More

    ಎಂ.ಬಿ.ಪಾಟೀಲರನ್ನು ಮುಖ್ಯಮಂತ್ರಿ ಮಾಡಿ: ಸಂಗಮೇಶ ಬಬಲೇಶ್ವರ

    ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುವುದಕ್ಕೆ ಲಿಂಗಾಯತ ಸಮುದಾಯದ ಕೊಡುಗೆ ಅಪಾರ. ಲಿಂಗಾಯತ ಮತಗಳನ್ನು ಒಗ್ಗೂಡಿಸಿ ಕಾಂಗ್ರೆಸ್‌ನತ್ತ ಸೆಳೆಯಲು ಯಶಸ್ವಿಯಾಗಿರುವ ಪ್ರಭಾವಿ ನಾಯಕ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲರನ್ನು ಮುಖ್ಯಮಂತ್ರಿಯಾಗಿ ಘೋಷಿಸಿ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ.

    ಪತ್ರಿಕಾ ಪ್ರಕಟಣೆಯಲ್ಲಿ, ಲಿಂಗಾಯತರನ್ನು ಬಳಸಿ ಬಿಸಾಕಿದ ಬಿಜೆಪಿಗೆ ಈಗಾಗಲೇ ತಕ್ಕಪಾಠ ಕಲಿಸಿದ್ದಾರೆ. ಈಗ ಲಿಂಗಾಯತ ಸಮುದಾಯದ ಮತಗಳನ್ನು ಉಳಿಸಿಕೊಳ್ಳುವ ನೈತಿಕ ಜವಾಬ್ದಾರಿ ಕಾಂಗ್ರೆಸ್ ಹೈಕಮಾಂಡ್‌ದಾಗಿದೆ. ಪಕ್ಷಕ್ಕೆ ಮತ ಹಾಕಲು ಲಿಂಗಾಯತರು ಬೇಕು. ಪಕ್ಷ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಆಗಲು ಲಿಂಗಾಯತರು ಅರ್ಹರಲ್ಲವೇ? ಲಿಂಗಾಯತರು ಏನು ಪಾಪ ಮಾಡಿದ್ದೇವೆ? ಎಂದು ಪ್ರಶ್ನಿಸಿದ್ದಾರೆ.

    ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಲಿಂಗಾಯತರಿಗೆ ಗೌರವವಿದೆ. ಅವರಿಬ್ಬರಲ್ಲಿ ಅಧಿಕಾರ ಹಂಚಿಕೆ ಮಾಡಲು ಚಿಂತನೆ ನಡೆದಿದ್ದು, ಈ ಬಾರಿ ಲಿಂಗಾಯತ ಪ್ರಭಾವಿ ನಾಯಕ ಎಂ.ಬಿ. ಪಾಟೀಲರನ್ನು ಪರಿಗಣಿಸಬೇಕು. ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಬೇಕು ಎನ್ನುವುದು ಸಮಸ್ತ ಲಿಂಗಾಯತ ಸಮುದಾಯದ ಮತ್ತು ನಾಡಿನ ವೀರಶೈವ ಲಿಂಗಾಯತ ಮಠಾಧೀಶರ ಸದಾಶಯವಾಗಿದೆ ಎಂದು ಹೇಳಿದ್ದಾರೆ.

    ಹೈಕಮಾಂಡ್ ಲಿಂಗಾಯತ ಸಮುದಾಯದ ಕೋರಿಕೆಯನ್ನು ಗಂಭಿರವಾಗಿ ಪರಿಗಣಿಸಬೇಕು. ಮುಂದೆ ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನತ್ತ ವಾಲಿರುವ ಲಿಂಗಾಯತರ ಮತಗಳನ್ನು ಉಳಿಸಿಕೊಳ್ಳಬೇಕಾದರೆ, ರಾಜಕೀಯ ಅಸ್ತಿತ್ವ ದೀರ್ಘಕಾಲದವರೆಗೂ ಉಳಿಸಿಕೊಳ್ಳಬೇಕಾದರೆ ಎಂ.ಬಿ. ಪಾಟೀಲರನ್ನು ಮುಖ್ಯಮಂತ್ರಿಯಾಗಿಸಬೇಕು ಎಂದು ಬಬಲೇಶ್ವರ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts