More

    ಜಿಲ್ಲೆಯಲ್ಲಿ ಮತ್ತೆ 8 ಜನರಿಗೆ ಕರೊನಾ

    ಮಂಡ್ಯ: ಲಾಕ್‌ಡೌನ್ ಸಡಿಲಿಕೆ ನಂತರ ಮುಂಬೈನಿಂದ ಆಗಮಿಸಿದ್ದವರಲ್ಲಿ ಮತ್ತೆ 8 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 209ಕ್ಕೆ ಏರಿಕೆಯಾಗಿದೆ.
    ಸೋಂಕಿತರಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು, ಬಾಲಕಿ, ಮೂವರು ಬಾಲಕರು ಸೇರಿದ್ದಾರೆ. ಮುಂಬೈನ ಅಂದೇರಿ, ನೆಹರು ನಗರ, ಸಂತಾಕ್ರೂಸ್, ಭರತ್ ನಗರ ಸೇರಿ ವಿವಿಧ ಬಡಾವಣೆಗಳಲ್ಲಿ ವಾಸವಿದ್ದ ಇವರು ಆಟೋ ಚಾಲನೆ ಸೇರಿ ವಿವಿಧ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದರು.
    ಮೇ 15, 16, 17ರಂದು ವಿವಿಧ ವಾಹನಗಳ ಮೂಲಕ ಆಗಮಿಸಿದ ಇವರನ್ನು ಆನೆಗೊಳ ಚೆಕ್‌ಪೋಸ್ಟ್‌ನಲ್ಲಿ ಕ್ವಾರಂಟೈನ್ ಮಾಡಿ, ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಶುಕ್ರವಾರ 8 ಜನರ ವರದಿ ಪಾಸಿಟಿವ್ ಬಂದಿದೆ. ಈ ಪೈಕಿ ಕೆಲವರು ವಿದ್ಯಾರ್ಥಿಗಳಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.
    ಪೂರ್ವಾಹ್ನ 12 ಗಂಟೆ ವೇಳೆಗೆ ಬಂದ ಬುಲೆಟಿನ್‌ನಲ್ಲಿ 3 ಜನರಿಗೆ ಸೋಂಕು ದೃಢಪಟ್ಟಿದ್ದು, ಮೂವರು ಬಾಲಕರು. ಪಿ.1620 ಬಾಲಕ-14, ಪಿ.1621 ಬಾಲಕ-3, ಪಿ.1622 ಬಾಲಕ-14, ಪಾಸಿಟಿವ್ ಬಂದಿದ್ದರೆ, ಸಂಜೆ 5 ಗಂಟೆ ಬುಲೆಟಿನ್‌ನಲ್ಲಿ ಬಂದ ಐವರು ಪಿ.1735 ಪುರುಷ-46, ಪಿ.1736 ಪುರುಷ-50, ಪಿ.1737 ಮಹಿಳೆ-49, ಪಿ.1738 ಮಹಿಳೆ-20, ಪಿ.1739 ಬಾಲಕಿ-149 ಸೋಂಕಿತರಾಗಿದ್ದಾರೆ.
    ಈ ತನಕ ತಬ್ಲಿಘಿ ಸಂಪರ್ಕದಿಂದ ಹರಡಿದ್ದ ಸೋಂಕು ಸಂಪೂರ್ಣ ನಿವಾರಣೆಯಾಗಿದೆ. ಜತೆಗೆ ನಂಜನಗೂಡು ಜುಬಿಲೆಂಟ್ ಕಾರ್ಖಾನೆಯ ಸೋಂಕಿತರೂ ಗುಣಮುಖರಾಗಿದ್ದಾರೆ.
    ಸೋಂಕನ್ನು ತಡೆಯುವುದು ಕಷ್ಟವಲ್ಲ. ಆದರೆ, ಸೋಂಕು ಹರಡದಂತೆ ತಡೆಯಲು ಪ್ರಮುಖವಾಗಿ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಜನತೆ ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ, ಆ ಪ್ರಕಾರ ನಡೆದುಕೊಂಡು ಸಹಕರಿಸಬೇಕೆಂದು ಡಿಸಿ ಮನವಿ ಮಾಡಿದರು.
    ಮೃತ ಮಹಿಳೆ ವರದಿ ನೆಗೆಟಿವ್: ನಾಗಮಂಗಲ ತಾಲೂಕು ಸೋಮನಹಳ್ಳಿ ವಸತಿ ಶಾಲೆಯ ಕ್ವಾರಂಟೈನ್‌ನಲ್ಲಿರುವಾಗ ಮೃತಪಟ್ಟಿದ್ದ ಮಹಿಳೆ ಕರೊನಾ ನೆಗೆಟಿವ್ ಇದ್ದು, ಇದರೊಂದಿಗೆ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.
    ಮಹಿಳೆ ಗಂಟಲಿನ ದ್ರವ ಪರೀಕ್ಷೆಯ ಫಲಿತಾಂಶ ಶುಕ್ರವಾರ ಬಂದಿದ್ದು, ನೆಗೆಟಿವ್ ಇರುವುದು ದೃಢವಾಗಿದೆ. ಆದ್ದರಿಂದ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
    ಮೇ 16ರಂದು ಪತಿಯೊಂದಿಗೆ ಮುಂಬೈನಿಂದ ಆಗಮಿಸಿದ್ದ ಈಕೆಯನ್ನು ನಿಯಮದಂತೆ ಕ್ವಾರಂಟೈನ್ ಮಾಡಲಾಗಿತ್ತು. ಅಂತೆಯೇ, ಅವರ ಗಂಟಲಿನ ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ಮೂರು ದಿನ ಆರೋಗ್ಯವಂತರಾಗಿದ್ದ ಇವರು, 19ರಂದು ಸಂಜೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದರು. ಇದಕ್ಕೂ ಮುನ್ನ ಅದೇ ದಿನ ಬೆಳಗ್ಗೆ ಮತ್ತು ಮಧ್ಯಾಹ್ನ ಅವರ ಆರೋಗ್ಯ ತಪಾಸಣೆ ನಡೆಸಿದ್ದು, ಯಾವುದೇ ತೊಂದರೆ ಇರಲಿಲ್ಲ.
    ಇನ್ನು ಮೃತಪಟ್ಟ ದಿನದ ಸಂಜೆ ಅವರ ಸ್ವಗ್ರಾಮದ ಹೊರವಲಯದಲ್ಲಿ ಸರ್ಕಾರದ ನಿಯಮದಂತೆ ತಾಲೂಕು ಆಡಳಿತದಿಂದ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಈ ವೇಳೆ ಮೃತಳ ಪತಿ, ತಹಸೀಲ್ದಾರ್ ಕುಂಞ ಮಹಮದ್, ಟಿಎಚ್‌ಒ ಡಾ.ಟಿ.ಎನ್.ಧನಂಜಯ, ತಾ.ಪಂ ಇಒ ಎಂ.ಆರ್.ಅನಂತರಾಜು, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಕಾಶ್ ಇತರರಿದ್ದರು. ಆದರೆ, ವರದಿ ಬರುವುದು ತಡವಾದ ಕಾರಣ ಸ್ಥಳೀಯರಲ್ಲಿ ಆತಂಕ ಸೃಷ್ಠಿಯಾಗಿತ್ತು. ಇದೀಗ ಬಂದಿರುವ ವರದಿಯಲ್ಲಿ ನೆಗೆಟಿವ್ ಬಂದಿರುವುದು ಆತಂಕ ದೂರಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts