More

    ಜಿಲ್ಲೆಗೆ ಇಂದು ಕೇಂದ್ರ ತಂಡ ಭೇಟಿ

    ಮಡಿಕೇರಿ: ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಉಂಟಾದ ನಷ್ಟದ ಕುರಿತು ಅಧ್ಯಯನ ನಡೆಸಲು ಮಂಗಳವಾರ ಜಿಲ್ಲೆಗೆ ಕೇಂದ್ರ ತಂಡ ಭೇಟಿ ನೀಡಲಿದೆ. ಅಧಿಕಾರಿಗಳು ನಿಖರ ಮಾಹಿತಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದರು.


    ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಕೇಂದ್ರ ತಂಡವು ಭೂಕುಸಿತ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿನೀಡಿ ಅಧ್ಯಯನ ನಡೆಸಲಿದೆ. ಈ ನಿಟ್ಟಿನಲ್ಲಿ ಜೀವಹಾನಿ, ರಸ್ತೆ, ಸೇತುವೆ, ನೀರಾವರಿ, ಸೆಸ್ಕ್, ಮೂಲ ಸೌಲಭ್ಯಗಳು, ಶಾಲೆ, ಅಂಗನವಾಡಿ, ಕಚೇರಿ ಕಟ್ಟಡಗಳು ಹಾನಿಯಾದ ಬಗ್ಗೆ ನಿಖರ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದರು.


    ಕೂಡಿಗೆ ಸೈನಿಕ ಶಾಲೆಗೆ ಹೆಲಿಪ್ಯಾಡ್‌ಗೆ ತಂಡ ಆಗಮಿಸಲಿದ್ದು, ಸೈನಿಕ ಶಾಲೆಯಲ್ಲಿ ಮಳೆಯಿಂದ ಹಾನಿಯಾದ ನಷ್ಟದ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ನೀಡಲಿದೆ. ಬಳಿಕ ಕಡಗದಾಳು ಬೊಟ್ಲಪ್ಪ ಪೈಸಾರಿ ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ನಂತರ ತಲಕಾವೇರಿಯ ಗಜಗಿರಿ ಬೆಟ್ಟ ಭೂಕುಸಿತ ಪ್ರದೇಶ, ಚೇರಂಗಾಲ ರಸ್ತೆ, ಸೇತುವೆ ಹಾನಿ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.


    ಕೇಂದ್ರ ತಂಡ ಜಿಲ್ಲೆಗೆ ಭೇಟಿ ನಂತರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚಿಸಲಿದೆ. ಈ ನಿಟ್ಟಿನಲ್ಲಿ ಸಮರ್ಪಕ ರೀತಿಯಲ್ಲಿ ಕೇಂದ್ರ ತಂಡಕ್ಕೆ ವರದಿ ನೀಡುವುದು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳ ಅತಿ ಮುಖ್ಯ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

    ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಡಿವೈಎಸ್‌ಪಿಗಳಾದ ದಿನೇಶ್ ಕುಮಾರ್, ಶೈಲೇಂದ್ರ, ಜಯಕುಮಾರ್, ತಹಸೀಲ್ದಾರರಾದ ಗೋವಿಂದರಾಜು, ಮಹೇಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನ.ಎಂ.ಶೇಖ್, ಲೋಕೋಪಯೋಗಿ ಇಲಾಖೆಯ ಎಇಇ ಶಿವರಾಮ್ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts