More

    ಕಾರ್ಖಾನೆ ಪುನರಾರಂಭಕ್ಕೆ ಸರ್ಕಾರ ಬದ್ಧ

    ಮಂಡ್ಯ: ಜಿಲ್ಲೆಯ ಜೀವನಾಡಿ ಆಗಿರುವ ಮೈಶುಗರ್ ಮತ್ತು ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗಳ ಪುನರಾರಂಭಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದ್ದು, ಈ ಕುರಿತು ಜನವರಿ ಅಂತ್ಯಕ್ಕೆ ಸ್ಪಷ್ಟ ನಿರ್ಧಾರ ಮಾಡಲಾಗುವುದು ಎಂದು ಸಕ್ಕರೆ ಸಚಿವ ಸಿ.ಟಿ.ರವಿ ಹೇಳಿದರು.
    ನಗರದ ಮೈಶುಗರ್ ಕಾರ್ಖಾನೆಯಲ್ಲಿ ಮಂಗಳವಾರ ಜನಪ್ರತಿನಿಧಿಗಳು, ಅಧಿಕಾರಿಗಳು, ನೌಕರರು ಮತ್ತು ರೈತ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

    ಈ ಕಾರ್ಖಾನೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಮುಂದುವರಿಸಬೇಕೋ ಅಥವಾ ಸರ್ಕಾರವೇ ನಡೆಸಬೇಕೋ ಎನ್ನುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಜೂನ್ ವೇಳೆಗೆ ಕಬ್ಬು ಅರೆಯುವಂತೆ ಮಾಡಲು ಸಿದ್ಧಗೊಳಿಸಲಾಗುವುದು. 2019ರಲ್ಲಿ 34 ಲಕ್ಷ ಟನ್ ಕಬ್ಬು ಉತ್ಪಾದನೆಯಾಗಿದ್ದು, ಮುಂದಿನ ವರ್ಷ 60 ಲಕ್ಷ ಟನ್ ತಲುಪುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಕಬ್ಬು ಅರೆಯುವಿಕೆಗೆ ಆದ್ಯತೆ ನೀಡುವುದಾಗಿ ತಿಳಿಸಿದರು.

    ಹತ್ತು ವರ್ಷಗಳ ಅವಧಿಯಲ್ಲಿ ಮೈಶುಗರ್‌ಗೆ 428 ಕೋಟಿ ರೂ. ಅನುದಾನ ನೀಡಲಾಗಿದೆ. ಆದರೂ, ಕಾರ್ಖಾನೆ ನಿರೀಕ್ಷಿತ ಪ್ರಗತಿ ಕಾಣಲಿಲ್ಲ. ಖಾಸಗಿಯವರು ಸಾಲ ಮಾಡಿ ಕಾರ್ಖಾನೆ ಸ್ಥಾಪಿಸಿ 2-3 ವರ್ಷದಲ್ಲೇ ಹೊಸ ಕಾರ್ಖಾನೆ ಸ್ಥಾಪಿಸುತ್ತಾರೆ. ಆದರೆ, ಬೆಂಗಳೂರಿನಲ್ಲಿ 1 ಎಕರೆ 10 ಗುಂಟೆ, ಮಂಡ್ಯದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ಇಟ್ಟುಕೊಂಡು ಕಂಪನಿ ನಡೆಸಲು ಸಾಧ್ಯವಾಗುತ್ತಿಲ್ಲವೇಕೆ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

    ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರದ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸಲಾಗುವುದು. ಯಾವಾಗ ಕಾರ್ಖಾನೆ ನಷ್ಟಕ್ಕೆ ಒಳಗಾಯಿತು, ಸ್ಥಗಿತಕ್ಕೆ ಕಾರಣವೇನು, ಆರ್ಥಿಕ ಅವ್ಯವಹಾರಗಳಿಗೆ ಹೊಣೆ ಯಾರು, ಯಾರ ಕಾಲಘಟ್ಟದಲ್ಲಿ ಎಷ್ಟೆಷ್ಟು ತನಿಖೆಯಾಗಿದೆ ಎನ್ನುವ ಅಂಶಗಳನ್ನು ತನಿಖೆಗೆ ಸೇರಿಸಿಕೊಳ್ಳಲಾಗುವುದು. ತಪ್ಪಿತಸ್ಥರಾಗಿದ್ದರೆ ಶಿಕ್ಷೆ ಅನುಭವಿಸಲೇಬೇಕು ಎಂದು ನುಡಿದರು.

    ರೈತ ಮುಖಂಡರು, ಜನಪ್ರತಿನಿಧಿಗಳು, ನೌಕರರು ಹಾಗೂ ಆಡಳಿತ ಮಂಡಳಿ ಜತೆ ಚರ್ಚಿಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಆಡಳಿತ ಮಂಡಳಿ ಕಾರ್ಯವೈಖರಿ, ನೌಕರರು ಹಾಗೂ ಕಾರ್ಖಾನೆ ತಾಂತ್ರಿಕತೆ ಬಗ್ಗೆ ಒಂದಷ್ಟು ಗೊಂದಲಗಳಿವೆ. ಆದರೆ, ಕಬ್ಬು ಅರೆಯುವ ವಿಷಯದಲ್ಲಿ ಎಲ್ಲರ ಭಾವನೆಗಳು ಒಂದೇ ಆಗಿವೆ ಎಂದರು.

    ಸಂಸದೆ ಸುಮಲತಾ ಅಂಬರೀಷ್, ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಇತರರಿದ್ದರು.

    ಮೈಶುಗರ್ ಖಾಸಗೀಕರಣ ಬೇಡ: ಮೈಶುಗರ್ ಕಾರ್ಖಾನೆಯನ್ನು ಗುತ್ತಿಗೆಗೆ ನೀಡಿ. ಆದರೆ, ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬೇಡಿ ಎಂದು ರೈತ ಮುಖಂಡರು ಒತ್ತಾಯಿಸಿದರು.

    ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಹಲವರು, ಕಾರ್ಖಾನೆ ಸರ್ಕಾರದ ಸ್ವಾಧೀನದಲ್ಲೇ ಇರಬೇಕು. ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸುವ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಬೇಕೆಂದು ಸಲಹೆ ನೀಡಿದರು.

    ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಮೈಶುಗರ್‌ನಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಆದರೆ, ಈವರೆಗೆ ಒಬ್ಬರಿಗೂ ಶಿಕ್ಷೆಯಾಗಿಲ್ಲ. ನಾಲ್ಕೈದು ವರ್ಷಗಳಿಂದ ಆಡಿಟ್ ವರದಿಯೇ ಆಗಿಲ್ಲ ಎಂದ ಮೇಲೆ ಲೋಪ-ದೋಷಗಳೇನು ಎನ್ನುವುದು ಯಾರಿಗೂ ಗೊತ್ತಾಗುತ್ತಿಲ್ಲ ಎಂದರು.

    ಈ ಕುರಿತು ಮಾಹಿತಿ ನೀಡುವಂತೆ ಸಚಿವ ಸಿ.ಟಿ.ರವಿ ಹೇಳಿದಾಗ, 2014-15ರವರೆಗೆ ಆಡಿಟ್ ಪೂರ್ಣಗೊಂಡಿದೆ. ಉಳಿದ ನಾಲ್ಕು ವರ್ಷಗಳ ಲೆಕ್ಕ ಪರಿಶೋಧನಾ ವರದಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.

    ರೈತ ಮುಖಂಡ ಬೋರಯ್ಯ ಮಾತನಾಡಿ, ಅಧಿಕಾರಿಗಳು ಕಾರ್ಖಾನೆಗೆ ತರಬೇತಿಗೆಂದು ಬಂದವರನ್ನು ನೇಮಕ ಮಾಡಿಕೊಂಡು ಕಂಪನಿಯನ್ನು ನಡೆಸಿದ್ದೇ ಇಲ್ಲಿನ ವ್ಯವಸ್ಥೆ ಹಾಳಾಗಲು ಕಾರಣ. ಎಫ್‌ಡಿಎ ಹುದ್ದೆಯಲ್ಲಿದ್ದವರನ್ನು ಮುಖ್ಯ ವ್ಯವಸ್ಥಾಪಕರ ಹುದ್ದೆಗೆ ತಂದಿದ್ದಾರೆ. ಇಂಥವರಿಂದ ಕಾರ್ಖಾನೆ ಉದ್ಧಾರ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

    ಮೈಶುಗರ್ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ ಮಾತನಾಡಿ, ಸರ್ಕಾರಗಳು ಬಿಡುಗಡೆ ಮಾಡಿದ 428 ಕೋಟಿ ರೂ. ಕಾರ್ಖಾನೆ ಅಭಿವೃದ್ಧಿಗೆ ಬಳಕೆ ಆಗಲೇ ಇಲ್ಲ. ಸಾಲ, ಸಂಬಳ, ಯಂತ್ರೋಪಕರಣಗಳ ದುರಸ್ತಿಗೆ ಖರ್ಚು ಮಾಡಲಾಗಿದೆ ಎಂದರು.

    ರೈತ ಮುಖಂಡ ಸುಧೀರ್‌ಕುಮಾರ್ ಮಾತನಾಡಿ, ವಿದ್ಯುತ್ ಘಟಕ ಸ್ಥಾಪಿಸಿ ಈವರೆಗೂ ಒಂದು ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಿಲ್ಲ. ಕಾರ್ಖಾನೆ ಆಸ್ತಿಯನ್ನು ಕಾಪಾಡುವ ಇಚ್ಛಾಶಕ್ತಿ ಯಾರಲ್ಲೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಅಭಿಪ್ರಾಯ ಸಂಗ್ರಹಿಸಿದ ಸಚಿವ ಸಿ.ಟಿ.ರವಿ, ಕಾರ್ಖಾನೆ ಆರಂಭಿಸಲು ಸರ್ಕಾರ ಬದ್ಧ ಎಂದರು.

    ನಿಗೂಢ ರಹಸ್ಯ ಬಯಲಾಗಬೇಕು: ಕಾರ್ಖಾನೆಯಲ್ಲಿ ನಡೆದಿರುವ ಅವ್ಯವಹಾರ ದೊಡ್ಡ ಅಪರಾಧ. ಆದರೆ, ಇದನ್ನು ಮಾಡಿದವರು ಯಾರು, ಕಾರ್ಖಾನೆ ದುಸ್ಥಿತಿಗೆ ಹೊಣೆ ಯಾರು ಎನ್ನುವುದು ನಿಗೂಢ ರಹಸ್ಯವಾಗಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ಅಸಮಾಧಾನ ವ್ಯಕ್ತಪಡಿಸಿದರು.
    ಅವ್ಯವಹಾರ ನಡೆಸಿರುವವರನ್ನು ಸುಮ್ಮನೆ ಬಿಡಬಾರದು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಮುಂದಿನವರಿಗೆ ಅದು ಪಾಠವಾಗಬೇಕು. ರೈತರ ಹಿತದೃಷ್ಟಿಯಿಂದ ಮೊದಲು ಕಾರ್ಖಾನೆಗಳ ಆರಂಭಕ್ಕೆ ಒತ್ತು ನೀಡಬೇಕಿದೆ. ನೌಕರರ ಹಂತದಿಂದ ಹಿಡಿದು ಸರ್ಕಾರದವರೆಗೆ ಇರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಶೀಘ್ರ ನಿವಾರಣೆ ಮಾಡಬೇಕು. ರಾಜಕೀಯ ಕಾರಣ, ಪ್ರತಿಷ್ಠೆಯನ್ನು ಪಕ್ಕಕ್ಕಿಟ್ಟು ರೈತರ ಹಿತ ಮತ್ತು ಕಾರ್ಖಾನೆ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಎಲ್ಲರೂ ಶ್ರಮಿಸೋಣ ಎಂದರು.

    ಕಾರ್ಮಿಕರ ಕಡಿತ ಅನಿವಾರ್ಯ: ಪ್ರಸ್ತುತ ಪರಿಸ್ಥಿತಿ ಅವಲೋಕಿಸಿದರೆ ಮೈಶುಗರ್ ಕಾರ್ಖಾನೆಯಲ್ಲಿ ಕಾರ್ಮಿಕರ ಸಂಖ್ಯೆ ಕಡಿತಗೊಳಿಸುವುದು ಅನಿವಾರ್ಯ ಎಂದು ಸಚಿವ ಸಿ.ಟಿ.ರವಿ ಹೇಳಿದರು.

    ಕಾರ್ಖಾನೆಯ ಅತಿಥಿಗೃಹದಲ್ಲಿ ನೌಕರರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಆಧುನಿಕ ಯಂತ್ರೋಪಕರಣ ಅಳವಡಿಸಿದರೆ 50 ನೌಕರರು, ಈಗಿರುವ ತಾಂತ್ರಿಕತೆಯಲ್ಲೇ ಮುನ್ನಡೆಸಿದರೆ 90 ರಿಂದ 100 ಕಾರ್ಮಿಕರು ಸಾಕು. ಪ್ರಸ್ತುತ 285 ಕಾರ್ಮಿಕರಿದ್ದು, ಇದು ಕಾರ್ಖಾನೆಗೆ ಸಮಸ್ಯೆಯಾಗಿದೆ ಎಂದರು.

    ನೌಕರ ಸಿದ್ದೇಗೌಡ ಮಾತನಾಡಿ, ಈಗಾಗಲೇ ಸ್ವಯಂ ನಿವೃತ್ತಿಗೆ 119 ನೌಕರರು ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರವೇ ವಿಆರ್‌ಎಸ್ ಕೊಟ್ಟಿಲ್ಲ. ಅವರಿಗೆ ಸ್ವಯಂ ನಿವೃತ್ತಿ ಕೊಟ್ಟಲ್ಲಿ ಕಾರ್ಖಾನೆಗೆ ನೌಕರರ ಭಾರ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನೌಕರ ವರ್ಗದಲ್ಲಿ ತಾಂತ್ರಿಕ ನೈಪುಣ್ಯತೆ ಕೊರತೆ ಇರುವವರೂ ಹೆಚ್ಚಾಗಿದ್ದಾರೆ. ಅವರನ್ನೂ ಗಣನೆಗೆ ತೆಗೆದುಕೊಳ್ಳಬೇಕಿದೆ. ಈಗ ನೌಕರರನ್ನು ಉಳಿಸಿಕೊಳ್ಳುವುದೋ, ಬಿಡುವುದೋ ಎನ್ನುವುದಕ್ಕಿಂತ ಕಾರ್ಖಾನೆಯ ಆರಂಭಕ್ಕೆ ಕ್ರಮ ಜರುಗಿಸಲಾಗುವುದು ಎಂದಾಗ ಕಾರ್ಮಿಕ ಮುಖಂಡರು, ಸರ್ಕಾರದಿಂದ ನೆರವು ನೀಡಿ ಕಬ್ಬು ಅರೆಸಿದರೆ ಶ್ರಮ ವಹಿಸಿ ದುಡಿಯುತ್ತೇವೆ. ಸರ್ಕಾರಿ ಸ್ವಾಮ್ಯದಲ್ಲೇ ಕಂಪನಿಯನ್ನು ಮುನ್ನಡೆಸಿ ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts