More

    ಗ್ರಾಮ ಪಂಚಾಯಿತಿಯಲ್ಲೂ ಕಮಲ ಕಲರವ

    ಕಾರವಾರ: ಗ್ರಾಮ ಸಂಗ್ರಾಮದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಉತ್ತರ ಕನ್ನಡದ ಹಳ್ಳಿ, ಗಲ್ಲಿಗಳಲ್ಲಿ ಚಾಚಿದ್ದ ಕಾಂಗ್ರೆಸ್​ನ ಭದ್ರ ಬೇರುಗಳು ನಿಧಾನವಾಗಿ ಒಣಗುತ್ತಿರುವ ಮುನ್ಸೂಚನೆಯನ್ನು ಈ ಗ್ರಾಪಂ ಚುನಾವಣೆ ನೀಡಿದೆ. ಇದುವರೆಗೆ ಬಿಜೆಪಿ ಜಿಲ್ಲೆಯ ಎಂಪಿ, ಎಂಎಲ್​ಎ ಹಾಗೂ ನಗರ ಸ್ಥಳೀಯ ಸಂಸ್ಥೆಗಳನ್ನು ಗೆದ್ದು ಬೀಗಿತ್ತು. ಏನೇ ಆದರೂ ಜಿಲ್ಲೆಯ ಗ್ರಾಮೀಣ ಚುನಾವಣೆಗಳಲ್ಲಿ ಮಾತ್ರ ಕಾಂಗ್ರೆಸ್ ಹೀರೋ ಎನ್ನುವಂತಿತ್ತು. ಆದರೆ, ಈ ಬಾರಿ ಗ್ರಾಮಗಳಲ್ಲಿಯೂ ಕಮಲ ಕಮಾಲ್ ಮಾಡಿದೆ. ಜೆಡಿಎಸ್ ಬೆಂಬಲಿಗರ ಸಂಖ್ಯೆ ಅತಿ ಕೆಳಗಿಳಿದಿದೆ.

    ಶಿವರಾಮ ಹೆಬ್ಬಾರ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಸಚಿವರಾಗಿರುವುದು ಅವರ ಕ್ಷೇತ್ರದ ಫಲಿತಾಂಶದ ಮೇಲೆ ಭಾರಿ ಪ್ರಭಾವ ಬೀರಿದೆ. ಸಂಪೂರ್ಣ ಕಾಂಗ್ರೆಸ್​ವುಯವಾಗಿದ್ದ ಶಿರಸಿ ಪೂರ್ವ ಭಾಗದಲ್ಲೂ ಬಿಜೆಪಿಯ ಬಲ ಕಾಣಿಸಿಕೊಂಡಿದೆ. ಸಿದ್ದಾಪುರ ಭಾಗದಲ್ಲಿ ಬಿಜೆಪಿ ಬಣ ರಾಜಕೀಯದಿಂದ ಪಕ್ಷಕ್ಕೆ ಕೊಂಚ ಹೊಡೆತ ಉಂಟಾಗಿದೆ. ಕಾಂಗ್ರೆಸ್ ಕೋಟೆಯಂತಿದ್ದ ಹಳಿಯಾಳ, ಜೊಯಿಡಾ ಹಾಗೂ ದಾಂಡೇಲಿಯಲ್ಲೂ ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಇದುವರೆಗೆ ಕಮಲದ ಚಿತ್ರ ಕಾಣದ ಕಾರವಾರ, ಅಂಕೋಲಾದಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. ಕುಮಟಾ, ಹೊನ್ನಾವರ ಕ್ಷೇತ್ರಗಳೂ ಇದಕ್ಕೆ ಹೊರತಾಗಿಲ್ಲ. ಹಲ ವರ್ಷಗಳಿಂದ ಕಮ್ಯುನಿಷ್ಟ್ ಪಕ್ಷದ ಹಿಡಿತದಲ್ಲಿದ್ದ ಹೊನ್ನಾವರದ ಮಾವಿನಕುರ್ವಾದಲ್ಲಿ ಪಕ್ಷೇತರ ಯುವಕರ ಸಂಘಟನೆಯೊಂದು ಕಮಾಲ್ ಮಾಡಿದೆ.

    ತಡರಾತ್ರಿವರೆಗೂ ಎಣಿಕೆ: ಜಿಲ್ಲೆಯ 12 ತಾಲೂಕುಗಳ 227 ಗ್ರಾಪಂಗಳ 941 ಕ್ಷೇತ್ರಗಳ ಮತ ಎಣಿಕೆ ಬುಧವಾರ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಯಿತು. ಸಾಯಂಕಾಲ 5 ಗಂಟೆಯ ಹೊತ್ತಿಗೆ 667 ಕ್ಷೇತ್ರಗಳ ಎಣಿಕೆ ಮಾತ್ರ ಪೂರ್ಣವಾಗಿತ್ತು. 92 ಗ್ರಾಪಂಗಳ ಫಲಿತಾಂಶ ಮಾತ್ರ ಹೊರ ಬಿದ್ದಿತ್ತು. ತಡ ರಾತ್ರಿಯವರೆಗೂ ಎಣಿಕೆ ನಡೆಯಿತು. ಬೆಳಗ್ಗೆ ದೊಡ್ಡ ಸಂಖ್ಯೆಯಲ್ಲಿ ಬಂದು ಕಾದು ಕುಳಿತಿದ್ದ ಜನ ಸಂಜೆಯಾಗುತ್ತಿದ್ದಂತೆ ಕರಗತೊಡಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts