More

    ಹದಿಹರೆಯದಲ್ಲಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಿ

    ಬಾಳೆಹೊನ್ನೂರು: ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ಎಲ್ಲ ವಿಷಯಗಳಲ್ಲೂ ಜಾಗ್ರತೆ ವಹಿಸಬೇಕು. ಈ ವಯಸ್ಸಿನಲ್ಲಿ ಕುಟುಂಬ, ಶಾಲೆ, ವಯಸ್ಸಿನ ಬದಲಾವಣೆ, ಸಾಮಾಜಿಕ ಸ್ಥಿತ್ಯಂತರ ಕೂಡ ಹದಿ ಹರೆಯದವರ ಮೇಲೆ ಪರಿಣಾಮ ಬೀರುತ್ತದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತಾ ಹೇಳಿದರು.

    ಸಮೀಪದ ಮಾಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್.ಆರ್.ಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗುರುವಾರ ಆಯೋಜಿಸಿದ್ದ ಹದಿಹರೆಯದಲ್ಲಿ ಕಾಡುವ ಸಮಸ್ಯೆಗಳು ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
    ಮಕ್ಕಳು ದೈಹಿಕ, ಮಾನಸಿಕ ಆರೋಗ್ಯದ ಕಡೆ ಎಚ್ಚರವಹಿಸಬೇಕು. ನಮ್ಮ ಆಹಾರ ಪದ್ಧತಿ ಕೂಡ ಬದಲಾಗುತ್ತಿದ್ದು, ಇದರಿಂದ ಆರೋಗ್ಯ ಸಮಸ್ಯೆ ಹದಗೆಡುತ್ತಿದೆ. ಈ ಬಗ್ಗೆ ಅಗತ್ಯ ಮಾಹಿತಿ ಪಡೆಯಬೇಕು. ಹರೆಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ಹೆಚ್ಚಿನ ಜಾಗ್ರತೆ ಹೊಂದಬೇಕು. ನೈರ್ಮಲ್ಯ ಕಾಪಾಡಿಕೊಳ್ಳದಿದ್ದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕೆಡುತ್ತದೆ. ಆರೋಗ್ಯದ ವಿಚಾರದಲ್ಲಿ ಯಾವುದನ್ನೂ ಮುಚ್ಚಿಡಬಾರದು. ಸಮಸ್ಯೆಗಳಿದ್ದರೆ ಅದನ್ನು ಮನೆಯಲ್ಲಿ ಅಥವಾ ವೈದ್ಯರ ಬಳಿ ಹೇಳಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಕಸಾಪ ತಾಲೂಕು ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಮಾತನಾಡಿ, ಸಾಹಿತ್ಯ ಪರಿಷತ್ ಮಕ್ಕಳಿಗೆ ಅಗತ್ಯ ಮಾಹಿತಿ ಕೊಡುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳ ಆರೋಗ್ಯ ಕುರಿತು ಆಯೋಜಿಸಿರುವ ಕಾರ್ಯಕ್ರಮಕ್ಕೆ ಕಸಾಪದೊಂದಿಗೆ ಶಾಲೆ ಹಾಗೂ ಆರೋಗ್ಯ ಇಲಾಖೆ ಕೈಜೋಡಿಸಿರುವುದು ಸಂತಸದ ವಿಷಯ ಎಂದರು.
    ಹೋಬಳಿ ಕಸಾಪ ಅಧ್ಯಕ್ಷ ರತ್ನಾಕರ್ ಗಡಿಗೇಶ್ವರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಕೇವಲ ಸಾಹಿತ್ಯ ಕಾರ್ಯಕುರಿತಾಗಿ ಅಲ್ಲದೆ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಯಾವ ವಿಷಯದ ಅಗತ್ಯ ಇದೆಯೋ ಅದನ್ನು ತಾಲೂಕಿನ ಎಲ್ಲ ಭಾಗದಲ್ಲಿ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ ಎಂದು ಹೇಳಿದರು.
    ಮುಖ್ಯಶಿಕ್ಷಕ ರಮೇಶ್ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಆರೋಗ್ಯ ಅಧಿಕಾರಿ ಭಗವಾನ್, ಮಾಗುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಮಂಜೇಶ್, ಕಸಾಪ ಪೂರ್ವಾಧ್ಯಕ್ಷ ಕೆ.ಟಿ.ವೆಂಕಟೇಶ, ಆರೋಗ್ಯ ಸುರಕ್ಷಣಾಧಿಕಾರಿ ಸುಮತಿ, ದೈಹಿಕ ಶಿಕ್ಷಣ ಶಿಕ್ಷಕ ವೆಂಕಟೇಶ್ ಭಟ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts