More

    ವಜ್ರವಾಡದಲ್ಲಿ ಹಳೆಗನ್ನಡ ಶಿಲಾ ಶಾಸನ ಪತ್ತೆ

    ಪ್ರಮೋದ ಪೈಠಣಕರ ಉಮದಿ (ಮಹಾರಾಷ್ಟ್ರ)

    ಮಹಾರಾಷ್ಟ್ರ ಗಡಿಭಾಗದ ಬಹುತೇಕ ಗ್ರಾಮಗಳಲ್ಲಿ ಕನ್ನಡ ಭಾಷೆ ಆಡಳಿತ ಭಾಷೆ ಇತ್ತು ಎನ್ನುವುದಕ್ಕೆ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಜತ್ತ ತಾಲೂಕಿನ ವಜ್ರವಾಡದಲ್ಲಿ ಇತ್ತೀಚೆಗೆ ಪತ್ತೆಯಾದ ಅಂದಾಜು 650 ವರ್ಷಗಳ ಹಳೆಯದಾದ, ಹಳೆಗನ್ನಡ ಲಿಪಿ ಹೊಂದಿರುವ ಶಿಲಾ ಶಾಸನ ಸಾಕ್ಷಿಯಾಗಿದೆ.
    ಮಹಾರಾಷ್ಟ್ರದ ಜತ್ತ ತಾಲೂಕಿನ ಪೂರ್ವಭಾಗದ ಬಹುತೇಕ ಹಳ್ಳಿಗಳು ಕನ್ನಡಮಯ ಆಗಿದ್ದವು ಎನ್ನುವುದಕ್ಕೆ ಈ ಶಾಸನವೇ ಪುರಾವೆಯಾಗಿದೆ.

    ಜತ್ತ ತಾಲೂಕಿನ 40ಕ್ಕೂ ಹೆಚ್ಚು ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕೆನ್ನುವುದು ಬಹು ವರ್ಷಗಳ ಬೇಡಿಕೆಯಾಗಿದೆ. ಇಲ್ಲಿನ ಬಹುತೇಕ ಗ್ರಾಮಗಳ ಜನರ ಮಾತೃಭಾಷೆ ಕನ್ನಡವಾಗಿದೆ. ಜತ್ತ ತಾಲೂಕಿನ ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕೆನ್ನುವ ವಾದಕ್ಕೆ ಪುಷ್ಠಿ ನೀಡುವಂತಹ ಶಾಸನವನ್ನು ಮಹಾರಾಷ್ಟ್ರದ ಮಿರಜ್‌ನ ಇತಿಹಾಸ ಹಾಗೂ ಪುರಾತತ್ವ ಇಲಾಖೆ ಪತ್ತೆ ಮಾಡಿದೆ.
    ಇತ್ತೀಚೆಗಷ್ಟೆ ಇತಿಹಾಸ ತಜ್ಞ ಗೌತಮ ಕಾಟಕರ, ಮಾನಸಿಂಗರಾವ್ ಕುಮಟೇಕರ್ ಅವರನ್ನು ಒಳಗೊಂಡ ತಂಡ ಜತ್ತ ತಾಲೂಕಿನ ವಜ್ರವಾಡಕ್ಕೆ ಭೇಟಿ ನೀಡಿ ಅಲ್ಲಿನ ಹಳ್ಳದ ದಡದಲ್ಲಿರುವ ಸಿದ್ಧನಾಥ ಮಂದಿರ (ಬಸವೇಶ್ವರ)ದಲ್ಲಿಯ ಶಿಲಾ ಶಾಸನ ಪತ್ತೆ ಮಾಡಿದೆ. ‘1371ರಲ್ಲಿ ಸಿದ್ಧನಾಥ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಮತ್ತು ಪೂಜೆ- ನೈವೇದ್ಯಕ್ಕಾಗಿ ಕೆಲ ಜಮೀನುಗಳನ್ನು ದಾನದ ರೂಪದಲ್ಲಿ ನೀಡಿರುವ ಬಗ್ಗೆ ಈ ಶಾಸನದಲ್ಲಿ ಹಳೆಗನ್ನಡದಲ್ಲಿ ಉಲ್ಲೇಖಿಸಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
    ಈ ಮಂದಿರವನ್ನು ಚಾಲುಕ್ಯರ ಕಾಲಘಟ್ಟದಲ್ಲಿ ಹೇಮಾಡಿಪಂಥಿ ಪದ್ಧತಿ ಪ್ರಕಾರ ನಿರ್ಮಾಣ ಮಾಡಲಾಗಿದೆ. ಈ ಮಂದಿರ ಕಟ್ಟಡದ ಗೋಡೆ ಮೇಲಿದ್ದ ಶಾಸನದಲ್ಲಿ ಹಳೆಗನ್ನಡ ಭಾಷೆೆಯಲ್ಲಿ ಬರೆಯಲಾಗಿದೆ. ಕರ್ನಾಟಕದ ಹಂಪಿಯ ಕಲವೀರ ಮನ್ವಾಚಾರ್ಯರಿಂದ ಹಳೆಗನ್ನಡ ಲಿಪಿಯ ಮಾಹಿತಿ ಪಡೆಯಲಾಗಿದೆ. ಮೊದಲು ಇದು ಶಿವಾಲಯವಾಗಿದ್ದು, ಸಿದ್ಧನಾಥ ಮಂದಿರ ಎಂದೇ ಕರೆಯಲಾಗುತ್ತಿತು. ಈಗ ಇದನ್ನು ಬಸವೇಶ್ವರ ಮಂದಿರ ಎಂದು ಕರೆಯಲಾಗುತ್ತದೆ ಎಂದು ಸ್ಥಳೀಯ ಈರಗೊಂಡ ಪಾಟೀಲ ಹೇಳುತ್ತಾರೆ.
    1371ರಲ್ಲಿ ಮಂದಿರದ ಜೀರ್ಣೋದ್ಧಾರ ಕೈಗೊಂಡಾಗ ಶಿಲಾ ಶಾಸನ ಅಳವಡಿಸಿರಬಹುದು. ಇತಿಹಾಸದ ಪ್ರಕಾರ 1371ರ ಸಮಯದಲ್ಲಿ ಯಾದವರ ಆಳ್ವಿಕೆ ಮುಕ್ತಾಯಗೊಂಡು ಮುಸ್ಲಿಂ ರಾಜರ ಆಳ್ವಿಕೆ ಪ್ರಾರಂಭವಾಗಿತ್ತು. ಆಗ ವಜ್ರವಾಡ ಗ್ರಾಮದ ವ್ಯಾಪಾರಿ ಗೋಪಾಳಶೆಟ್ಟಿಯ ಮಗ ರಾಜು ಶೆಟ್ಟಿ ಈ ಮಂದಿರವನ್ನು ಮತ್ತೊಮ್ಮೆ ಜೀರ್ಣೋದ್ಧಾರ ಮಾಡಿರುವ ಬಗ್ಗೆ ಉಲ್ಲೇಖವಿದೆ.

    ಶಿಲಾ ಶಾಸನ ರಕ್ಷಿಸಿ

    ಶಕೆ 1293 ನಾಮ ಸಂವತ್ಸರ ಪಾಲ್ಗುಣ ಶುದ್ಧ ದ್ವಿತೀಯ ರೋಹಿಣಿ ನಕ್ಷತ್ರದಂದು ಜೀಣೋದ್ಧಾರವನ್ನು ಗೋಪಾಲಶೆಟ್ಟಿ ಎನ್ನುವವರ ಮಗ ಮಾಡಿದ್ದಾರೆ. ಇಂಗ್ಲಿಷ್ ದಿನಾಂಕ ಪ್ರಕಾರ 1371 ಮಾರ್ಚ್ 2 ಆಗುತ್ತದೆ. ಕೆಲ ಜಮೀನನ್ನು ಬ್ರಾಹ್ಮಣರಿಗೆ ದಾನ ರೂಪದಲ್ಲಿ ನೀಡಿರುವ ಬಗ್ಗೆ ಹಾಗೂ ಈ ಶಾಸನವನ್ನು ಹಾಳು ಮಾಡಬೇಡಿ, ರಕ್ಷಿಸಿ ಎಂದು ಅದರ ಮೇಲೆ ಉಲ್ಲೇಖಿಸಲಾಗಿದೆ. ಕೆಲದಿನಗಳ ಹಿಂದೆ ಪಂಢರಪುರ ಸಮೀಪದ ಗ್ರಾಮವೊಂದರ ಮಂದಿರದಲ್ಲಿ ಇದೇ ತರಹದ ಹಳೆಗನ್ನಡ ಲಿಪಿ ಹೊಂದಿರುವ ಬಂಡೆಗಳು ಪತ್ತೆಯಾಗಿದ್ದವು. ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯಲ್ಲಿ ಕನ್ನಡ ಎನ್ನುವ ತಾಲೂಕು ಇರುವುದು ಇನ್ನೊಂದು ವಿಶೇಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts