More

    ಚರ್ಮಗಂಟು ರೋಗ ಮನುಷ್ಯರಿಗೆ ತಗಲಲ್ಲ: ಡಾ. ಎನ್.ಬಿ.ಶ್ರೀಧರ್

    ಶಿವಮೊಗ್ಗ: ಚರ್ಮಗಂಟು ರೋಗ ಬಂದ ಜಾನುವಾರುಗಳ ಹಾಲು ಬಳಕೆ ಮಾಡುವುದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಉದ್ಬವಿಸುವುದಿಲ್ಲ ಎಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಪಶುವೈದ್ಯಕೀಯ ಶಾಸ ಮತ್ತು ವಿಷಶಾಸ ವಿಭಾಗದ ಮುಖ್ಯಸ್ಥ ಡಾ. ಎನ್.ಬಿ.ಶ್ರೀಧರ್ ಹೇಳಿದರು.
    ನಗರದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಪಶುವೈದ್ಯಕೀಯ ಇಲಾಖೆಯ ತಾಂತ್ರಿಕ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಜಾನುವಾರುಗಳ ಚರ್ಮಗಂಟು ರೋಗ ಮನುಷ್ಯರಿಗೆ ತಗಲುವುದಿಲ್ಲ. ಹಾಗಾಗಿ ಜನರು ಹೆಚ್ಚು ಆತಂಕಕ್ಕೆ ಒಳಗಾಗುವ ಅಗತ್ಯತೆ ಇಲ್ಲ ಎಂದರು.
    ಚರ್ಮಗಂಟು ರೋಗ ಆಫ್ರಿಕಾ ಖಂಡದಲ್ಲಿ ಮೊದಲು ಕಾಣಿಸಿಕೊಂಡಿತ್ತು. ಬಳಿಕ ಶ್ರೀಲಂಕಾ ಮೂಲಕ 2019ರಲ್ಲಿ ಭಾರತಕ್ಕೆ ಪ್ರವೇಶಿಸಿತು. ಕಳೆದ ವರ್ಷ ಜಾನುವಾರು ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಈಗಾಗಲೇ ಕೇಂದ್ರ ಸರ್ಕಾರ ಇದೊಂದು ಅಧಿಸೂಚಿತ ಕಾಯಿಲೆ ಎಂದು ಪ್ರಕಟಣೆ ಹೊರಡಿಸಿದ್ದು ಚರ್ಮಗಂಟು ರೋಗ ವೈರಾಣುವಿನಿಂದ ಹರಡುವ ಕಾಯಿಲೆ. ನೊಣ ಮತ್ತು ಸೊಳ್ಳೆಗಳಿಂದ ಇದು ಹರಡುತ್ತದೆ. ರೋಗ ಬಂದ ಜಾನುವಾರು ಕಚ್ಚಿದ ಬಳಿಕ ಮತ್ತೊಂದು ಜಾನುವಾರಿಗೆ ಕಚ್ಚಿದಾಗ ಕಾಯಿಲೆ ಹರಡುತ್ತದೆ. ನೊಣಗಳು ಸುಮಾರು 12 ಕಿಮೀ ದೂರದವರೆಗೂ ಹೋಗಿ ವೈರಾಣು ಪ್ರಸರಣ ಮಾಡುತ್ತವೆ ಎಂದು ಸ್ಪಷ್ಟಪಡಿಸಿದರು.
    ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ. ಬಸವೇಶ ಹೂಗಾರ್ ಮಾತನಾಡಿ, ಚರ್ಮಗಂಟು ರೋಗಕ್ಕೆ ಈಗ ತಾನೇ ಲಸಿಕೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಅದರ ಪರಿಣಾಮದ ಬಗ್ಗೆ ಇನ್ನೂ ಅಧ್ಯಯನ ನಡೆಯುತ್ತಿದೆ. ರೋಗ ಕಾಣಿಸಿಕೊಂಡ ಬಳಿಕ ಯಾವುದೇ ಕಾರಣಕ್ಕೂ ಲಸಿಕೆ ಕೊಡಬಾರದು. ಲಸಿಕೆ ಹಾಕಿದ ಬಳಿಕ ರೋಗ ನಿರೋಧಕ ಶಕ್ತಿ ಬರಲು 18ರಿಂದ 21 ದಿನಗಳು ಬೇಕು ಎಂದರು.
    ಪಶುವೈದ್ಯಕೀಯ ಇಲಾಖೆ ಅಪರ ನಿರ್ದೇಶಕ ಕೆ.ಎಚ್.ಶಿವರುದ್ರಪ್ಪ, ಜಂಟಿ ನಿರ್ದೇಶಕ ಡಾ. ಬಿ.ಕೃಷ್ಣಪ್ಪ, ಜಿಲ್ಲಾ ಪರಿವೀಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ. ಶಿವಯೋಗಿ ಎಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts