More

    ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ, ಆದಿಕವಿಯ ತತ್ವಾದರ್ಶ ಅಳವಡಿಸಿಕೊಳ್ಳೋಣ ಎಂದ ಡಿಸಿ ಭೂಬಾಲನ್

    ವಿಜಯಪುರ: ರಾಮಾಯಣ ಮಹಾಕಾವ್ಯವ ರಚಿಸಿದವರು ಮಹರ್ಷಿ ವಾಲ್ಮೀಕಿಯವರು. ಅವರು ರಾಮಾಯಣದಲ್ಲಿ ಉಲ್ಲೇಖಿಸಿರುವ ಅಂಶಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ. ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪವಾಗಿವೆ. ಆದಿಕವಿ ಹೇಳಿಕೊಟ್ಟ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.

    ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

    ನಿಸರ್ಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮಹರ್ಷಿ ವಾಲ್ಮೀಕಿ ಅವರಲ್ಲಿ ಕವಿತ್ವ ಭಾವನೆ ಇತ್ತು. ರಾಮಾಯಣ ಎಂಬ ಮಹಾಕಾವ್ಯವು ಇವರ ಕವಿತ್ವ ಭಾವನೆಯ ಕೊಡುಗೆಯಾಗಿದೆ. ಭ್ರಾತೃತ್ವ ಭಾವನೆ, ರಾಜನೀತಿ, ಮನೋಧರ್ಮ, ಮಾನವೀಯ ಮೌಲ್ಯ,ಪ್ರಜಾಪ್ರಭುತ್ವ ರಾಮಾಯಣ ಮಹಾಕಾವ್ಯವು ಪರಿಚಯಿಸಿದೆ ಎಂದು ಹೇಳಿದರು.

    ವಿಶ್ವಕ್ಕೆ ರಾಮಾಯಣ ಎಂಬ ಅತಿದೊಡ್ಡದಾದ ಕಾವ್ಯವನ್ನು ಕೊಡುಗೆ ನೀಡಿದ್ದಾರೆ. ರಾಮಾಯಣದಲ್ಲಿ ಒಳಗೊಂಡಿರುವ ತತ್ವಾದರ್ಶ ಕೊಡುಗೆ ಅಪಾರವಾಗಿದ್ದು, ಅವರು ನೀಡಿರುವ ಆದರ್ಶ ವಿಚಾರ-ತತ್ವಾದಾರ್ಶಗಳು ನಮ್ಮ ದೇಶ ಮಾತ್ರವಲ್ಲದೇ ಮಲೇಶಿಯಾ, ಕಾಂಬೋಡಿಯಾ ಸೇರಿದಂತೆ ಬೇರೆ-ಬೇರೆ ದೇಶಗಳಲ್ಲಿ ಪ್ರಚಲಿತದಲ್ಲಿವೆ. ಲವ-ಕುಶರಿಗೆ ಗುರುವಾಗಿದ್ದವರು ವಾಲ್ಮೀಕಿ. ಅವರ ತತ್ವಗಳನ್ನು ಜೀವನದಲ್ಲಿ ಪಾಲನೆ ಮಾಡಬೇಕು ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಜಗತ್ತಿಗೆ ಮಹಾನ್ ಸಂದೇಶ ನೀಡಿದ್ದಾರೆ. ರಾಮಾಯಣದಂತಹ ಮಹಾಕಾವ್ಯದಲ್ಲಿ ಬದುಕಿನ ಎಲ್ಲಾ ಅಂಶಗಳು ಅಡಕವಾಗಿವೆ. ಸಂತ ಸತ್ಪುರುಷರು ನುಡಿದ ನುಡಿ ಅವರು ಅನುಸರಿಸಿದ ಮಾರ್ಗದಲ್ಲಿ ನಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

    ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆಯ ಉಪ ನಿರ್ದೇಶಕ ಡಾ. ಅಶೋಕ ಎಸ್. ಘೋಣಸಗಿ ವಿಶೇಷ ಉಪನ್ಯಾಸ ನೀಡಿದರು.
    ವಿಜಯಪುರ ಉಪ ವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎನ್.ಎಚ್. ನಾಗೂರ, ಜಿಪಂ ಯೋಜನಾ ವಿಭಾಗದ ಅಧಿಕಾರಿ ಎ.ಬಿ. ಅಲ್ಲಾಪೂರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪುಂಡಲೀಕ ಮಾನವರ ಹಾಗೂ ವಾಲ್ಮೀಕಿ, ತಳವಾರ-ಪರಿವಾರ, ನಾಯಕ ಸಮುದಾಯ ಸೇರಿದಂತೆ ಸರ್ವ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು.

    ವಿರೇಶ ವಾಲಿ ಸಂಗೀತ ಪ್ರಸ್ತುತಪಡಿಸಿದರು. ಸಂಗೀತಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

    ಕಾರ್ಯಕ್ರಮಕ್ಕೂ ಮುನ್ನ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಆದಿಕವಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಚಾಲನೆ ನೀಡಿದರು. ಮೆರವಣಿಗೆಯು ಮಹಾತ್ಮ ಗಾಂಧಿ, ಬಸವೇಶ್ವರ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಕಂದಗಲ್ಲ ಹನುಮಂತರಾಯ ರಂಗಮಂದಿರ ತಲುಪಿ ಸಮಾವೇಶವಾಗಿ ಮಾರ್ಪಟ್ಟಿತು. ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts