More

    ಜಾಗರೂಕತೆಯಿಂದ ಕೆಲಸ ನಿರ್ವಹಿಸಿ

    ಹಾವೇರಿ: ಗ್ರಾಪಂ ಚುನಾವಣೆಯ ಮತ ಎಣಿಕೆ ಕೆಲಸವನ್ನು ಜಾಗರೂಕತೆಯಿಂದ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಸೂಚಿಸಿದರು.

    ಜಿಲ್ಲೆಯ ಗ್ರಾಪಂ ಚುನಾವಣೆ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳಿಗೆ ಮತ ಎಣಿಕೆ ಕುರಿತು ಜಿಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

    ಗ್ರಾಪಂ ಚುನಾವಣೆಗಳಲ್ಲಿ ಮತಗಳ ಎಣಿಕೆ ವಿಭಿನ್ನ ಸ್ವರೂಪದ್ದಾಗಿದೆ. ಒಂದು ಗ್ರಾಪಂ ಕ್ಷೇತ್ರ, ಸ್ಥಾನಗಳು, ಮೀಸಲಾತಿ ಗಮನಿಸಿ ಆಯೋಗದ ನಿಯಮಾವಳಿಯಂತೆ ತಪ್ಪುಗಳಾಗದಂತೆ ಅಂತಿಮ ಫಲಿತಾಂಶ ನೀಡಬೇಕು. ಕಾರ್ಯಾಗಾರದಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡು ಪರಿಹರಿಸಿಕೊಂಡು ಸೂಕ್ಷ್ಮ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ಎಂದರು.

    ಕೋವಿಡ್ ಹಿನ್ನೆಲೆಯಲ್ಲಿ ವ್ಯವಸ್ಥಿತ ಮತ ಎಣಿಕೆ, ತ್ವರಿತ ಫಲಿತಾಂಶ ನೀಡಲು ಎಲ್ಲ ತಾಪಂಗಳನ್ನು 3 ಅವಧಿಯಲ್ಲಿ ವಿಂಗಡಿಸಿ ಪ್ರತಿ ಅವಧಿಗೂ ಪ್ರತ್ಯೇಕ ಪಾಸ್ ನೀಡಲಾಗುತ್ತದೆ. ಆಯಾ ಅವಧಿಯ ಎಣಿಕೆ ಸಿಬ್ಬಂದಿ, ಏಜೆಂಟರು, ಅಭ್ಯರ್ಥಿಗಳನ್ನು ಎಣಿಕೆ ಕೇಂದ್ರದೊಳಗೆ ಬಿಡಲಾಗುವುದು. ಮತ ಎಣಿಕೆಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೂ ಕ್ರಮ ವಹಿಸಲಾಗಿದೆ ಎಂದರು.

    ಮತ ಎಣಿಕೆ ಕುರಿತು ಸಿಬ್ಬಂದಿಗೆ ಜಿಲ್ಲಾ ವೀಕ್ಷಕ ನಾಗೇಂದ್ರ ಹೊನ್ನಾಳಿ ಹಾಗೂ ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಅವರು ತಹಸೀಲ್ದಾರರಿಗೆ, ಚುನಾವಣಾಧಿಕಾರಿಗಳಿಗೆ, ಸಹಾಯಕ ಚುನಾವಣಾಧಿಕಾರಿಗಳಿಗೆ ಮತ ಎಣಿಕೆ ಪ್ರಕ್ರಿಯೆ, ಸೇವಾ ಮತದಾನ, ಅಂಚೆ ಮತದಾನ ಪರಿಗಣನೆ, ಮತ ಎಣಿಕೆ ಪೂರ್ವದಲ್ಲಿ ಮತ ಪತ್ರಗಳ ವಿಂಗಡಣೆ, ಅಭ್ಯರ್ಥಿಗಳು ಮತ್ತು ಏಜೆಂಟ್​ರ ಸಮ್ಮುಖದಲ್ಲಿ ಆಯಾ ಕ್ಷೇತ್ರದ ಮತಪೆಟ್ಟಿಗೆ ಸೀಲ್​ಗಳನ್ನು ತೆರೆಯುವುದು, ಪ್ರತಿ ಮತವನ್ನು ಯಾರ ಪರವಾಗಿ ಚಲಾವಣೆಯಾಗಿದೆ ಎಂಬುದನ್ನು ತಿಳಿಸುವುದು, ತಿರಸ್ಕೃತ ಮತಗಳ ಕುರಿತು ಮಾಹಿತಿ ನೀಡಿದರು.

    ಪ್ರತಿಯೊಬ್ಬ ಅಭ್ಯರ್ಥಿಯ ಎಣಿಕೆ ಮೇಜುಗಳನ್ವಯ ಎಣಿಕೆ ಎಜೆಂಟರನ್ನು ನೇಮಿಸಬಹುದು ಅಥವಾ ಸ್ವತಃ ಹಾಜರಿರಬಹುದು. ಪ್ರತಿ ಮೇಜಿಗೆ ಒಬ್ಬ ಎಣಿಕೆ ಮೇಲ್ವಿಚಾರಕ, ಒಬ್ಬರು ಎಣಿಕೆ ಸಹಾಯಕರನ್ನು ನೇಮಿಸಿಕೊಳ್ಳಬೇಕು. ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಬೆಳಗ್ಗೆ 6.30ಕ್ಕೆ ಹಾಗೂ ಎಣಿಕೆ ಸಿಬ್ಬಂದಿ ಬೆಳಗ್ಗೆ 7ಕ್ಕೆ ಹಾಜರಾಗಬೇಕು. 8 ಗಂಟೆಗೆ ಮತ ಎಣಿಕೆ ಆರಂಭಿಸಬೇಕು. ಆಯೋಗದ ಮಾರ್ಗಸೂಚಿಯಂತೆ ಅಧಿಕೃತವಾಗಿ ಅನುಮತಿ ಪಡೆದ ವ್ಯಕ್ತಿಗಳಿಗೆ ಎಣಿಕೆ ಕೇಂದ್ರದೊಳಗೆ ಪ್ರವೇಶ ನೀಡಬೇಕು. ಎಣಿಕೆ ಕೇಂದ್ರದೊಳಗೆ ಮೊಬೈಲ್​ಫೋನ್​ಗೆ ಅವಕಾಶವಿಲ್ಲ. ಮತದಾನ ರಹಸ್ಯ ಕಾಪಾಡಬೇಕು ಎಂದು ವಿವರಿಸಿದರು.

    ಜಿಪಂ ಸಿಇಒ ಮಹಮ್ಮದ ರೋಶನ್, ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಚುನಾವಣೆ ತಹಸೀಲ್ದಾರ್ ಪ್ರಶಾಂತ ನಾಲವಾರ ಇತರರಿದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts