More

    ಮಾರಪಲ್ಲಿ ಮಾದರಿ ಸರ್ಕಾರಿ ಶಾಲೆ ; ವರ್ಲಿ ವರ್ಣ ವೈಭವದ ಮೆರಗು

    ಚಿಂತಾಮಣಿ: ಸರ್ಕಾರಿ ಶಾಲೆ ಎಂದರೆ ಎಲ್ಲರೂ ಮೂಗು ಮುರಿಯುವವರೇ. ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿರುವ ಕಟ್ಟಡಗಳು, ಮುರಿದ ಕಿಟಕಿ-ಬಾಗಿಲುಗಳು, ಗಬ್ಬೆದ್ದು ನಾರುವ ಶೌಚಗೃಹ, ಸೋರುವ ಮಾಳಿಗೆ…! ಹೀಗೆ ಸಮಸ್ಯೆಗಳ ಸರಮಾಲೆಯೇ ಸರ್ಕಾರಿ ಶಾಲೆಗಳು ಎಂಬುದೇ ಹಲವರ ಅಭಿಮತ…

    ಆದರೆ ತಾಲೂಕಿನ ಕೈವಾರ ಕ್ಲಸ್ಟರ್‌ನ ಮಾರಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ಅಪವಾದಕ್ಕೆ ವಿರುದ್ಧವಾಗಿದ್ದು, ಖಾಸಗಿ ಶಾಲೆಗೆ ಪೈಪೋಟಿ ನೀಡುವಂತಿದೆ. ಶಿಕ್ಷಕನೊಬ್ಬನ ಅವಿರತ ಶ್ರಮ, ಸಮುದಾಯದ ಸಹಕಾರ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸದ್ಬಳಕೆಗೆ ಸಾಕ್ಷಿಯಾಗಿದೆ.

    ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಗೊಂಡ ಶಾಲೆ ಸುಸಜ್ಜಿತ ಕಟ್ಟಡದೊಂದಿಗೆ ಉತ್ತಮ ಹಾಗೂ ಹಚ್ಚಹಸಿರಿನ ವಾತಾವರಣ ಹೊಂದಿದೆ. ಗೋಡೆಗಳು ವರ್ಲಿ ವರ್ಣ ವೈಭವದ ಚಿತ್ತಾರದೊಂದಿಗೆ ಇಡೀ ಶಾಲೆ ಅಂದ-ಚೆಂದವಾಗಿ ಕಂಗೊಳಿಸುತ್ತಿದೆ.

    ಶಾಲೆಯ ಹೊರಭಾಗದ ಗೋಡೆಗಳ ಮೇಲೆ ರಾರಾಜಿಸುತ್ತಿರುವ ದಸರಾ ಮಹೋತ್ಸವವನ್ನು ನೆನಪಿಸುವ ಬಣ್ಣ ಬಣ್ಣದ ಚಿತ್ತಾರಗಳು, ವಿಜ್ಞಾನಕ್ಕೆ ಸಂಬಂಧಿಸಿದ ಕಲಾಕೃತಿಗಳು, ವಿವಿಧ ನಾಯಕರ ಭಾವಚಿತ್ರಗಳು, ನಾಡಿನ ಶಿಲ್ಪಕಲೆಯ ಸೊಬಗು ಶಾಲೆಯ ಅಂದವನ್ನೂ ಹೆಚ್ಚಿಸಿರುವುದರಲ್ಲೇ ಮಕ್ಕಳನ್ನು ಆಕರ್ಷಿಸುತ್ತಿವೆ.

    ಕೊಠಡಿಗಳ ಒಳ ಭಾಗದಲ್ಲಿಯೂ ವಿವಿಧ ಚಿತ್ರಗಳು, ಪಾಠ ಪ್ರವಚನಗಳಿಗೆ ಸಂಬಂಧಪಟ್ಟ ಚಿತ್ರಗಳನ್ನು ಸಹ ಬಿಡಿಸಲಾಗಿದ್ದು, ಪಠ್ಯ ಬೋಧನೆ ಸುಲಭಗೊಳಿಸುವ ಜತೆಗೆ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚ್ಚಿಸಲು ಕಾರಣವಾಗಿದೆ. ಕೈತೋಟದಲ್ಲಿ ವಿವಿಧ ಔಷಧ ಗಿಡಗಳು, ಹಣ್ಣಿನ ಗಿಡಗಳನ್ನು ಬೆಳೆಸಲಾಗಿದ್ದು, ಇಡೀ ಆವರಣದಲ್ಲಿ ಹಸಿರುಸಿರಿ ಕಂಗೊಳಿಸುತ್ತಿದ್ದು ಮಾದರಿ ಶಾಲೆಯಾಗಿದೆ.

    1942ರಲ್ಲಿ ಶಾಲೆ ಪ್ರಾರಂಭ: ಸ್ವಾತಂತ್ರ್ಯ ಪೂರ್ವ ಸ್ಥಾಪನೆಯಾದ ಈ ಶಾಲೆಯಲ್ಲಿ 1 ರಿಂದ 5ನೇ ತರಗತಿಯವರೆಗೆ ಇದ್ದು ಪ್ರಸ್ತುತ 20 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಓರ್ವ ಶಿಕ್ಷಕರು ಇದ್ದಾರೆ. ಎರಡು ಕೊಠಡಿಗಳು, ಒಂದು ಪ್ರೊಜೆಕ್ಟರ್ ಸ್ಕ್ರೀನ್, ನಾಲ್ಕು ಕಂಪ್ಯೂಟರ್, ಇಪ್ಪತ್ತು ನಲಿ-ಕಲಿ ಕುರ್ಚಿಗಳು, ಪತ್ಯೇಕ ಶೌಚಗೃಹಗಳು, ಸುಸಜ್ಜಿತ ಅಡುಗೆ ಕೋಣೆಯಿದ್ದು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ವಾತಾವರಣ ಹೊಂದಿದೆ.

    ಶಿಕ್ಷಕರ ಅವಿರತ ಶ್ರಮ: ಶಾಲಾ ಅಭಿವೃದ್ಧಿಯಲ್ಲಿ ಇಲ್ಲಿನ ಶಿಕ್ಷಕ ಮಂಜುನಾಥ್ ಪಾತ್ರ ಮಹತ್ತರವಾದುದು. ಕಳೆದ ಎರಡು ದಶಕಗಳಿಂದ ಇಲ್ಲಿಯೇ ಸೇವೆ ಸಲ್ಲಿಸುತ್ತಿದ್ದು, ಶಾಲೆಯನ್ನು ಮಾದರಿಯನ್ನಾಗಿಸಲು ಸಾಕಷ್ಟು ಶ್ರಮಿಸಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಸದಸ್ಯರ ಸಹಕಾರದಲ್ಲಿ ಶಾಲೆಗೆ ಹೊಸರೂಪ ನೀಡಿದ್ದು ಕಲಿಕೆಗೆ ಪೂರಕವಾದ ಉತ್ತಮ ವಾತಾವರಣ ನಿರ್ಮಾಣದೊಂದಿಗೆ ಆಕರ್ಷಣೀಯವಾಗಿಸಿದ್ದಾರೆ.

    ಪ್ರಶಸ್ತಿಗಳ ಗರಿ: ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ ಚಿಕ್ಕಬಳ್ಳಾಪುರ ಪ್ರಾದೇಶಿಕ ಕಚೇರಿಯಿಂದ (2012-13, 2013-14 ಮತ್ತು 2014-15 ನೇ ಸಾಲಿನಲ್ಲಿ) ಮೂರು ಬಾರಿ ಹಸಿರು ಶಾಲಾ ಪ್ರಶಸ್ತಿ, 2006-07 ನೇ ಸಾಲಿನ ಎನ್‌ಪಿಇಜಿಇಎಲ್ ಯೋಜನೆಯಡಿಯಲ್ಲಿ ಕ್ಲಸ್ಟರ್ ಹಂತದ ಉತ್ತಮ ಶಾಲಾ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಸಿಕ್ಕಿವೆ. 2019-20ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆಗೆ ಮಕ್ಕಳ ಆಯ್ಕೆ, ಉತ್ತಮ ಕಲಿಕೋಪಕರಣಗಳಿಂದ ಪಠ್ಯ ಬೋಧನೆಗೆ ಶಿಕ್ಷಕ ಮಂಜುನಾಥ್ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಯೋಜನೆಗಳು, ದಾನಿಗಳ ನೆರವು: ದಾನಿಗಳ ನೆರವಿನಿಂದ ಪೀಠೋಪಕರಣ, ಪಠ್ಯಚಟುವಟಿಕೆಗೆ ಅಗತ್ಯವಾದ ಸಾಮಗ್ರಿಗಳನ್ನು ಪಡೆಯಲಾಗಿದೆ. ಸರ್ಕಾರದಿಂದ ಶಾಲಾಭಿವೃದ್ಧಿ ಸಮಿತಿಗೆ ಬರುವ ಅನುದಾನ, ಉದ್ಯೋಗಖಾತ್ರಿ ಯೋಜನೆ ಬಳಸಿಕೊಂಡು ಶಾಲೆಗೆ ಹೊಸರೂಪ ನೀಡಲಾಗಿದೆ.

    20 ವರ್ಷದಿಂದ ಮಾರಪಲ್ಲಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಿಂತ ಉತ್ತಮವಾಗಬೇಕು ಹಾಗೂ ಇಲ್ಲಿಂದ ನಾವು ವರ್ಗಾವಣೆಯಾದರೂ ನಮ್ಮ ಹೆಜ್ಜೆಗುರುತು ಇರಬೇಕು. ಇದೇ ಉದ್ದೇಶದಿಂದ ಶಾಲೆಯನ್ನು ಎಸ್‌ಡಿಎಂಸಿ ಸಹಕಾರದಿಂದ ಮಾದರಿಯನ್ನಾಗಿಸಲಾಗಿದೆ.
    ಮಂಜುನಾಥ್, ಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts