More

    ನಾದಿನಿಗಾಗಿ ಷಡ್ಕನನ್ನೇ ಕೊಂದ: ಮಹದೇವಪುರ ಹೊರವರ್ತಲ ರಸ್ತೆ ಮೇಲ್ಸೇತುವೆ ಬಳಿ ಕೃತ್ಯ, 9 ಮಂದಿ ಬಂಧನ

    ಕೆ.ಆರ್.ಪುರ/ಬೆಂಗಳೂರು: ಮದುವೆಯಾಗಿ ಪತ್ನಿ ಜತೆಗಿದ್ದರೂ ನಾದಿನಿಯನ್ನು ಓಲೈಸಿಕೊಳ್ಳಲು ಆಕೆಯ ಪತಿಯನ್ನೇ ಹತ್ಯೆ ಮಾಡಿಸಿದ್ದ ಟೆಕ್ಕಿ ಸೇರಿ 9 ಜನರನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.

    ಹೈದರಾಬಾದ್​ನ ಸತ್ಯಪ್ರಸಾದ್ (41) ಬಂಧಿತ. ಈತನಿಂದ ಕೊಲೆಗೆ ಸುಪಾರಿ ಪಡೆದಿದ್ದ ಬೈಯಪ್ಪನಹಳ್ಳಿಯ ಪ್ರಶಾಂತ್ (20), ಕಗ್ಗದಾಸಪುರದ ಪ್ರೇಮ್ (31), ಕುಶಾಂತ್ (30), ಸಂತೋಷ್ (25), ಹೊಸಕೋಟೆಯ ಗಿಡ್ಡಪ್ಪನಪಾಳ್ಯದ ದಿನೇಶ್ (26) ಮತ್ತು ಆತನ ಪತ್ನಿ ಸಯಿದಾ (25), ಶಿಡ್ಲಘಟ್ಟದ ಲೋಕೇಶ್ (28) ಹಾಗೂ ಮಲ್ಲೇಶ್​ಪಾಳ್ಯದ ರವಿ (37) ಸಹ ಸೆರೆಯಾಗಿದ್ದಾರೆ.

    ಮಹದೇವಪುರ ಹೊರವರ್ತಲ ರಸ್ತೆಯ ಮೇಲ್ಸೇತುವೆ ಬಳಿ ಹೊರಮಾವು ನಿವಾಸಿ ಟೆಕ್ಕಿ ಲಕ್ಷ್ಮಣ್​ಕುಮಾರ್​ನನ್ನು ಫೆ.3ರಂದು ಹತ್ಯೆ ಮಾಡಿ ಪರಾರಿಯಾಗಿದ್ದರು ಎಂದು ವೈಟ್​ಫೀಲ್ಡ್ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.

    ಪತಿ ಸತ್ತರೆ ತಾನಾಗೆ ಬರುತ್ತಾಳೆ: ಹೈದರಾಬಾದ್​ನ ಸಾಫ್ಟ್​ವೇರ್ ಕಂಪನಿಯ ಉದ್ಯೋಗಿ ಸತ್ಯಪ್ರಸಾದ್, ಪತ್ನಿ ಜತೆ ಅಲ್ಲೇ ವಾಸವಿದ್ದ. ಪತ್ನಿಗೆ ತಂಗಿ ಇದ್ದು, ಆಕೆ ಮೇಲೆ ಮೋಹಿತನಾಗಿದ್ದ. ಏಕಪಕ್ಷೀಯವಾಗಿ ಆಕೆಯನ್ನು ಇಷ್ಟಪಟ್ಟಿದ್ದ. ಆದರೆ, ಆಕೆ ಟೆಕ್ಕಿ ಲಕ್ಷ್ಮಣ್​ಕುಮಾರ್ ಜತೆ ವಿವಾಹವಾಗಿದ್ದು, ದಂಪತಿ ಹೊರಮಾವು ಬಳಿ ನೆಲೆಸಿದ್ದರು. ಅವರ ಕುಶಲೋಪರಿ ವಿಚಾರಿಸಲು ಪತ್ನಿ ಜತೆ ಆಗಾಗ ಬಂದುಹೋಗುತ್ತಿದ್ದ. ಆಕೆಯ ಮದುವೆಯ ನಂತರವೂ ಓಲೈಸಿಕೊಳ್ಳುವ ಪ್ರಯತ್ನ ಮುಂದುವರಿಸಿದ್ದ. ಆಕೆಗೆ ಸಂಬಂಧಿಕರು ಯಾರೂ ಇಲ್ಲ. ಪತಿ ಲಕ್ಷ್ಮಣ್​ಕುಮಾರ್​ನನ್ನು ಹತ್ಯೆ ಮಾಡಿಸಿದರೆ ತಾನಾಗೆ ಹೈದರಾಬಾದ್​ಗೆ ಬರುತ್ತಾಳೆ. ನಂತರ ಅನ್ಯೋನ್ಯತೆ ಬೆಳೆಸಿಕೊಳ್ಳ ಬಹುದು ಎಂದು ಯೋಚಿಸಿ ಕೊಲೆಗೆ ನಿರ್ಧರಿಸಿದ್ದ.

    15 ಲಕ್ಷ ರೂ.ಗೆ ಸುಪಾರಿ: ಸತ್ಯಪ್ರಸಾದ್ ತಾನು ಕೆಲಸ ಮಾಡುತ್ತಿದ್ದ ಹೈದರಾಬಾದ್ ಕಂಪನಿಯ ಕಾರು ಚಾಲಕ ದಿನೇಶ್​ಗೆ ಸುಪಾರಿ ಕೊಟ್ಟಿದ್ದ. ಹೊಸಕೋಟೆ ಮೂಲದ ದಿನೇಶ್ ಅದೇ ಊರಿನ ಮುಸ್ಲಿಂ ಸಮುದಾಯದ ಸಯಿದಾಳನ್ನು ಪ್ರೀತಿಸಿ ವಿವಾಹವಾಗಿದ್ದ. ಮದುವೆ ಬಳಿಕ ಹೈದರಾಬಾದ್​ನಲ್ಲಿ ನೆಲೆಸಿದ್ದರು. ಈ ವೇಳೆ ದಂಪತಿಗೆ ಟೆಕ್ಕಿ ಸತ್ಯಪ್ರಸಾದ್ ಆರ್ಥಿಕ ಸಹಾಯ ಮಾಡಿದ್ದ. 15 ಲಕ್ಷ ರೂ. ಹಾಗೂ ಹೈದರಾಬಾದ್​ನಲ್ಲಿ ಮನೆ ಕೊಡಿಸುವುದಾಗಿ ಹೇಳಿ ಲಕ್ಷ್ಮಣ್ ಕೊಲೆ ಮಾಡಲು ದಿನೇಶ್​ಗೆ ಸುಪಾರಿ ಕೊಟ್ಟಿದ್ದ.

    ಹಿಂಬಾಲಿಸಿ ಬಂದು ಹಲ್ಲೆ: ಲಕ್ಷ್ಮಣ್ ಫೆ. 3ರ ಬೆಳಗ್ಗೆ 9.30ಕ್ಕೆ ಅಪಾರ್ಟ್​ವೆುಂಟ್​ನಿಂದ ಹೊರಬಂದಿದ್ದ. ಈ ವೇಳೆ ಅಲ್ಲೇ ಕಾದು ಕುಳಿತಿದ್ದ ಒಬ್ಬ, ಲಕ್ಷ್ಮಣ್ ಸ್ಕೂಟರ್​ನಲ್ಲಿ ಮನೆಯಿಂದ ಹೊರಹೋಗುತ್ತಿರುವ ಮಾಹಿತಿಯನ್ನು ಪ್ರಶಾಂತ್ ಮತ್ತು ಉಳಿದವರಿಗೆ ಮುಟ್ಟಿಸಿದ್ದ. ಬಳಿಕ ಪ್ರಶಾಂತ್ ಮತ್ತು ಪ್ರೇಮ್ ಡಿಯೋ ಸ್ಕೂಟರ್​ನಲ್ಲಿ ಲಕ್ಷ್ಮಣ್​ನನ್ನು ಹಿಂಬಾಲಿಸಿದ್ದರು. ರಿಂಗ್ ರಸ್ತೆಯ ಮೇಲ್ಸೇತುವೆ ಬಳಿ ಲಕ್ಷ್ಮಣ್​ನ ಸ್ಕೂಟರ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಲಕ್ಷ್ಮಣ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಳ್ಳಲಾಗಿತ್ತು. ಪ್ರೇಮ್ ಮತ್ತು ಪ್ರಶಾಂತ್​ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸಯಿದಾ ಮತ್ತು ದಿನೇಶ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಅವರಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯಪ್ರಸಾದ್​ನ ಅಸಲಿ ಕೃತ್ಯ ಬಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಅಂದಾಜು ಒಂದು ತಿಂಗಳ ಸ್ಕೆಚ್: ಜ.1ರಂದು ಸಯಿದಾ ತನ್ನ ಪತಿ ದಿನೇಶ್​ನನ್ನು ಕರೆದು ಕೊಂಡು ಬೆಂಗಳೂರಿಗೆ ಬಂದಿದ್ದಳು. ದೇವನಹಳ್ಳಿ ಸಮೀಪದ ಲಾಡ್ಜ್​ನಲ್ಲಿ ಉಳಿದುಕೊಂಡಿದ್ದರು. ಇಬ್ಬರಿಗೂ ಪರಿಚಯವಿದ್ದ ಪ್ರಶಾಂತ್, ಪ್ರೇಮ್ ಕುಶಾಂತ್, ಸಂತೋಷ್, ಶಿಡ್ಲಘಟ್ಟದ ಲೋಕೇಶ್ ಹಾಗೂ ರವಿಯನ್ನು ಲಾಡ್ಜ್​ಗೆ ಕರೆಸಿಕೊಂಡು ಲಕ್ಷ್ಮಣ್ ಕೊಲೆಗೆ ಸಂಚು ರೂಪಿಸಿದ್ದರು. ಜ.30ರಂದು ಲಕ್ಷ್ಮಣ್ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಹತ್ಯೆ ಮಾಡಲು ಕಾದಿದ್ದರು. ಆದರೆ ಆತ ಸಿಕ್ಕಿರಲಿಲ್ಲ. ಮರುದಿನ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಆತನ ಅಪಾರ್ಟ್ ಮೆಂಟ್ ಬಳಿ ಕಾದಿದ್ದರು. ಆದರೆ, ಲಕ್ಷ್ಮಣ್ ಮನೆಯಿಂದ ಹೊರಬಾರದಿದ್ದರಿಂದ ಆಗಲೂ ಕೊಲೆ ಮಾಡಲು ಆಗಿರಲಿಲ್ಲ.

    1.50 ಲಕ್ಷ ರೂ. ಮುಂಗಡ ನೀಡಿದ್ದ: ದಿನೇಶ್​ನನ್ನು ತನ್ನ ಮನೆಗೆ ಕರೆಸಿಕೊಂಡಿದ್ದ ಸತ್ಯಪ್ರಕಾಶ್, ಲ್ಯಾಪ್​ಟಾಪ್​ನಲ್ಲಿದ್ದ ಲಕ್ಷ್ಮಣ್​ನ ಫೋಟೋ ತೋರಿಸಿದ್ದ. ಬೆಂಗಳೂರಿನಲ್ಲಿ ಆತ ವಾಸವಿರುವ ಮನೆಯ ವಿಳಾಸ ನೀಡಿ 1.50 ಲಕ್ಷ ರೂ.ಗಳನ್ನು ಮುಂಗಡವಾಗಿ ಕೊಟ್ಟಿದ್ದ. ಲಕ್ಷ್ಮಣ್ ಬಳಸುತ್ತಿದ್ದ ದ್ವಿಚಕ್ರ ವಾಹನದ ಬಗ್ಗೆಯೂ ಮಾಹಿತಿ ಕೊಟ್ಟಿದ್ದ. ಸುಪಾರಿ ಪಡೆದಿದ್ದ ವಿಚಾರವನ್ನು ದಿನೇಶ್ ತನ್ನ ಪತ್ನಿಗೂ ತಿಳಿಸಿದ್ದ.

    ಹಿಂದೊಮ್ಮೆ ಕೊಲೆಗೆ ಯತ್ನಿಸಿದ್ದರು!: ಜುಲೈನಲ್ಲಿ ಹೆಣ್ಣೂರು ಸಮೀಪ ಸ್ಕೂಟರ್​ನಲ್ಲಿ ಹೋಗುತ್ತಿದ್ದ ಲಕ್ಷ್ಮಣ್​ನ ಕುತ್ತಿಗೆಗೆ ಇರಿದಿದ್ದರು. ಚಿಕಿತ್ಸೆ ಪಡೆದು ಗುಣಮುಖನಾಗಿದ್ದ. ಆದರೆ, ಹಲ್ಲೆಗೈದ ದುಷ್ಕರ್ವಿುಗಳ ಪತ್ತೆಗೆ ಮುಂದಾದಾಗ ತನಿಖೆಗೆ ಸಹಕರಿಸಿರಲಿಲ್ಲ. ಹಾಗಾಗಿ ಪೊಲೀಸರು ತನಿಖೆಯನ್ನು ನಿಲ್ಲಿಸಿದ್ದರು. ಇದೀಗ ಪೊಲೀಸರ ವಿಚಾರಣೆಯಲ್ಲಿ ಈ ವಿಷಯ ಬಹಿರಂಗವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts