More

    ಪ್ರತಿ ತಾಲೂಕಿನಲ್ಲೂ ಲೋಕಾಯುಕ್ತ ಜನ ಸಂಪರ್ಕ ಸಭೆ

    ಎನ್.ಆರ್.ಪುರ: ಇನ್ನು ಮುಂದೆ ಪ್ರತಿ ತಾಲೂಕಿನಲ್ಲಿ ಪ್ರತಿ ತಿಂಗಳೂ ಚಿಕ್ಕಮಗಳೂರು ಲೋಕಾಯುಕ್ತ ಅಧಿಕಾರಿಗಳು ಜನ ಸಂಪರ್ಕ ಸಭೆ ಏರ್ಪಡಿಸಿ ಜನರ ಸಮಸ್ಯೆ ಆಲಿಸುತ್ತೇವೆ ಎಂದು ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್‌ಪಿ ಜೆ.ಜೆ.ತಿರುಮಲೇಶ್ ತಿಳಿಸಿದರು.

    ಬುಧವಾರ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಲೋಕಾಯುಕ್ತ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಲಂಚ ಕೇಳುವುದು, ಕೆಲಸ ಮಾಡಿಕೊಡದೆ ತೊಂದರೆ ನೀಡಿದರೆ ಲೋಕಾಯುಕ್ತರಿಗೆ ದೂರು ಸಲ್ಲಿಸಬಹುದು ಎಂದರು.
    ಸಾರ್ವಜನಿಕರು ಆರೋಪ ಮಾಡಿದರೆ ಪ್ರಯೋಜನವಿಲ್ಲ. ಲೋಕಾಯುಕ್ತಕ್ಕೆ ನಿಗದಿತ ಫಾರ್ಮ್‌ನಲ್ಲಿ ದೂರು ಸಲ್ಲಿಸಬೇಕು. ದೂರಿನ ಜತೆ ಸೂಕ್ತ ದಾಖಲೆಯೂ ನೀಡಬೇಕು. ದೂರುಗಳನ್ನು ಪರಿಶೀಲನೆ ಮಾಡಿ ಮುಂಬರುವ ತಿಂಗಳು ಬಂದಾಗ ಸೂಕ್ತ ಪರಿಹಾರ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
    ಲೋಕಾಯುಕ್ತ ಪಿಎಸ್‌ಐ ಎ.ಜಿ.ರಾಥೋಡ್ ಮಾತನಾಡಿ, ಸಾರ್ವಜನಿಕರು, ಅಧಿಕಾರಿಗಳನ್ನು ಸೇರಿಸಿಕೊಂಡು ಜನ ಸಂಪರ್ಕ ಸಭೆ ಮಾಡುತ್ತಿದ್ದೇವೆ. ಸಾರ್ವಜನಿಕರ ಅರ್ಜಿ ಪರಿಶೀಲನೆ ಮಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಜನರು ಜನ ಸಂಪರ್ಕ ಸಭೆಯಲ್ಲೂ ದೂರು ನೀಡಬಹುದು ಅಥವಾ ಜಿಲ್ಲಾ ಲೋಕಾಯುಕ್ತ ಕಚೇರಿಗೆ ಬಂದು ದೂರು ನೀಡಬಹುದು. ಆನ್ ಲೈನ್‌ನಲ್ಲೂ ದೂರು ನೀಡಲು ಅವಕಾಶವಿದೆ ಎಂದು ತಿಳಿಸಿದರು.
    ಲೋಕಾಯುಕ್ತ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದ ಜನ ಸಂಗ್ರಾಮ ಪರಿಷತ್ ಸದಸ್ಯ ವಾಸುದೇವ ಕೋಟ್ಯಾನ್, ವಾಲ್ಮೀಕಿ ನಾಯಕ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎ.ಸಿ.ಶ್ರೀನಿವಾಸ್, ಬಗರ್‌ಹುಕಂ ಸಮಿತಿ ಸದಸ್ಯ ಮಂಜುನಾಥ್, ಮುಖಂಡ ಎ.ಇ.ಚೆರಿಯನ್, ನಾಗಲಾಪುರದ ಸುಧಾಕರ್, ಡಿಎಸ್‌ಎಸ್ ಮುಖಂಡ ಡಿ.ರಾಮು, ಗ್ರಾಪಂ ಮಾಜಿ ಸದಸ್ಯ ಎಂ.ಮಹೇಶ್ ಇತರರು ವಿವಿಧ ಸಮಸ್ಯೆಗಳ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದರು. ಲೋಕಾಯುಕ್ತರಿಗೆ ಬಂದ ಬಹುತೇಕ ಅರ್ಜಿಗಳಲ್ಲಿ ತಾಲೂಕು ಕಚೇರಿಯಲ್ಲಿ ನಮ್ಮ ಕಡತ ಕಳವಾಗಿದೆ ಎಂದು ದೂರಿದ್ದಾರೆ. ಕರ್ನಾಟಕ ಪಬ್ಲಿಕ್ ಸ್ಕೂಲಿಗೆ ಭೂ ದಾನದಿಂದ ಬಂದಿದ್ದ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ಬಿಡಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ತಾಲೂಕಿನ ಸಾವಿರಾರು ಎಕರೆ ಕಂದಾಯ ಭೂಮಿಯು 1930ರಂತೆ ಅರಣ್ಯ ಎಂದು ದಾಖಲಾಗಿದೆ. ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ. ನಾಗಲಾಪುರ ಗ್ರಾಮದಲ್ಲಿ ರುದ್ರಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರುಗಳಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts