ್ರಿಯೆಯಲ್ಲಿ ನೀರು ಪೂರೈಸಲಾಗುತ್ತಿದೆ. ಮಹಾನಗರ ಪಾಲಿಕೆ ಪ್ರಕಾರ ಪೂರೈಕೆಯಾಗುವ ನೀರಿನ ಪೈಕಿ 20 ಎಂಎಲ್‌ಡಿ ನೀರು ವಿವಿಧ ರೂಪಗಳಲ್ಲಿ ಸೋರಿಕೆಯಾಗುತ್ತಿದೆ. ನೀರಿನ ಅಭಾವಕ್ಕೆ ಇದೂ ಒಂದು ಹೊರೆಯಾಗಿದೆ.
    ನಗರದ ಮೇರಿಹಿಲ್‌ನಲ್ಲಿ ಹಲವು ವರ್ಷದಿಂದ ಭಾರಿ ಪ್ರಮಾಣದಲ್ಲಿ ಪೈಪ್‌ನಲ್ಲಿ ನೀರು ಚಿಮ್ಮುತ್ತಿದೆ. ಕೆಪಿಟಿ ಬಳಿಯ ಶರಬತ್ತ್‌ಕಟ್ಟೆ ಬಳಿ ನೀರು ಸೋರಿಕೆಯಾಗುತ್ತಿದೆ. ಕಪಿತಾನಿಯೋ ಬಳಿ ಪೈಪ್ ಒಡೆದು ನೀರು ಪೋಲಾಗುತ್ತಲೇ ಇದೆ. ದಿನವೊಂದಕ್ಕೆ ಒಂದೊಂದು ಕಡೆ ಟ್ಯಾಂಕರ್‌ಗಟ್ಟಲೆ ನೀರು ಪೋಲಾದರೆ ದೊಡ್ಡ ಪ್ರಮಾಣದಲ್ಲಿ ನಷ್ಟ ಎದುರಿಸಿದಂತಾಗಿದೆ.
    ವೆಲೆನ್ಸಿಯಾದಲ್ಲೂ ಕುಡಿಯುವ ನೀರಿನ ಪೈಪ್ ಒಡೆದಿದೆ. ಶಿವಭಾಗ್, ಬಿಜೈ ಮುಂತಾದ ಕಡೆ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿರುವುದು ಆಗಾಗ ಗಮನಕ್ಕೆ ಬರುತ್ತಿವೆ. ನಗರದ ಒಳ ಭಾಗದಲ್ಲೂ ಅಲ್ಲಲ್ಲಿ ಪೈಪ್ ಒಡೆದು ನೀರು ಚಿಮ್ಮುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಇನ್ನು ಅಕ್ರಮ ನಳ್ಳಿ ಸಂಪರ್ಕದ ಮೂಲಕ ನೀರು ಪಡೆಯುವುದು ಬೇರೆಯೇ ಇದೆ. ಮಣ್ಣಿನಡಿಯಲ್ಲಿರುವ ಪೈಪ್‌ಗಳಿಂದ ನೀರು ಪೋಲಾಗಿ ನೆಲದಡಿಗೆ ಇಂಗುವುದು ಗಮನಕ್ಕೆ ಬರುತ್ತಿಲ್ಲ. ತುಂಬೆಯಿಂದ ಪೂರೈಕೆಯಾದ ನೀರು ಸೋರಿಕೆಯಾಗದೆ ಸಮರ್ಪಕ ಬಳಕೆಯಾದರೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯೇ ತಲೆದೋರದು ಎನ್ನುತ್ತಾರೆ ಮನಪಾ ನಿವೃತ್ತ ಹಿರಿಯ ಅಧಿಕಾರಿ.
    ಎರಡು ದಿನಕ್ಕೊಮ್ಮೆ ರೇಷನಿಂಗ್?
    ಬೆಳ್ತಂಗಡಿ, ಸುಬ್ರಹ್ಮಣ್ಯ, ಕಡಬ, ಉಪ್ಪಿನಂಗಡಿ ಮೊದಲಾದ ಕಡೆ ಮಳೆಯಾಗುತ್ತಿರುವುದು ನಿರೀಕ್ಷೆ ಹುಟ್ಟಿಸಿದೆ. ಮಳೆ ನಿರಂತರವಾಗಿ ಬಾರದಿದ್ದರೆ ತುಂಬೆಯಲ್ಲಿ ಇರುವ ನೀರು ಆವಿಯಾಗುತ್ತಿರುವುದರಿಂದ ಮುಂದಿನ ವಾರದಿಂದ ಎರಡು ದಿನಕ್ಕೊಮ್ಮೆ ರೇಷನಿಂಗ್ ಮಾಡುವ ಸಾಧ್ಯತೆ ಬಗ್ಗೆ ಅಧಿಕಾರಿಗಳು ಯೋಚನೆ ನಡೆಸಿದ್ದಾರೆ. ನಗರದಲ್ಲಿ ಸಮಸ್ಯೆ ಇರುವ ಕಡೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದೆ.

    ಹಳೇ ಪೈಪ್ ಕಾರಣ
    ಕುಡಿಯುವ ನೀರು ಪೂರೈಸುವ ಪೈಪ್‌ಗಳು ಹಳೇಯದಾಗಿರುವುದರಿಂದ ನೀರಿನ ಒತ್ತಡ ಹೆಚ್ಚಾಗುವಾಗ ಪೈಪ್ ಒಡೆಯುತ್ತಿವೆ. ಆದರೆ ಒಂದು ವರ್ಷದಿಂದ ಪೈಪ್ ಒಡೆದು ನೀರು ಚಿಮ್ಮುವುದನ್ನು ಸರಿಪಡಿಸದೇ ಇರುವುದು ಪಾಲಿಕೆಯ ನಿರ್ಲಕ್ಷೃವನ್ನು ಸೂಚಿಸುತ್ತದೆ. ಸ್ಥಳೀಯ ಜನಪ್ರತಿನಿಧಿಗಳ ಬೇಜಾವಬ್ದಾರಿಯೂ ಕಾರಣವಾಗಿದೆ. ಇವೆಲ್ಲಾ ಸಣ್ಣ ಮಟ್ಟದಲ್ಲಿ ರಿಪೇರಿ ಮಾಡಬಹುದಾದ ಕೆಲಸಗಳು. ಕೆಲವು ಕಡೆ ಗುಂಡಿ ತೋಡಿ ತಿಂಗಳುಗಟ್ಟಲೆ ಬಿಡುವುದು ಕೂಡ ಅಪಾಯಕ್ಕೆ ಎಡೆ ಮಾಡಿ ಕೊಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ತುಂಬೆಯಿಂದ ಮಂಗಳೂರಿಗೆ ನೀರು ಪೂರೈಕೆ ಸಂದರ್ಭ ಸೋರಿಕೆಯಾಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಗರದ ಜನತೆ ನೀರನ್ನು ಮಿತವಾಗಿ ಬಳಸಿ ಆಡಳಿತದೊಂದಿಗೆ ಸಹಕರಿಸಬೇಕು.
    ಚನ್ನಬಸಪ್ಪ ಕೆ.
    ಮನಪಾ ಆಯುಕ್ತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts