More

    ಮಮದಾಪುರ ಚರ್ಚ್ ಆಸ್ತಿ ಮಾರಾಟ, ನಾಲ್ವರ ವಿರುದ್ಧ ದೂರು

    ಬೆಳಗಾವಿ: ಗೋಕಾಕ ತಾಲೂಕಿನ ಮಮದಾಪುರ ಗ್ರಾಮದಲ್ಲಿರುವ ಮೆಥೋಡಿಸ್ಟ್ ಚರ್ಚ್‌ಗೆ ಸೇರಿದ ಜಾಗದ ದಾಖಲೆಗಳನ್ನು ತಿರುಚಿ, ಮತ್ತೊಬ್ಬರಿಗೆ 4.14 ಲಕ್ಷ ರೂ.ಗೆ ಮಾರಾಟ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಧೂಪದಾಳ ಗ್ರಾಮದಲ್ಲಿರುವ ಚರ್ಚ್‌ನಲ್ಲಿ ಜಿಲ್ಲಾ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದ ಪಾದ್ರಿ ಹಾಗೂ ಮೂವರು ಸೇರಿಕೊಂಡು ಚರ್ಚ್ ಒಡೆತನಕ್ಕೆ ಸೇರಿದ ಭೂಮಿ ಮಾರಾಟ ಮಾಡಿದ್ದಾರೆ ಎಂದು ಈಗಿನ ಮೇಲ್ವಿಚಾರಕ ರೆವರೆಂಡ್ ಜಯವಂತ ಎಲಿಯಾ ಅವರು ಗೋಕಾಕ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.

    ಹಿನ್ನೆಲೆ: ಪ್ರಮುಖ ಆರೋಪಿತ ನಾದ ಪಾದ್ರಿ ಸಲಮೋನ್ ಸದೆಪ್ಪ ಹುಲಮನಿ, ಮೂಲತಃ ಕಿತ್ತೂರ ತಾಲೂಕಿನ ದೇವರಶೀಗಿಹಳ್ಳಿಯವರು. ಅವರು ಮಮದಾಪುರ ಗ್ರಾಪಂ ವ್ಯಾಪ್ತಿಯ ಚರ್ಚ್‌ಗೆ ಸೇರಿದ್ದ 76.40 ಚ.ಮೀ. (ಆಸ್ತಿ ನಂ.150400503500320502) ಜಾಗವನ್ನು ಸ್ವಂತ ಆಸ್ತಿ ಎಂದು ಕಂಪ್ಯೂಟರ್ ಉತಾರ್‌ನಲ್ಲಿ ತಿದ್ದುಪಡಿ ಮಾಡಿಸಿದ್ದಾರೆ. ಏ. 30 2019ಕ್ಕೆ ಮಮದಾಪುರದ ಮಹ್ಮದ್‌ಅಲಿ ರಜಾಕಸಾಬ್ ಮಿರ್ಜಾನಾಯಕ ಅವರಿಗೆ 4.14 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.

    ಇದು ನನ್ನ ಸ್ವಂತ ಆಸ್ತಿಯಾಗಿದ್ದು, ಮನೆತನದಲ್ಲಿ ಎದುರಾದ ಆರ್ಥಿಕ ಅಡಚಣೆಗಾಗಿ ಆಸ್ತಿ ಮಾರಾಟ ಮಾಡುತ್ತಿರುವುದಾಗಿ ಖರೀದಿ ಪತ್ರದಲ್ಲಿ ಬರೆದು ಕೊಟ್ಟಿದ್ದಾರೆ. ಆಸ್ತಿಯನ್ನು ಮಾರಾಟ ಮಾಡಿರುವ ಸುದ್ದಿ ತಿಳಿದು ದಾಖಲೆ ಪರಿಶೀಲಿಸಿದ ಜಯವಂತ ಎಲಿಯಾ, ಆಸ್ತಿ ಮಾರಾಟ ಮಾಡಿರುವ ಪಾದ್ರಿ ಸೇರಿದಂತೆ ಇದಕ್ಕೆ ಸಹಕಾರ ನೀಡಿರುವ ಇತರ ಮೂವರು ಆರೋಪಿತರಾದ ಬೆಂಗಳೂರಿನ ಕಾರ್ಯನಿರ್ವಾಹಕ ಅಧಿಕಾರಿ ರಿಜಿನಲ್ ಕಾನ್ಫರೆನ್ಸ್ ರೆವರೆಂಡ್ ಡೇವಿಡ್ ನಥಾನಿಯಲ್, ರೀಜನಲ್ ಕಾನ್ಫರೆನ್ಸ್ ಖಜಾಂಚಿ ಮ್ಯಾಥ್ಯೂವ್ ಜಾರ್ಜ್, ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ರೆವರೆಂಡ್ ಜೆ.ಬಿ. ಹಿರೇಕೊಡಿ ವಿರುದ್ಧ ಇತ್ತೀಚೆಗೆ ದೂರು ದಾಖಲಿಸಿದ್ದಾರೆ.

    ಈ ವಿಚಾರವಾಗಿ ಮಮದಾಪುರ ಚರ್ಚ್ ನ ಮೇಲ್ವಿಚಾರಕ ರೆವರೆಂಡ್ ಜಯವಂತ ಎಲಿಯಾ ಅವರು, ‘ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ’ ಎಂದು ‘ವಿಜಯವಾಣಿ’ಯೊಂದಿಗೆ ಅಸಮಾಧಾನ ತೋಡಿಕೊಂಡಿದ್ದಾರೆ. ಆದಷ್ಟು ಬೇಗ ಗೋಕಾಕ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಲಿಯಾ ಅವರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts