More

    ಪೋಶಕಾಂಶ ನೀಡಿ ಮಣ್ಣಿನ ಫಲವತ್ತತೆ ಕಾಪಾಡಿ

    ಹಾನಗಲ್ಲ: ಜನಸಂಖ್ಯೆ ಬೆಳೆಯುತ್ತಿದ್ದಂತೆ ಹಸಿವನ್ನು ನೀಗಿಸಲು ಹೆಚ್ಚು ಫಸಲು ಬೆಳೆಯಬೇಕು ಎಂದು ಭಾವಿಸಿವುದು ತಪ್ಪು. ಮೊದಲು ಮಣ್ಣಿನ ಫಲವತ್ತತೆ ಹೆಚ್ಚಿಸಿದರೆ ಮಾತ್ರ ಅದು ನಮ್ಮ ಹಸಿವನ್ನು ನೀಗಿಸುತ್ತದೆ ಎಂದು ಹನುಮನಮಟ್ಟಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಪಿ.ಅಶೋಕ ಹೇಳಿದರು.

    ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.

    ಮಣ್ಣಿನ ಹಸಿವು ನೀಗಿಸಲು ಪ್ರಕೃತಿಗೆ ಮಾತ್ರ ಸಾಧ್ಯ. ಕೇವಲ ನೀರು, ರಾಸಾಯನಿಕಗಳಿಂದ ನೀಗಲಾರದು. ಮಣ್ಣನ್ನು ಸಂರಕ್ಷಿಸದಿದ್ದರೆ, ಇದರಲ್ಲಿನ ಆಹಾರ ಸೇವಿಸುವ ಮಾನವರ ಮೇಲೆಯೂ ದುಷ್ಪರಿಣಾಮ ಉಂಟಾಗುತ್ತದೆ. ರಾಸಾಯನಿಕ ಹಾಗೂ ಕ್ರಿಮಿನಾಶಕ ಬಳಸುವ ಮೂಲಕ ಮಣ್ಣಿನ ಶೋಷಣೆ ಮಾಡುತ್ತಿದ್ದೇವೆ. ಆಹಾರ ಉತ್ಪಾದಕತೆ ಹೆಚ್ಚಿಸಲು ಮಣ್ಣಿನಲ್ಲಿ ಪೋಷಕಾಂಶಗಳನ್ನು ಹೆಚ್ಚಿಸಬೇಕಿದೆ. ಕಾಲಕಾಲಕ್ಕೆ ಮಣ್ಣು ಪರೀಕ್ಷೆ ಕೈಗೊಂಡು ಕೊರತೆಯಿರುವ ಸಾರಜನಕ, ರಂಜಕ ಮತ್ತಿತರ ಲಘು ಪೋಷಕಾಂಶಗಳನ್ನು ಮಣ್ಣಿನಲ್ಲಿ ಸೇರಿಸಿ ಅದರ ಆರೋಗ್ಯ ಕಾಪಾಡಬೇಕು ಎಂದರು.

    ಮಣ್ಣು ವಿಜ್ಞಾನಿ ಡಾ.ಜಿ.ಆರ್. ರಾಜಕುಮಾರ ಮಾತನಾಡಿ, ಮಣ್ಣನ್ನು ಜೀವಂತವಾಗಿರಿಸಿ-ಮಣ್ಣಿನಲ್ಲಿರುವ ಜೀವವೈವಿಧ್ಯತೆಯನ್ನು ರಕ್ಷಿಸಿ ಇದು ಈ ವರ್ಷದ ಘೊಷವಾಕ್ಯವಾಗಿದೆ. ಮಣ್ಣಿನ ಆರೋಗ್ಯ ಮಗುವಿನಂತೆ ಕಾಪಾಡಬೇಕು ಎಂದರು.

    ಹವಾಮಾನ ತಜ್ಞ ಡಾ.ಶಾಂತವೀರಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯಗಳು ಹೆಚ್ಚು ಸಂಭವಿಸುತ್ತಿವೆ. ಇದಕ್ಕೆ ಹಲವು ವೈಜ್ಞಾನಿಕ ಕಾರಣಗಳಿವೆ. ನೈಸರ್ಗಿಕ ಸಂಪನ್ಮೂಲ ಕಾಪಾಡಿಕೊಳ್ಳದಿದ್ದರೆ ಹವಾಮಾನ ವೈಪರೀತ್ಯಗಳು ಉಂಟಾಗಿ ರೈತನೂ ಸೇರಿದಂತೆ ದೇಶದ ಜನತೆ ಅಪಾಯ ಎದುರಿಸುವಂತಾಗುತ್ತದೆ ಎಂದು ಎಚ್ಚರಿಸಿದರು.

    ಕೃಷಿ ಅಧಿಕಾರಿಗಳಾದ ಸಂಗಮೇಶ ಹಕ್ಲಪ್ಪನವರ, ಬಸವರಾಜ ಮಣಕೂರ, ಕುಮಾರ ಮಲಗುಂದ, ಸರ್ವಜ್ಞ ಪರಿಸರ ಮತ್ತು ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿ.ಪಿ. ಸಾಲಿಮಠ, ದೀಪಾ ಶೆಟ್ಟರ, ಕೊಪ್ಪರಸಿಕೊಪ್ಪ, ಆರೇಗೊಪ್ಪ ಗ್ರಾಮಗಳ ಪ್ರಗತಿಪರ ರೈತರಾದ ಗದಿಗೆಪ್ಪಗೌಡ ಅರಳೇಶ್ವರ, ಶಿವಾಜಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts