More

    ಮತದಾನ ಎಲ್ಲರ ಹಕ್ಕು, ಕರ್ತವ್ಯ

    ಮಂಡ್ಯ: ಮತದಾನ ಮಾಡುವುದು ಎಲ್ಲರ ಹಕ್ಕು ಹಾಗೂ ಕರ್ತವ್ಯ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
    ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಲು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಆಯೋಜಿಸಿದ್ದ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
    ಪ್ರಜಾಪ್ರಭುತ್ವಕ್ಕೆ ನಾವೆಲ್ಲರೂ ಭದ್ರಬುನಾದಿ ಮತ್ತು ಶಕ್ತಿಯಾಗಬೇಕಾದರೇ 18 ವರ್ಷ ತುಂಬಿದ ಭಾರತೀಯ ನಾಗರಿಕರೆಲ್ಲರೂ ಪ್ರಥಮವಾಗಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಜತೆಗೆ ಚುನಾವಣಾ ಸಂದರ್ಭದಲ್ಲಿ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಸಲಹೆ ನೀಡಿದರು.
    ಜಿಲ್ಲಾದ್ಯಂತ ಎಲ್ಲ ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ಜ.6 ರಿಂದ 8ರವರೆಗೆ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅದರಂತೆ 2020 ಜ.1ಕ್ಕೆ 18ವರ್ಷ ಪೂರ್ಣಗೊಂಡಿರುವಂತ ಯುವಕ, ಯುವತಿಯರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.
    ನೋಂದಣಿ ಬಗ್ಗೆ ಜಿಲ್ಲಾ ಕೇಂದ್ರದಿಂದ ಗ್ರಾಮ ಪಂಚಾಯಿತಿವರೆಗೂ ಜಾಗೃತಿ ಮೂಡಿಸಲಾಗಿದೆ. ಮತದಾನ ನೋಂದಣಿಗಾಗಿ ಆಯಾ ಮತದಾರರು ತಮ್ಮ ತಾಲೂಕು ಕಚೇರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
    ಜಿ.ಪಂ ಸಿಇಒ ಕೆ.ಯಾಲಕ್ಕಿಗೌಡ ಮಾತನಾಡಿ, ನೋಂದಣಿ ಮಾಡಿಕೊಳ್ಳುವುದರ ಜತೆಗೆ ಚುನಾವಣಾ ಸಂದರ್ಭದಲ್ಲಿ ಮತದಾನ ಮಾಡಬೇಕು. ಮತದಾರರು ಪ್ರಜಾಪ್ರಭುತ್ವದ ನೇತಾರರು. ಹೀಗಾಗಿ ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವವನ್ನು ಮುನ್ನಡೆಸೋಣ ಎಂದು ಹೇಳಿದರು. ಜಿಲ್ಲಾ ವಾರ್ತಾಧಿಕಾರಿ ಟಿ.ಕೆ.ಹರೀಶ್, ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts