More

    ನೀರು ಬಳಕೆದಾರರ ಸಂಘ ನಿಷ್ಕ್ರಿಯ

    ಮಂಡ್ಯ: ಸಮರ್ಪಕ ನೀರು ನಿರ್ವಹಣೆಗಾಗಿ ಕಾವೇರಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ 629 ನೀರು ಬಳಕೆದಾರರ ಸಹಕಾರ ಸಂಘ ಸ್ಥಾಪಿಸಲಾಗಿದೆ. ಆದರೆ, ಇದರಲ್ಲಿ ಕೆಲ ಸಂಘಗಳು ನಿಷ್ಕ್ರಿಯಗೊಂಡಿವೆ ಎಂದು ಕೃಷ್ಣರಾಜಸಾಗರ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಮಂಗಲ ಎಂ.ಯೋಗೀಶ್ ಬೇಸರ ವ್ಯಕ್ತಪಡಿಸಿದರು.
    ತಾಲೂಕಿನ ಮಂಗಲ ಗ್ರಾಮದಲ್ಲಿ ಮೈಸೂರಿನ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಕಾವೇರಿ ಜಲಾನಯನ ಯೋಜನೆಗಳ ವತಿಯಿಂದ ಬುಧವಾರ ಆಯೋಜಿಸಿದ್ದ ನೀರು ಬಳಕೆದಾರರ ಸಹಕಾರ ಸಂಘಗಳ ಸಹಕಾರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ಸಂಘಗಳನ್ನು ಪುನಶ್ಚೇತನಗೊಳಿಸಲು ಮಹಾಮಂಡಲ, ಕಾಡಾದಿಂದ ಹಲವು ಕಾರ್ಯ ಯೋಜನೆ ರೂಪಿಸಲಾಗಿದೆ ಎಂದರು.
    ಸಹಕಾರ ತತ್ವದಡಿ ನೀರು ನಿರ್ವಹಣೆ ಮಾಡಿಕೊಂಡಾಗ ರೈತರು ಬೆಳೆ ಪದ್ಧತಿಗಳಲ್ಲಿ ಮಾರ್ಪಾಡು ಮಾಡಿಕೊಂಡು ಹಂತ ಹಂತವಾಗಿ ವಾಣಿಜ್ಯ ಬೆಳೆಗಳನ್ನು ಬೆಳೆದರೆ ಸ್ವಾವಲಂಬನೆ ಜೀವನ ನಡೆಸಲು ಸಾಧ್ಯ. ಸಮಾನ ಮನಸ್ಕರು, ಅಚ್ಚುಕಟ್ಟುದಾರರು ಆರ್ಥಿಕವಾಗಿ ಲಾಭದಾಯಕವಾಗುವ ಚಟುವಟಿಕೆಯನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಎಲ್ಲ ಸದಸ್ಯರ ಒಳಿತಿಗಾಗಿ ಕಾರ್ಯ ನಿರ್ವಹಿಸಬೇಕಿರುವುದು ಸಹಕಾರ ಪ್ರತಿನಿಧಿಗಳ ಕರ್ತವ್ಯ ಎಂದು ತಿಳಿಸಿದರು.
    ಕೃಷಿ ಇಲಾಖೆ ನಿವೃತ್ತ ಸಹಾಯಕ ಹೊಂಬಯ್ಯ ಮಾತನಾಡಿದರು. ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ವೇಣುಗೋಪಾಲ್ ನಿಗಮದ ಕಾರ್ಯ ಯೋಜನೆಗಳನ್ನು ವಿವರಿಸಿದರು. ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಶಂಕರೇಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಚಂದ್ರಶೇಖರ್, ನಿರ್ದೇಶಕರಾದ ಲೀಲಾ, ರೇಖಾ, ಕೃಷ್ಣ, ಮಲ್ಲೇಶ, ನಾಗರಾಜು, ಇಂಜಿನಿಯರ್‌ಗಳಾದ ವಿದ್ಯಾಸಾಗರ್, ರೇಖಾ, ಪ್ರಕಾಶ್, ಚೇತನ್, ಕಾಡಾ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ್, ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts