More

    ದರ ಹೊಡೆತಕ್ಕೆ ತತ್ತರಿಸಿದ ಶುಂಠಿ ಕೃಷಿಕ

    ಮಡಿಕೇರಿ: ಕಳೆದ ವರ್ಷ 60 ಕೆ.ಜಿ. ತೂಕದ ಒಂದು ಚೀಲ ಶುಂಠಿಗೆ ಮಾರುಕಟ್ಟೆಯಲ್ಲಿ 3,500 ರಿಂದ 4,000 ರೂ. ಲಭ್ಯವಾಗಿತ್ತು. ಅದೇ ಆಸೆ ಮತ್ತು ನಿರೀಕ್ಷೆಯಲ್ಲಿ ಶುಂಠಿ ಬೆಳೆದ ಕೃಷಿಕರು ಈಗ ತಲೆ ಮೇಲೆ ಕೈ ಹೊತ್ತುಕೊಳ್ಳುವಂತಾಗಿದೆ. ಈಗ ಮಾರುಕಟ್ಟೆಯಲ್ಲಿ ಶುಂಠಿ ಕೇಳುವವರೇ ಇಲ್ಲದಂತಾಗಿದೆ. ಒತ್ತಾಯ ಮಾಡಿದ್ದಲ್ಲಿ 700 ರಿಂದ 750 ರೂ.ಗೆ ಕಷ್ಟದಲ್ಲಿ ಖರೀದಿಸುತ್ತಿದ್ದಾರೆ.


    ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿದೇಶಕ್ಕೆ ಶುಂಠಿ ರಫ್ತಾಗುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ದರ ದೊಡ್ಡ ಮಟ್ಟದ ಕುಸಿತ ಕಂಡಿದೆ. ಇದರ ಪ್ರತಿಕೂಲ ಪರಿಣಾಮವನ್ನು ಶುಂಠಿ ಕೃಷಿಕರು ಎದುರಿಸುತ್ತಿದ್ದಾರೆ. ಹಣ ಸಂಪಾದಿಸುವ ಆಸೆಯಲ್ಲಿ ಶುಂಠಿ ಬೆಳೆದು ಕೈಸುಟ್ಟುಕೊಳ್ಳುವಂತಾಗಿದೆ. ಲಾಭದ ನಿರೀಕ್ಷೆಯಲ್ಲಿದ್ದ ನಾವು ಅಸಲು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಬೆಳೆಗಾರರು ಪರಿತಪಿಸುತ್ತಿದ್ದಾರೆ.


    ಒಂದು ಎಕರೆಯಲ್ಲಿ ಶುಂಠಿ ಕೃಷಿ ಮಾಡಲು ಬರೋಬ್ಬರಿ 3 ರಿಂದ 3.50 ಲಕ್ಷ ರೂ. ವೆಚ್ಚವಾಗಲಿದೆ. ಒಂದು ಎಕರೆಯಲ್ಲಿ ಶುಂಠಿ ಕೃಷಿ ಮಾಡಲು 25 ಚೀಲ ಬಿತ್ತನೆ ಬೀಜ ಬೇಕಾಗುತ್ತದೆ. ಒಂದು ಚೀಲ ಬಿತ್ತನೆ ಬೀಜವನ್ನು 4 ಸಾವಿರ ರೂ.ಗೆ ಖರೀದಿಸಬೇಕಿದೆ. ಟ್ರಾೃಕ್ಟರ್ ಮೂಲಕ ಉಳುಮೆ ಮಾಡಲು, ಬೆಡ್ ಮಾಡಲು, ಶುಂಠಿ ಬಿತ್ತನೆ ಮಾಡಲು ಹಣ ವ್ಯಯಿಸಲೇಬೇಕು. ಇನ್ನು ರಸಗೊಬ್ಬರಕ್ಕೆ 25 ರಿಂದ 30 ಸಾವಿರ ರೂ. ಖರ್ಚು ಮಾಡಬೇಕಾಗುತ್ತದೆ. ಮೂರು ಸಲ ಮಣ್ಣು ಹಾಕುವುದು ಸೇರಿ ಹಲವು ಕೆಲಸಕ್ಕೆ ಕಾರ್ಮಿಕರನ್ನು ಅವಲಂಬಿಸಬೇಕಾಗುತ್ತದೆ. ಕಾರ್ಮಿಕರಿಗೆ ಪ್ರತಿನಿತ್ಯ 250 ರೂ. ಕೂಲಿ ನೀಡಬೇಕಾಗುತ್ತದೆ. ಒಟ್ಟಾರೆ ಖರ್ಚು-ವೆಚ್ಚದ ಲೆಕ್ಕ ಹಾಕಿದ್ದಲ್ಲಿ ಮಾಡಿದ ಖರ್ಚು ಪಡೆಯಲು ಕನಿಷ್ಠ ಒಂದು ಚೀಲಕ್ಕೆ 1,500 ರೂ. ಸಿಗಬೇಕೆಂದು ಶುಂಠಿ ಕೃಷಿಕರು ಹೇಳುತ್ತಾರೆ.


    ಆಗಸ್ಟ್ ತಿಂಗಳಿನಲ್ಲಿ ಒಂದು ವಾರಗಳ ಕಾಲ ಧಾರಾಕಾರವಾಗಿ ಸುರಿದ ಮಳೆಯಿಂದ ಶುಂಠಿ ಕೃಷಿಕರು ಅಪಾರ ನಷ್ಟ ಅನುಭವಿಸಿದ್ದಾರೆ. ಇದರೊಂದಿಗೆ ಪ್ರಸ್ತುತ ಕಾಣಿಸಿಕೊಂಡಿರುವ ಬಿಸಿಲು- ಮಳೆಯಿಂದಾಗಿ ಶುಂಠಿ ಕೊಳೆ ರೋಗಕ್ಕೆ ತುತ್ತಾಗುತ್ತಿದೆ. ದರ ಕುಸಿತದ ನಡುವೆ ಈ ರೀತಿಯ ರೋಗಗಳಿಂದ ಶುಂಠಿ ಕೃಷಿಕರು ಕಂಗಾಲಾಗಿದ್ದಾರೆ.


    ಕಳೆದ ವರ್ಷ 3,500 ರಿಂದ 4 ಸಾವಿರ ರೂ. 60 ಕೆಜಿ ತೂಕದ ಚೀಲಕ್ಕೆ ಲಭ್ಯವಾಗಿತ್ತು. ಹಳೆಯ ಶುಂಠಿಯನ್ನು 3 ರಿಂದ 5 ಸಾವಿರ ರೂ.ಗೆ ಮಾರಾಟವಾಗಿತ್ತು. ಈಗ ಹೊಸ ಶುಂಠಿಯನ್ನು ಕೇಳುವವರೇ ಇಲ್ಲ. ಒತ್ತಾಯ ಮಾಡಿದ್ದಲ್ಲಿ 700 ರಿಂದ 750 ರೂ.ಗೆ ಕೇಳುತ್ತಿದ್ದಾರೆ ಎಂದು ತಮ್ಮ ಅಸಹಾಯಕ ಪರಿಸ್ಥಿತಿ ಶುಂಠಿ ಕೃಷಿಕರು ತೆರೆದಿಡುತ್ತಾರೆ.

    ದೊಡ್ಡ ಮಟ್ಟದಲ್ಲಿ ದರ ಕುಸಿತವಾಗಿರುವುದರಿಂದ ಈ ವರ್ಷ ಶುಂಠಿ ಕೃಷಿಕರು ನಷ್ಟಕ್ಕೆ ತುತ್ತಾಗುವಂತಾಗಿದೆ. ಹೊಸ ಶುಂಠಿ ಕೇಳುವವರೇ ಇಲ್ಲ. ಬಿಸಿಲು, ಮಳೆಯಿಂದ ಬೆಳೆದ ಶುಂಠಿ ಕೊಳೆತು ಹೋಗುತ್ತಿದೆ. ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿಗೆ ಶುಂಠಿ ಕೃಷಿಕರು ಒಳಗಾಗುವಂತಾಗಿದೆ.
    ಬಿ.ವೈ. ಅಪ್ರು ರವೀಂದ್ರ, ಶುಂಠಿ ಕೃಷಿಕ, ಹೊಸ್ಕೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts