More

    ನಿಲ್ಲಿಸಿದ ದೋಣಿಯಿಂದ ರೋಗ ಭೀತಿ

    ಭರತ್ ಶೆಟ್ಟಿಗಾರ್, ಮಂಗಳೂರು
    ನದಿಯಿಂದ ಸಾಂಪ್ರದಾಯಿಕವಾಗಿ ಮರಳು ತೆಗೆಯಲು ಬಳಸುತ್ತಿದ್ದ ದೋಣಿಗಳು ಪ್ರಸ್ತುತ ಸೊಳ್ಳೆ ಸಂತಾನೋತ್ಪತ್ತಿ ತಾಣಗಳಾಗಿ ಪರಿವರ್ತನೆಗೊಂಡು, ಮಲೇರಿಯಾ, ಡೆಂಘೆ ಮೊದಲಾದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗಿದೆ.

    ನಗರದ ಕೂಳೂರಿನ ಫಲ್ಗುಣಿ ನದಿ ತಟದಲ್ಲಿ ಇಂತಹ ಹಲವು ದೋಣಿಗಳು ಕಂಡು ಬರುತ್ತವೆ. ಇವೆಲ್ಲ ಇತ್ತೀಚೆಗೆ ನಿಲ್ಲಿಸಲಾಗಿರುವ ದೋಣಿಗಳಲ್ಲ. ಬದಲಾಗಿ ಕೆಲವು ವರ್ಷಗಳ ಹಿಂದೆ ಇಲ್ಲಿ ಮರಳು ತೆಗೆಯಲು ಗುತ್ತಿಗೆ ಪಡೆದವರಿಗೆ ಸೇರಿದ್ದು. ಮರಳುಗಾರಿಕೆ ನಡೆಸಿದ ಬಳಿಕ ದೋಣಿಗಳನ್ನು ಹಾಗೇ ಬಿಟ್ಟು ಹೋಗಿದ್ದು, ಕನಿಷ್ಠ ಅದನ್ನು ಮಗುಚಿ ಹಾಕುವ ಪ್ರಯತ್ನವನ್ನೂ ಮಾಡಿಲ್ಲ. ಇದರಿಂದ ದೋಣಿಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣಗಾಗಿ ಬದಲಾಗಿವೆ.

    ಹತ್ತಾರು ದೋಣಿಗಳಿವೆ: ಕೂಳೂರು ಬಳಿಯಲ್ಲೇ ಇಂತಹ ಹತ್ತಾರು ದೋಣಿಗಳಿವೆ. ಹಳೇ ದೋಣಿಗಳಾಗಿರುವುದರಿಂದ ಪ್ರಸ್ತುತ ಹುಲ್ಲು, ಪೊದೆಯಿಂದ ಆವೃತವಾಗಿದ್ದು, ಮೇಲ್ನೋಟಕ್ಕೆ ಕಾಣಿಸುವುದಿಲ್ಲ. ಜನರಿಲ್ಲದ ಜಾಗದಲ್ಲಿ ಇರುವುದರಿಂದ ಸೊಳ್ಳೆಗಳಿಗೆ ಹೆಚ್ಚು ಅನುಕೂಲವಾಗಿದೆ. ಇಲ್ಲಿರುವ ಹೆಚ್ಚಿನ ದೋಣಿಗಳು ಹಳೇ ಮಾದರಿಯ ಮರದಿಂದ ಮಾಡಲಾದ ದೋಣಿಗಳು. ಜತೆಗೆ ಬಹಳಷ್ಟು ಸಮಯದಿಂದ ಹಾಗೇ ಇರುವುದರಿಂದ ಈಗಿನ ಗುತ್ತಿಗೆದಾರರು, ಅದನ್ನು ಉಪಯೋಗಿಸಲು ಹಿಂಜರಿಯುತ್ತಿದ್ದಾರೆ.

    ಪೂರಕ ವಾತಾವರಣ: ಪ್ರಸ್ತುತ ಮಳೆ-ಬಿಸಿಲಿನ ವಾತಾವರಣವಿದ್ದು, ಇದು ಸೊಳ್ಳೆಗಳು ಮೊಟ್ಟೆ ಇಟ್ಟು ಲಾರ್ವ, ಮರಿಯಾಗಲು ಪೂರಕವಾಗಿದೆ. ಜತೆಗೆ ಈ ಸೊಳ್ಳೆಗಳು ಸುಮಾರು 1 ಕಿ.ಮೀ ವ್ಯಾಪ್ತಿಯವರೆಗೆ ಸಂಚರಿಸುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುವ ಜನರಿಗೆ ಅಪಾಯಕಾರಿಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ತಕ್ಷಣ ಈ ಕುರಿತು ಗಮನ ಹರಿಸಿ, ಅವುಗಳನ್ನು ಅಲ್ಲಿಂದ ತೆರವುಗೊಳಿಸಬೇಕು ಅಥವಾ ಮಗುಚಿ ಹಾಕಲು ಕ್ರಮ ಕೈಗೊಳ್ಳಬೇಕು. ಕೂಳೂರಿನಲ್ಲಿ ಮಾತ್ರವಲ್ಲದೆ, ಮರಳು ತೆಗೆಯಲು ಅನುಮತಿ ನೀಡಲಾಗಿರುವ ಇತರ ಕಡೆಗಳಲ್ಲೂ ಪರಿಶೀಲಿಸುವ ಅವಶ್ಯಕತೆಯಿದೆ.

    ಮೀನುಗಾರಿಕಾ ಬೋಟ್‌ಗಳಿಗೆ ಸೂಚನೆ: ಸೊಳ್ಳೆ ಮೊಟ್ಟೆ ಇಟ್ಟು ಮರಿ ಮಾಡಲು 5 ಮಿ.ಮೀ ನೀರು ಇದ್ದರೂ ಸಾಕು ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ನಗರ ವ್ಯಾಪ್ತಿಯಲ್ಲಿ ಈಗಾಗಲೇ ಮಲೇರಿಯ-ಡೆಂಘೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಜನರನ್ನು ಎಚ್ಚರಿಸುತ್ತಿದ್ದಾರೆ. ಬೋಟ್ ಮಾಲೀಕರಿಗೂ ಬಂದರು ಹಾಗೂ ಇತರ ದಕ್ಕೆಗಳಲ್ಲಿ ನಿಲ್ಲಿಸಿರುವ ಬೋಟ್‌ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವಂತೆ ಈಗಾಗಲೇ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ.

    ಮರಳು ದೋಣಿಗಳನ್ನು ದಡದಲ್ಲಿ ಹಾಗೇ ನಿಲ್ಲಿಸಿ ಹೋಗಿರುವುದು ಗಮನಕ್ಕೆ ಬಂದಿಲ್ಲ. ಗಣಿ ಇಲಾಖೆಗೆ ಸಂಬಂಧಿಸಿರುವುದರಿಂದ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಬೇಕಿತ್ತು. ದೋಣಿ ಯಾರಿಗೆ ಸೇರಿದ್ದು ಎಂದು ಪತ್ತೆ ಹಚ್ಚಿ ದಂಡ ವಿಧಿಸಲು ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
    ಪ್ರೇಮಾನಂದ ಶೆಟ್ಟಿ, ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts