More

    ಕರೋನಾ ಜತೆ ಮಲೇರಿಯಾ, ಡೆಂಗೆ!, ಮುಂಜಾಗ್ರತೆ ವಹಿಸಲು ದ.ಕ.ಜಿಲ್ಲಾ ಆರೋಗ್ಯ ಇಲಾಖೆ ಕಿವಿಮಾತು

    ಹರೀಶ್ ಮೋಟುಕಾನ, ಮಂಗಳೂರು

    ಕರಾವಳಿಯಲ್ಲಿ ಒಂದೆಡೆ ಬಿಸಿಲಿನ ಕಾವು ಜೋರಾಗುತ್ತಿದೆ. ಇನ್ನೊಂದೆಡೆ ಕಾರ್ಮೋಡ ಕರಗಿ ಅಕಾಲಿಕ ಮಳೆಯೂ ಸುರಿದಿದೆ. ದಿನ ಬಿಟ್ಟು ದಿನ ಮಳೆಯ ವಾತಾವರಣ ಇದ್ದಾಗ ನೆಲೆನಿಂತ ಸ್ವಚ್ಛ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಈ ಸೊಳ್ಳೆಗಳು ಕಡಿದರೆ ಮಲೇರಿಯಾ, ಡೆಂಗೆ, ಚಿಕೂನ್ ಗುನ್ಯಾ ಮೊದಲಾದ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಸಾರ್ವಜನಿಕರು ಸಾಕಷ್ಟು ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2021 ಜನವರಿಯಿಂದ ಮಾರ್ಚ್ ಅಂತ್ಯದವರೆಗೆ 29 ಡೆಂಗೆ ಹಾಗೂ 220 ಮಲೇರಿಯಾ ಪ್ರಕರಣಗಳು ವರದಿಯಾಗಿವೆ. ಇತ್ತೀಚಿನ ಕೆಲ ದಿನಗಳಲ್ಲಿ ಕರೊನಾ ಜತೆಗೆ ಡೆಂಗೆ, ಮಲೇರಿಯಾ ಪ್ರಕರಣಗಳು ಹೆಚ್ಚಾಗುತ್ತಿವೆ. ಎರಡು ವರ್ಷಗಳ ಹಿಂದೆ ವಕ್ಕರಿಸಿದ ಡೆಂಗೆಯಿಂದ 10ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದರಿಂದ ನಿರ್ಲಕ್ಷೃ ಮಾಡುವಂತಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಹರಡುವ ಮಲೇರಿಯಾ ಪೀಡಿತರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ, ಸಾವು ಸಂಭವಿ ಸುವ ಸಾಧ್ಯತೆಗಳಿವೆ. ಆಗಾಗ ಕಾಣಿಸಿಕೊಳ್ಳುವ ಜ್ವರ, ಮೈ ಕೈ ನೋವು, ವಿಪರೀತ ಸುಸ್ತು, ಬೆವರುವಿಕೆ ಲಕ್ಷಣಗಳು, ತಲೆನೋವು ಮಲೇರಿಯಾದ ಲಕ್ಷಣ. ಈಡಿಸ್ ಸೊಳ್ಳೆಯಿಂದ ಹರಡುವ ಚಿಕೂನ್ ಗುನ್ಯಾ ಮಾರಣಾಂತಿಕವಲ್ಲ. ಇದ್ದಕ್ಕಿದ್ದಂತೆ ಜ್ವರ ಬಂದು ಕೈಕಾಲು, ಸ್ನಾಯು, ಕೀಲು ಸಂಧಿಗಳಲ್ಲಿ ಅಸಾಧ್ಯ ನೋವು ಕಂಡುಬರುತ್ತದೆ.

    ಈಡಿಸ್ ಈಜಿಪ್ಟೈ ಎಂಬ ಟೈಗರ್ ಸೊಳ್ಳೆ ಕಡಿತದಿಂದ ಹರಡುವ ತೀವ್ರ ರೂಪದ ವೈರಲ್ ರೋಗವೇ ಡೆಂಗೆ ಜ್ವರ. ಇದು ಗಂಭೀರವಾದುದು. ರಕ್ತಸ್ರಾವವಾಗಿ, ಕೆಲವೊಮ್ಮೆ ಸಾವಿಗೂ ಕಾರಣವಾಗುತ್ತದೆ. ಇದ್ದಕ್ಕಿದ್ದಂತೆ ಹೆಚ್ಚು ಜ್ವರ ಬರುತ್ತದೆ. ಹಣೆಯ ಭಾಗದಲ್ಲಿ ತಲೆನೋವು ಹೆಚ್ಚಾಗುತ್ತದೆ. ಸ್ನಾಯುಗಳು ಹಾಗೂ ಕೀಲುಗಳಲ್ಲಿ ನೋವು. ರುಚಿ ಹಾಗೂ ಹಸಿವು ಕಡಿಮೆಯಾಗುತ್ತದೆ. ಎದೆ ಹಾಗೂ ಕೈ-ಕಾಲುಗಳ ಮೇಲ್ಭಾಗದಲ್ಲಿ ದಡಾರದಂತಹ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ವಾಕರಿಕೆ ಹಾಗೂ ವಾಂತಿ ಬರುತ್ತದೆ.

    ಸೊಳ್ಳೆ ನಿಯಂತ್ರಣ ಕ್ರಮ: ಓವರ್‌ಹೆಡ್ ಟ್ಯಾಂಕ್, ಸಿಮೆಂಟ್ ಟ್ಯಾಂಕ್‌ಗಳನ್ನು ಭದ್ರವಾಗಿ ಮುಚ್ಚಿಡಬೇಕು. ಮನೆಯ ಸುತ್ತಮುತ್ತ ಎಸೆದ ಪ್ಲಾಸ್ಟಿಕ್, ಟೈರ್, ತೆಂಗಿನ ಚಿಪ್ಪು, ಗಾಜಿನ ವಸ್ತುಗಳು, ಗೆರಟೆ, ಪ್ಲಾಸ್ಟಿಕ್ ಗ್ಲಾಸ್ ಮೊದಲಾದುವುಗಳನ್ನು ತಕ್ಷಣ ತೆರವು ಮಾಡಿ ನೀರು ಶೇಖರಣೆಯಾಗದಂತೆ ಮಾಡಬೇಕು. ಮನೆಯಲ್ಲಿ ಕ್ಯಾನ್, ಡ್ರಮ್‌ಗಳಲ್ಲಿ ನೀರು ತುಂಬಿಸಿ ಮುಚ್ಚಳ ಹಾಕದೆ ತೆರೆದ ಜಾಗದಲ್ಲಿ ಇಡಬಾರದು. ಸೊಳ್ಳೆ ನಿಯಂತ್ರಣಕ್ಕೆ ಪಾಲಿಕೆಯ ಸಿಬಂದಿ ಬಂದಾಗ ಸಹಕರಿಸಬೇಕು. ಬಾವಿ, ಕೆರೆಗಳಲ್ಲಿ ಗಪ್ಪಿ ಮೀನುಗಳನ್ನು ಸಾಕಬೇಕು. ಏರ್ ಕೂಲರ್, ಹೂವಿನಕುಂಡ, ಮನಿಪ್ಲಾಂಟ್ ಮೊದಲಾದ ನೀರನ್ನು ಪ್ರತಿ ವಾರ ಖಾಲಿ ಮಾಡಬೇಕು. ಪರಿಸರದಲ್ಲಿ ಸ್ವಚ್ಛ ನೀರು ನಿಲ್ಲದಂತೆ ಹಾಗೂ ಸೊಳ್ಳೆ ಬೆಳವಣಿಗೆ ಆಗದಂತೆ ಕ್ರಮ ಕೈಗೊಳ್ಳಬೇಕು. ಔಷಧ ಲೇಪಿಸಿದ ಸೊಳ್ಳೆ ಪರದೆ ಉಪಯೋಗಿಸಬೇಕು. ಮಕ್ಕಳು, ವೃದ್ಧರು ಹಗಲು ಮಲಗುವಾಗಲೂ ಸೊಳ್ಳೆ ಪರದೆ ಉಪಯೋಗಿಸಬೇಕು. ಸೊಳ್ಳೆ ಪ್ರವೇಶಿಸದಂತೆ ಸಾಯಂಕಾಲ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಕರಾವಳಿಯಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಸೊಳ್ಳೆಗಳಿಂದ ಹರಡುವ ಡೆಂಗೆ, ಮಲೇರಿಯಾ, ಚಿಕೂನ್‌ಗುನ್ಯಾ ಮೊದಲಾದ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಸಾರ್ವಜನಿಕರು ರೋಗ ಲಕ್ಷಣ ಇದ್ದರೆ ತಕ್ಷಣ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಮನೆಯ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.

    ಡಾ.ನವೀನ್ ಕುಲಾಲ್
    ಸಾಂಕ್ರಾಮಿಕ ರೋಗ ನಿಯಂತ್ರಣಾಧಿಕಾರಿ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts