More

    ಲಾಕ್‌ಡೌನ್‌ಗೆ ಮಂಡ್ಯ ಸ್ತಬ್ಧ

    ಮಂಡ್ಯ: ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಭಾನುವಾರದ ಲಾಕ್‌ಡೌನ್‌ಗೆ ಎರಡನೇ ವಾರವೂ ಜಿಲ್ಲಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು.

    ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿಯೂ ಲಾಕ್‌ಡೌನ್ ಬಹುತೇಕ ಯಶಸ್ವಿಯಾಯಿತು. ಬೆರಳೆಣಿಕೆಯಯಷ್ಟು ದ್ವಿಚಕ್ರ ವಾಹನದ ಸಂಚಾರ ಹೊರತುಪಡಿಸಿದರೆ ಉಳಿದಂತೆ ಎಲ್ಲವೂ ಸ್ತಬ್ಧವಾಗಿತ್ತು. ಜನರು ಸ್ವಯಂ ಪ್ರೇರಿತವಾಗಿ ಮನೆ ಸೇರಿಕೊಳ್ಳುವ ಮೂಲಕ ಲಾಕ್‌ಡೌನ್‌ಗೆ ಬೆಂಬಲ ಸೂಚಿಸಿದರು.

    ಸ್ವಯಂಪ್ರೇರಿತ ದಿಗ್ಬಂಧನ: ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆ ವರೆಗೆ ಜನರು ಮನೆ ಬಿಟ್ಟು ಹೊರಬರದಂತೆ ಸ್ವಯಂ ನಿರ್ಬಂಧ ವಿಧಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದರು. ಇದಕ್ಕೆ ಸ್ಪಂದಿಸಿದ ಜನರು ಕರೊನಾ ಸೃಷ್ಟಿಸುತ್ತಿರುವ ಆತಂಕದ ವಾತಾವರಣಕ್ಕೆ ಹೆದರಿ ದಿನವಿಡೀ ಮನೆ ಬಿಟ್ಟು ಹೊರಬರುವುದಕ್ಕೆ ಮನಸ್ಸು ಮಾಡಲಿಲ್ಲ.
    ಇನ್ನು ಯಾವಾಗಲೂ ವಾಹನ ದಟ್ಟಣೆಯಿಂದ ಕೂಡಿದ್ದ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ನಾಲ್ವಡಿ ಕೃಷ್ಣರಾಜ ಒಡೆಯರ್, ಮಹಾವೀರ, ಹೊಸಹಳ್ಳಿ, ಎಸ್.ಡಿ.ಜಯರಾಂ, ಸಕ್ಕರೆ ಕಂಪನಿ ವೃತ್ತ, ಹೊಳಲು ವೃತ್ತಗಳೆಲ್ಲವೂ ಜನರು ಹಾಗೂ ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ನಗರದ ಅಂಗಡಿ ಮುಂಗಟ್ಟು ಗಳೆಲ್ಲವೂ ಸಂಪೂರ್ಣ ಬಂದ್ ಆಗಿದ್ದವು. ಔಷಧ ಅಂಗಡಿ, ಆಸ್ಪತ್ರೆ, ಪೆಟ್ರೋಲ್ ಬಂಕ್, ಕುಡಿಯುವ ನೀರು, ಹಾಲು, ತರಕಾರಿ ಮಾರಾಟ ಮಳಿಗೆಗಳ ಬಾಗಿಲು ಮಾತ್ರ ತೆರೆದಿದ್ದವು. ಇದರ ನಡುವೆಯೂ ಮಾಂಸ ಮಾರಾಟ ನಡೆಯಿತು.

    ಹೋಟೆಲ್‌ಗಳಲ್ಲಿ ತಿಂಡಿ-ತಿನಿಸುಗಳನ್ನು ಪಾರ್ಸಲ್‌ಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಸಣ್ಣಪುಟ್ಟ ಹೋಟೆಲ್ ಮತ್ತು ಟೀ ಅಂಗಡಿ ಬೆಳಗ್ಗೆ ಎಂದಿನಂತೆ ತೆರೆದು ವ್ಯಾಪಾರ ವಹಿವಾಟು ನಡೆಸಿದರಾದರೂ, ಹೊತ್ತು ಏರುತ್ತಿದ್ದಂತೆ ಕೆಲವರು ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿದರೆ, ಇನ್ನು ಕೆಲವರು ಗ್ರಾಹಕರಿಗಾಗಿ ಕಾದು ಕುಳಿತಿದ್ದೂ ಕಂಡುಬಂತು.

    ಸಾರಿಗೆ ಮತ್ತು ಖಾಸಗಿ ಬಸ್, ಆಟೋ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ರಸ್ತೆಗಳಲ್ಲಿ ಅಲ್ಲೊಂದು-ಇಲ್ಲೊಂದು ವಾಹನಗಳು ಮಾತ್ರ ಸಂಚರಿಸುತ್ತಿದ್ದವು. ದ್ವಿಚಕ್ರ ವಾಹನಗಳಲ್ಲೂ ಓಡಾಡುವವರ ಸಂಖ್ಯೆಯೂ ತೀರಾ ಕಡಿಮೆ ಇತ್ತು. ವರ್ತಕರು, ವ್ಯಾಪಾರಿಗಳು ಯಾರೂ ಸ್ವಯಂಪ್ರೇರಿತರಾಗಿ ತರಕಾರಿ, ಹೂವು, ಹಣ್ಣು ಮಾರಾಟ ಮಾಡುವುದಕ್ಕೆ ಮುಂದಾಗಲಿಲ್ಲ. ಲಾಕ್‌ಡೌನ್ ಬೆಂಬಲಿಸಿ ವ್ಯಾಪಾರ-ವಹಿವಾಟಿನಿಂದ ಸಂಪೂರ್ಣ ದೂರ ಉಳಿದಿದ್ದರಿಂದ ಬಿಕೋ ಎನ್ನುವಂತಾಗಿತ್ತು. ಕೆಲ ಹೂವು, ಹಣ್ಣಿನ ಅಂಗಡಿಗಳನ್ನು ತೆರೆದು ವ್ಯಾಪಾರಕ್ಕೆ ಮುಂದಾದರಾದರೂ, ಜನರು ಮನೆಯಿಂದ ಹೊರಬರದ ಕಾರಣ ಕಾದು ಕಾದು ಸುಸ್ತಾದರು.

    ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳೂ ಕಾರ್ಯಚಟುವಟಿಕೆ ಸ್ಥಗಿತಗೊಳಿಸಿದ್ದವು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಶನಿವಾರವೇ ಹಲವರು ಅಗತ್ಯವಿರುವಷ್ಟು ಮದ್ಯವನ್ನು ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದರು. ಅಗತ್ಯ ವಸ್ತುಗಳನ್ನೂ ಕೊಂಡು ತಂದು ಮನೆಯಲ್ಲಿಟ್ಟುಕೊಂಡ ಜನತೆ ಭಾನುವಾರ ಸಂಪೂರ್ಣ ರಿಲ್ಯಾಕ್ಸ್ ಮೂಡ್‌ಗೆ ಜಾರಿ ವಿಶ್ರಾಂತಿಗೆ ಮೊರೆಹೋಗಿದ್ದರು.

    ಇನ್ನು ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ನಾಗಮಂಗಲ ಹಾಗೂ ಪಾಂಡವಪುರ ತಾಲೂಕು ಕೇಂದ್ರದಲ್ಲೂ ಲಾಕ್‌ಡೌನ್ ಸಂಪೂರ್ಣ ಯಶಸ್ವಿಯಾಗಿತ್ತು. ಹೋಬಳಿ ಕೇಂದ್ರ, ಗ್ರಾಮೀಣ ಭಾಗದಲ್ಲಿಯೂ ಲಾಕ್‌ಡೌನ್‌ಗೆ ಬೆಂಬಲ ಸಿಕ್ಕಿತ್ತು.

    ಹಸಿವು ನೀಗಿಸಿದ ಇಂದಿರಾ ಕ್ಯಾಂಟೀನ್: ಕೂಲಿ ಕಾರ್ಮಿಕರು, ಬಡವರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ತೆರೆಯಲಾಗಿದ್ದ ಇಂದಿರಾ ಕ್ಯಾಂಟೀನ್‌ಗಳು ಎಂದಿನಂತೆ ಬಾಗಿಲು ತೆರೆದು ಬಡವರ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿದ್ದವು.
    ಹೋಟೆಲ್‌ಗಳಲ್ಲಿ ಹೆಚ್ಚಿನ ಹಣ ಕೊಟ್ಟು ತಿಂಡಿ-ತಿನಿಸುಗಳನ್ನು ಕೊಂಡು ಹೊಟ್ಟೆ ತುಂಬಿಸಿಕೊಳ್ಳಬೇಕು. ಕೂಲಿ ಕಾರ್ಮಿಕರು ಇತ್ತ ಕೆಲಸವೂ ಇಲ್ಲದೆ, ಕೈಯಲ್ಲಿ ಹಣವೂ ಇಲ್ಲದ ಕಾರಣ ಕೆಲವರು ಇಂದಿರಾ ಕ್ಯಾಂಟೀನ್‌ಗಲ್ಲಿ ದೊರೆಯುವ ಉಪಹಾರ, ಊಟ ಸೇವಿಸಿದರು. ಆದರೆ, ಸಾಮಾನ್ಯ ದಿನಗಳಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡುಬರಲಿಲ್ಲವಾದರೂ 20 ರಿಂದ 30 ಜನರು ತಿಂಡಿ-ಊಟ ಸೇವನೆ ಮಾಡಿದ್ದು ಕಂಡುಬಂದಿತು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts