More

    ಲಭ್ಯ ಇರುವ ನೀರು ಹರಿಸಲು ಕ್ರಮ

    ಕೆಂಭಾವಿ: ಈ ವರ್ಷ ಬರ ಆವರಿಸಿದ್ದರಿಂದ ಲಭ್ಯ ಇರುವ ನೀರಿನಲ್ಲೇ ರೈತರ ಜಮೀನುಗಳಿಗೆ ಹರಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

    ಮಲ್ಲಾ(ಬಿ) ಗ್ರಾಮದಲ್ಲಿ ಬುಧವಾರ ಜನರ ಅಹವಾಲು ಸ್ವೀಕರಿಸಿದ ಅವರು, ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹ ಕುಸಿದಿದ್ದರಿಂದ ಕೃಷ್ಣಾ ಕಾಲುವೆಯಲ್ಲಿ ಹರಿಯುವ ಪ್ರಮಾಣ ಗಣನೀಯ ಇಳಿಮುಖವಾಗಿದೆ. ಹೀಗಾಗಿ ವಾರಬಂದಿ ಮೂಲಕ ಜಮೀನಿಗೆ ಹರಿಸಲು ಇಲಾಖೆ ನಿರ್ಧರಿಸಿದ್ದರೂ ನೀರಿನ ಕೊರತೆಯಿಂದಾಗಿ ವ್ಯತ್ಯಾಸ ಕಂಡು ಬಂದಿದೆ ಎಂದರು.

    ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಲಾಗಿದ್ದು, ತೀವ್ರ ಸಮಸ್ಯಾತ್ಮಕ ಹಳ್ಳಿಗಳಿಗೆ ಟ್ಯಾಂಕರ್ ಇತರ ಮೂಲಗಳಿಂದ ನೀರು ಒದಗಿಸಲು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಜಮೀನುಗಳಿಗೆ ನೀರು ಹರಿಸಲು ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ರೈತರು ಸಚಿವರ ಎದುರು ಗೋಳು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮಳೆ ಅಭಾವದಿಂದ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಬೇಡಿಕೆ ಜಾಸ್ತಿಯಾಗಿದ್ದು, ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ. ಹೀಗಾಗಿ ರೈತರಿಗೆ ಸಮರ್ಪಕ ವಿದ್ಯುತ್ ಒದಗಿಸಲು ಜೆಸ್ಕಾಂ ಸಮಯ ಬದಲು ಜತೆಗೆ ಕೆಲ ಮಾರ್ಪಾಡು ಮಾಡಿದೆ. ಇದಕ್ಕೆ ರೈತರು ಸಹಕರಿಸಬೇಕು ಎಂದು ಕೋರಿದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಶಿವು ದೊರೆ, ಉಪಾಧ್ಯಕ್ಷ ಪ್ರಶಾಂತರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಚಿಂಚೋಳಿ, ಮುಖಂಡರಾದ ಶಂಕ್ರಣ್ಣ ವಣಿಕ್ಯಾಳ, ಎಂ.ಆರ್. ಪಾಟೀಲ್, ಅಮೀನರೆಡ್ಡಿ ದೇಸಾಯಿ, ರಾಜು ಧಣಿ, ಶರಣಬಸ್ಸು ಪಟ್ಟಣಶೆಟ್ಟಿ, ಮಹಿಬೂಬ್ ಸುಬಾನಿ, ಗೌಡಪ್ಪಗೌಡ ವಣಿಕ್ಯಾಳ ಇತರರಿದ್ದರು.

    ಖಾಲಿ ಕೊಡಗಳ ಪ್ರದರ್ಶನ: ಅಹವಾಲು ಸ್ವೀಕರಿಸಿದ ಬಳಿಕ ಮಲ್ಲಾ(ಬಿ)ದಿಂದ ನಿರ್ಗಮಿಸುತ್ತಿದ್ದ ಸಚಿವ ದರ್ಶನಾಪುರ ಅವರನ್ನು ಮಹಿಳೆಯರು ಖಾಲಿ ಕೊಡಗಳೊಂದಿಗೆ ಮುತ್ತಿಗೆ ಹಾಕಿ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ತಕ್ಷಣ ಪರಿಹರಿಸುವಂತೆ ಒತ್ತಾಯಿಸಿದರು. ಖಾಲಿ ಕೊಡಗಳ ಪ್ರದರ್ಶನ ಕಂಡ ಸಚಿವರು ಕಾರಿನಿಂದ ಇಳಿದು ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಬಳಿಕ ಮುಂದೆ ಸಾಗಲು ಅನುವು ಮಾಡಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts