More

    ಇಂದಿನಿಂದ ಆಹಾರದ ಕಿಟ್ ವಿತರಣೆ

    ಮಂಡ್ಯ: ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಕುಟುಂಬದವರ ಪೈಕಿ 10 ಸಾವಿರ ಬಡ ಜನರಿಗೆ ಮೇ 22ರಿಂದ ಆಹಾರದ ಕಿಟ್ ವಿತರಿಸಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಹಮದ್ ಜಪ್ರುಲ್ಲಾಖಾನ್ ತಿಳಿಸಿದರು.
    ತಮ್ಮ ಪತ್ನಿ ಸಲ್ಮಾ ಫರ್ವೀನ್ ಖಾನಂ ಅಧ್ಯಕ್ಷತೆಯ ಪಾಮ್ ಫೌಂಡೇಷನ್ ಮೂಲಕ ಐದು ಸಾವಿರ ಹಾಗೂ ವೈಯಕ್ತಿಕವಾಗಿ ಐದು ಸಾವಿರ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರು, ಮಹಿಳೆಯರು ಸೇರಿದಂತೆ ಉದ್ಯೋಗವಿಲ್ಲದೆ ಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ. ಎಲ್ಲ ಧರ್ಮ, ಜಾತಿ ಮತ್ತು ಪಕ್ಷದವರಿಗೂ ಕಿಟ್ ವಿತರಿಸಲಾಗುವುದು. ಇದಕ್ಕೆ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ನನ್ನ ಜನ್ಮಭೂಮಿ ಮಂಡ್ಯ, ನಮ್ಮ ಕುಟುಂಬದ ಕರ್ಮಭೂಮಿ ದುಬೈ. ಅಲ್ಲಿ ನೆಲೆಸಿರುವ ನನ್ನ ಕುಟುಂಬಸ್ಥರು ಮಂಡ್ಯ ಜಿಲ್ಲೆಯ ಜನತೆಗೆ ಕೈಲಾದಷ್ಟು ಅಳಿಲು ಸೇವೆ ಮಾಡಬೇಕೆಂಬ ಆಕಾಂಕ್ಷೆ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಕಿಟ್ ವಿತರಿಸುತ್ತಿದ್ದು, ಇದರಲ್ಲಿ ಯಾವುದೇ ಸ್ವಾರ್ಥ ಅಥವಾ ರಾಜಕೀಯ ಕಾರಣವಿಲ್ಲ. ಮಂಡ್ಯ ನಗರದ 35 ವಾರ್ಡ್‌ಗಳಲ್ಲಿಯೂ ಕಿಟ್ ವಿತರಿಸಲು ಮಹಿಳಾ ತಂಡ ಸಿದ್ಧವಾಗಿದ್ದು, ಈಗಾಗಲೇ ಫಲಾನುಭವಿಗಳಿಗೆ ಕೂಪನ್ ಸಹ ವಿತರಣೆ ಮಾಡಲಾಗಿದೆ. ಕೂಪನ್ ತೋರಿಸಿ ಆಹಾರದ ಕಿಟ್ ಪಡೆಯಬಹುದು ಎಂದರು.
    ಈಗಾಗಲೇ ಜಿಲ್ಲಾಡಳಿತದ ಅಧೀನದಲ್ಲಿ ಕ್ವಾರಂಟೈನಲ್ಲಿರುವವರ ಸಹಾಯಕ್ಕಾಗಿ 1000 ಕಿಟ್‌ಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಅಂತೆಯೇ, ಫಲಾನುಭವಿಗಳು ಕಾನೂನು ಉಲ್ಲಂಘಿಸದೆ ದೈಹಿಕ ಅಂತರ ಕಾಪಾಡಿಕೊಂಡು ಕಿಟ್ ಪಡೆಯಬೇಕೆಂದು ಮನವಿ ಮಾಡಿದ ಅವರು, ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮುಸ್ಲಿಮರು ರಂಜಾನ್ ಹಬ್ಬವನ್ನು ಆಚರಣೆ ಮಾಡುವುದು ಸರಿಯಲ್ಲ. ಅದರ ಬದಲು ಸಮಾಜದ ಬಡವರಿಗೆ ಸಹಾಯ ಮಾಡೋಣ ಎಂದು ಕಿವಿಮಾತು ಹೇಳಿದರು.
    ಮೂರ‌್ನಾಲ್ಕು ವರ್ಷದಿಂದ ಪಾಮ್ ಫೌಂಡೇಷನ್ ವತಿಯಿಂದ ಆನೇಕ ಸಮಾಜಮುಖಿ ಕಾರ್ಯವನ್ನು ನಿರಂತರವಾಗಿ ಮಾಡುತ್ತ್ತಿದೆ ಎಂದ ಅವರು, ಮೇ 22ರಂದು ಬೆಳಗ್ಗೆ 10.30ಕ್ಕೆ ನಗರದ ಆರ್‌ಸಿ ರಸ್ತೆಯಲ್ಲಿರುವ ಉರ್ದು ಶಾಲೆಯಲ್ಲಿ ಕರೊನಾ ಸೇನಾನಿಗಳಿಗೆ ಮತ್ತು ಬಡವರಿಗೆ ಸಾಂಕೇತಿಕವಾಗಿ ಕಿಟ್ ವಿತರಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts