More

    ಗ್ರಾಪಂ ನೌಕರರ ಸಂಘದಿಂದ ಪ್ರತಿಭಟನೆ

    ಮಡಿಕೇರಿ: ರಾಜ್ಯದ ಎಲ್ಲ ಗ್ರಾಮ ಪಂಚಾಯತಿ ಸಿಬ್ಬಂದಿಗೆ ಇಎಫ್‌ಎಂಎಸ್ ಮೂಲಕ ವೇತನಕ್ಕಾಗಿ ಬಾಕಿ ಇರುವ 382 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಸೇರಿಸಲು ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.


    ಸಂಘದ ಅಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ರಾಜ್ಯದಲ್ಲಿ 6024 ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 65000 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ವಾರ್ಷಿಕ ಸಂಬಳಕ್ಕೆ 900 ಕೋಟಿ ರೂ.ಬೇಕಾಗುತ್ತದೆ. ಆದರೆ ಕಳೆದ 4-5 ತಿಂಗಳಿಂದ ಕೆಲವು ಸಿಬ್ಬಂದಿ ವೇತನ ಬಾಕಿ ಉಳಿದಿದೆ. ಈ ಹಿನ್ನೆಲೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ ಎಂದರು.


    ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದ ಯಾವ ಆದೇಶವನ್ನು ಜಾರಿ ಮಾಡುತ್ತಿಲ್ಲ. ಜತೆಗೆ ಗ್ರಾಪಂ ಆಡಳಿತ ಅವಧಿ ಮುಗಿಯುತ್ತಿರುವುದರಿಂದ ಹೆಚ್ಚಿನ ಹಣ ದುರುಪಯೋಗವಾಗುತ್ತಿದೆ. 15ರಿಂದ 20 ವರ್ಷ ಸೇವೆ ಸಲ್ಲಿಸಿದರೂ ಬಿಲ್ ಕಲೆಕ್ಟರ್‌ಗಳಿಗೆ ಬಡ್ತಿ ಸಿಗುತ್ತಿಲ್ಲ. ಜತೆಗೆ ಜಿಲ್ಲಾ ಪಂಚಾಯಿತಿಗಳಲ್ಲಿ ಬಡ್ತಿ ಪಟ್ಟಿ ಸಿದ್ಧತೆ ಮಾಡದೆ ಕಾಲ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.


    ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ ಗ್ರಾಪಂ ನೌಕರರ ಸಮಸ್ಯೆ, ಬೇಡಿಕೆಗಳ ಕುರಿತು ಚರ್ಚೆ ನಡೆಸುತ್ತಿಲ್ಲ ಎಂದು ದೂರಿದ ಅವರು, ಪಂಚಾಯಿತಿಗಳಲ್ಲಿ ಅಧಿಕಾರಿಗಳು ಕಾಟಾಚಾರದ ಕೆಲಸ ಮಾಡುತ್ತಿದ್ದಾರೆ. ಕೆಲವು ಗ್ರಾಪಂ ಅಧ್ಯಕ್ಷರು ಇಲ್ಲಸಲ್ಲದ ಆರೋಪಗಳನ್ನು ನೌಕರರ ಮೇಲೆ ಹೇರುವುದರ ಜತೆಗೆ ನೌಕರರನ್ನು ಕೆಲಸದಿಂದ ತೆಗೆಯುವ ಪ್ರವೃತ್ತಿ ನಡೆಯುತ್ತಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.


    ಫೆ.25ರಂದು ಕೂಡುಮಂಗಳೂರು ಗ್ರಾಪಂ ಮುಂಭಾಗ ನೌಕರರು ಗ್ರಾಮದ ಕಸ ವಿಲೇವಾರಿ ಮಾಡದೆ ಪ್ರತಿಭಟಿಸಲಿದ್ದಾರೆ. ಫೆ.29ರಂದು ಹಂಡ್ಲಿ ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಸಲಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಸಂಘದ ವತಿಯಿಂದ ನೌಕರರೊಡನೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.ನಂತರ ಜಿಪಂ ಸಿಇಒ ಲಕ್ಷ್ಮೀಪ್ರಿಯ ಅವರಿಗೆ ಪ್ರತಿಭಟನಾನಿರತರು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಿರಾಜಪೇಟೆ ತಾಲೂಕು ಅಧ್ಯಕ್ಷ ಎಂ.ಬಿ.ಹರೀಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ನವೀನ್, ಪ್ರಮುಖರಾದ, ವಿಜಯ್, ದಿಲೀಪ್, ಸಜೀತಾ, ವಸಂತ್, ಸಂಘದ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts