More

    ಮೌಲ್ಯಯುತ ವಾತಾವರಣ ನಿರ್ಮಿಸಬೇಕಿದೆ ; ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಕರೆ

    ಚೇಳೂರು: ಶೋಷಿತ ಸಮುದಾಯವು ಗೌರವಯುತ ಬದುಕು ಸಾಗಿಸಲು ಪೂರಕವಾದ ಸಾಮಾಜಿಕ ಪರಿವರ್ತನೆಗೆ ಶ್ರಮಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಕರೆ ನೀಡಿದರು.

    ಬಸ್ ನಿಲ್ದಾಣದಲ್ಲಿ ಕರ್ನಾಟಕ ಮಾದಿಗ ದಂಡೋರ ಕೈಗೊಂಡಿದ್ದ ಜನಜಾಗೃತಿ ಜಾಥಾ ಹಾಗೂ ಮಾದಿಗ ದಂಡೋರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಸ್ವತಃ ಅವಮಾನ, ಶೋಷಣೆ, ಅಸ್ಪಶ್ಯತೆ ಎದುರಿಸಿದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅಕ್ಷರ, ಸಂಘಟನೆ ಮತ್ತು ಹೋರಾಟದ ಕ್ರಾಂತಿಯ ಮೂಲಕ ದೊಡ್ಡ ಧ್ವನಿಯಾಗಿ ಗಮನ ಸೆಳೆದರು.

    ಸಮಾನತೆಯ ಸಮಾಜ ನಿರ್ಮಾಣದ ಕನಸನ್ನು ಸಾಕಾರಗೊಳಿಸಲು ನಿರಂತರವಾಗಿ ಶ್ರಮಿಸಿದರು. ಇದನ್ನು ಸಮುದಾಯ ಮಾದರಿಯಾಗಿ ಸ್ವೀಕರಿಸಬೇಕು. ನಿರೀಕ್ಷೆಗೆ ಅನುಗುಣವಾಗಿ ಮತ್ತಷ್ಟು ಸಾಮಾಜಿಕ ಪರಿವರ್ತನೆಗೆ ಪಣತೊಡಬೇಕು ಎಂದು ಸಲಹೆ ನೀಡಿದರು.

    ಅನಾದಿ ಕಾಲದಿಂದಲೂ ನಾನಾ ರೀತಿಯಲ್ಲಿ ಶೋಷಿತ ಸಮುದಾಯವು ಸಾಮಾಜಿಕ ಪಿಡುಗುಗಳಿಂದ ತುಳಿತಕ್ಕೊಳಗಾಗಿರುವುದನ್ನು ಸಮಾಜ ಕಂಡಿದೆ. ಮುಂಬರುವ ದಿನಗಳಲ್ಲಿ ಸಾಮಾಜಿಕ ನ್ಯಾಯವನ್ನು ಕಾಣಬೇಕು. ಈ ನಿಟ್ಟಿನಲ್ಲಿ ಸಕಾರಾತ್ಮಕ ಬದಲಾವಣೆಯ ಲಕ್ಷಣಗಳು ಕಾಣುತ್ತಿರುವುದು ಖುಷಿ ವಿಚಾರ ಎಂದರು.

    ಕಳೆದ 75 ವರ್ಷಗಳಿಂದಲೂ ಮತದಾನದ ಮೂಲಕ ದೇಶ ಕಟ್ಟುವ ಕೆಲಸದಲ್ಲಿ ತೊಡಗಲಾಗಿದೆ. ಇದೀಗ ಮಾನವೀಯತೆ ಮತ್ತು ಸಾಮಾಜಿಕ ಮೌಲ್ಯಗಳನ್ನು ಒಳಗೊಂಡ ವಾತಾವರಣ ನಿರ್ಮಿಸಬೇಕಾಗಿದೆ. ಇದಕ್ಕೆ ದೇಶದಲ್ಲಿನ ಮಹನೀಯರ ಜತೆಗೆ ಜನ ಸಾಮಾನ್ಯರು ಒಗ್ಗಟ್ಟಿನಿಂದ ಸಾಗಬೇಕು ಎಂದರು.

    ಆದಿ ಜಾಂಬವ ನಿಗಮ ಮಂಡಳಿಯ ಅಧ್ಯಕ್ಷ ಶಿವಣ್ಣ ಮಾತನಾಡಿ, ಸಮುದಾಯದ ಕಾಳಜಿಯ ದೃಷ್ಟಿಯಲ್ಲಿ ಪಕ್ಷಾತೀತ ಧೋರಣೆಯ ಮೂಲಕ ಸಚಿವ ನಾರಾಯಣಸ್ವಾಮಿ ಉತ್ತಮ ವ್ಯಕ್ತಿತ್ವ ಪ್ರದರ್ಶಿಸುತ್ತಿದ್ದಾರೆ. ಇಂತಹ ಮನೋಭಾವನೆಯು ಎಲ್ಲ ನಾಯಕರಲ್ಲೂ ಮೂಡಬೇಕಾಗಿದೆ ಎಂದರು.

    ಸದಾಶಿವ ಆಯೋಗದ ವರದಿ ಜಾರಿಯು ಶೋಷಿತ ಸಮುದಾಯಗಳು ಬಹು ವರ್ಷಗಳ ಬೇಡಿಕೆ. ಇದಕ್ಕೆ ಅನುಷ್ಠಾನಗೊಳ್ಳಬೇಕೆಂಬ ವಿಚಾರದಲ್ಲಿ ಭಿನ್ನಾಭಿಪ್ರಾಯವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಸಚಿವರಾದಿಯಾಗಿ ಎಲ್ಲರೂ ಒತ್ತಡ ಹೇರುತ್ತಿದ್ದಾರೆ ಎಂದರು.

    ಮಾಜಿ ಶಾಸಕ ಪಿಳ್ಳ ಮುನಿಶಾಮಪ್ಪ ಮಾತನಾಡಿ, ಸಮುದಾಯದ ಹಿತಾಸಕ್ತಿಯನ್ನು ಕಾಪಾಡುವ ವಿಚಾರದಲ್ಲಿ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತ, ಸವಲತ್ತುಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದರು. ಮಾದಿಗ ದಂಡೋರದ ರಾಜ್ಯಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ, ಉಪಾಧ್ಯಕ್ಷ ಎಂ.ಶಂಕರಪ್ಪ, ಚೇಳೂರು ಅಧ್ಯಕ್ಷ ಎನ್.ಬಾಬು, ಹೊಸಕೋಟೆ ಮಾತಂಗ ಫೌಂಡೇಷನ್ ಉಪಾಧ್ಯಕ್ಷ ಸುಬ್ಬಣ್ಣ, ಮುಖಂಡರಾದ ಗಂಗಾಧರ್, ವಿ.ಅಮರ್, ಎನ್.ವಿಜಯರೆಡ್ಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ, ಎಸ್.ಸಿ.ಮೋರ್ಚಾ ಕಾರ್ಯಕಾರಿಣಿ ಸಮಿತಿ ಸಂಚಾಲಕ ಬಾಲಕುಂಟಹಳ್ಳಿ ಗಂಗಾಧರ್, ಎಂ.ಜಿ.ಕಿರಣ್‌ಕುಮಾರ್, ಲಕ್ಷ್ಮೀನಾರಾಯಣ ಮತ್ತಿತರರು ಇದ್ದರು.

    ಪ್ರಬಲ ಸಂಘಟನೆ ಅಗತ್ಯ: ಯಾವುದೇ ಸಮುದಾಯವು ಭಿನ್ನಾಭಿಪ್ರಾಯಗಳನ್ನು ಮರೆತು ಪ್ರಬಲ ಸಂಘಟನೆಯಾದಾಗ ಮಾತ್ರ ಅಭಿವೃದ್ಧಿಪಥದತ್ತ ಸಾಗಲು ಸಾಧ್ಯ. ಇದಕ್ಕೆ ವೈಯಕ್ತಿಕ ವಿಚಾರಗಳನ್ನು ಕಡೆಗಣಿಸಿ ಸಾಮಾಜಿಕ ಚಿಂತನೆಗಳೊಂದಿಗೆ ಮುನ್ನಡೆಯಬೇಕು ಎಂದು ಶ್ರೀ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ಸಲಹೆ ನೀಡಿದರು.

    ಮೀಸಲಾತಿ, ನ್ಯಾಯಕ್ಕಾಗಿ ಹೋರಾಟ: ಶೋಷಿತ ಸಮುದಾಯದ ಕಲ್ಯಾಣಕ್ಕೆ ಸೂಕ್ತ ಗಟ್ಟಿ ನೆಲೆ, ಶಿಕ್ಷಣ ಸೇರಿ ನ್ಯಾಯಯುತ ಸವಲತ್ತುಗಳು ಅಗತ್ಯ. ಯಾವ ಸಮಾಜಕ್ಕೂ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದಂತಹ ವಾತಾವರಣವಿರುವ ಸಂದರ್ಭದಲ್ಲಿ ನ್ಯಾಯ ಮತ್ತು ಮೀಸಲಾತಿಗಾಗಿ ಹೋರಾಟ ನಡೆಸಬೇಕು. ತುಳಿತಕ್ಕೆ ಒಳಗಾದವರನ್ನು ಆದರ್ಶ ರೂಪದಲ್ಲಿ ಗುರುತಿಸಬೇಕು. ಈ ನಿಟ್ಟಿನಲ್ಲಿ ಸಮುದಾಯದ ಜನರು ಬದಲಾವಣೆಯ ಹರಿಕಾರರಾಗಬೇಕು ಎಂದು ಸಚಿವರು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts