More

    ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಣೆ ಮಾಡಿದ ಭದ್ರತಾ ಪಡೆಯ ಸಿಬ್ಬಂದಿ

    ಮಂಡ್ಯ: ಕೃಷ್ಣರಾಜಸಾಗರದ ಅಣೆಕಟ್ಟೆಯ ದೋಣಿ ವಿಹಾರ ಕೇಂದ್ರದ ಬಳಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಹಾಗೂ ಬೃಂದಾವನದ ಅಂಗಡಿಯಲ್ಲಿ ಕೆಲಸ ಮಾಡುವ ಯುವಕ ರಕ್ಷಿಸಿದ್ದಾರೆ.
    ಚಾಮರಾಜನಗರ ಮೂಲದ ಪುಷ್ಪಾ(55) ಎಂಬುವರು ಉತ್ತರ ಬೃಂದಾವನಕ್ಕೆ ಹೋಗುವ ಸೇತುವೆ ಮೇಲಿಂದ ಕಾವೇರಿ ನದಿಗೆ ಹಾರಿದ್ದಾರೆ. ಇದನ್ನು ಕಂಡ ಪ್ರವಾಸಿಗರು ರಕ್ಷಣೆಗೆ ಕೂಗಿಕೊಂಡಾಗ ಮುಖ್ಯದ್ವಾರದಲ್ಲಿ ಕರ್ತವ್ಯನಿರತರಾಗಿದ್ದ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಮಾದಪ್ಪ ಮತ್ತು ಸಮೀಪದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ ಎಂಬ ಯುವಕ ನದಿಗೆ ಹಾರಿ ರಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ ‘ನಾನು ಸಾಯಬೇಕು, ನನ್ನನ್ನು ರಕ್ಷಣೆ ಮಾಡಬೇಡಿ’ ಎಂದು ವಿರೋಧ ವ್ಯಕ್ತಪಡಿದ್ದಾರೆ. ಬಳಿಕ ಆಕೆಗೆ ಸಾಂತ್ವನ ಹೇಳಿ ಕೆ.ಆರ್.ಸಾಗರ ಪೊಲೀಸ್ ಠಾಣೆಯ ವಶಕ್ಕೆ ಒಪ್ಪಿಸಿದ್ದಾರೆ.
    ಮಗನ ಸಾವಿನಿಂದ ಯಾತನೆ:
    ತಾನು ಚಾಮರಾಜನಗರದ ಸುಧಾಮನಗರದ ನಿವಾಸಿಯಾಗಿದ್ದು, 27 ವರ್ಷದ ಮಗನ ಅಕಾಲಿಕ ಸಾವಿನಿಂದ ಮಾನಸಿಕವಾಗಿ ನೊಂದಿರುವುದಾಗಿ ಮಹಿಳೆ ಮಾಹಿತಿ ನೀಡಿದ್ದಾರೆ. ಪತಿ ನಾಗೇಶ್ ಜತೆ ಬೆಂಗಳೂರಿನ ಮಗಳ ಮನೆಗೆ ಹೋಗಿದ್ದಾಗ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದರು. ಆದರೆ ತಾನು ಒಡವೆಗಳನ್ನು ಬುಧವಾರ ಬೆಳಗ್ಗೆ ಮನೆಯಲ್ಲಿ ಬಿಚ್ಚಿಟ್ಟು ಕೆ.ಆರ್.ಸಾಗರಕ್ಕೆ ಬಂದು ಬೃಂದಾವನ ನೋಡಲು ಹೋಗುತ್ತಿದ್ದ ಪ್ರವಾಸಿಗರ ಗುಂಪಿನೊಂದಿಗೆ ಸೇರಿ ಟಿಕೆಟ್ ಪಡೆದೆ. ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ತಿಳಿಸಿದ್ದಾರೆ. ಪೊಲೀಸರು ಮಹಿಳೆಯ ಕುಟುಂಬಸ್ಥರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
    ಮಹಿಳೆಯನ್ನು ರಕ್ಷಿಸಿದ ಮಾದಪ್ಪ ಮತ್ತು ಕೃಷ್ಣ ಅವರ ಕಾರ್ಯವನ್ನು ಸಿಪಿಐ ಪುನೀತ್ ಮತ್ತು ಲಿಂಗರಾಜು ಪ್ರಶಂಸಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts