More

    ಲಾಕ್‌ಡೌನ್‌ನಲ್ಲಿ ಆರೋಗ್ಯಕ್ಕೆ ಯೋಗಸೂತ್ರ: 5000 ಮಂದಿಗೆ ಆನ್‌ಲೈನ್ ತರಬೇತಿ ನೀಡಿದ ದೇಲಂಪಾಡಿ

    ಮಂಗಳೂರು: ಜಿಲ್ಲೆಯಲ್ಲಿ ಉಚಿತ ಯೋಗ ತರಬೇತಿ ಮೂಲಕವೇ ಜನಪ್ರಿಯರಾಗಿರುವ ಹಿರಿಯ ಯೋಗ ತರಬೇತುದಾರ ಯೋಗರತ್ನ ದೇಲಂಪಾಡಿ ಕೋವಿಡ್‌ನ ಎರಡೂ ಅಲೆಯ ಮಧ್ಯೆ ಯಶಸ್ವಿಯಾಗಿ ಯೋಗ ಕಲೆಯ ಪ್ರಸರಣ ಮಾಡುತ್ತಿದ್ದಾರೆ.

    ಮನೆಯಲ್ಲೇ ಇದ್ದುಕೊಂಡು ಯೋಗ ಕಲಿಕೆ ಮೂಲಕ ಉತ್ತಮ ಆರೋಗ್ಯ ಕಾಯ್ದುಕೊಳ್ಳುವುದು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಲಾಕ್‌ಡೌನ್ ವೇಳೆ ಜನರ ಆರೋಗ್ಯ ಕಾಪಾಡಿಕೊಳ್ಳುವುದು, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಯೋಗ ಅನುಕೂಲಕರ. ಹಾಗಾಗಿ ಇದೊಂದು ಸಾಮಾಜಿಕ ಕಳಕಳಿಯ ಭಾಗವಾಗಿ ದೇಲಂಪಾಡಿಯವರು ಉಚಿತ ತರಬೇತಿ ನೀಡುತ್ತಿದ್ದಾರೆ.

    ದೇಲಂಪಾಡಿಯವರು ತಮ್ಮ ಮನೆಯಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಕಡೆ ತೆರಳಿ ಯೋಗ ತರಬೇತಿ ನೀಡುತ್ತಿದ್ದರು. ಕಳೆದ ವರ್ಷ ಮಾರ್ಚ್‌ನಲ್ಲಿ ಬಿದ್ದ ಲಾಕ್‌ಡೌನ್ ಅದಕ್ಕೆ ಬ್ರೇಕ್ ಹಾಕಿತು. ಆಗ ಅವರಿಗೆ ಪರ್ಯಾಯವಾಗಿ ಗೋಚರಿಸಿದ್ದು ಆನ್‌ಲೈನ್ ಯೋಗ. ಈಗ ತಮ್ಮ ಮನೆಯಲ್ಲೇ ಕುಳಿತು ಲ್ಯಾಪ್‌ಟಾಪ್, ಟ್ಯಾಬ್ ಹಾಗೂ ಮೊಬೈಲ್ ಬಳಸಿ ಹೈಸ್ಪೀಡ್ ಇಂಟರ್‌ನೆಟ್ ಹಾಕಿಸಿಕೊಂಡು ಪರಿಣಾಮಕಾರಿಯಾಗಿ ಯೋಗ ತರಬೇತಿ ನೀಡುವುದು ಸಾಧ್ಯವಾಗಿದೆ.

    ಮೊದಲು ಕನ್ಸಲ್ಟೆನ್ಸಿ: ಯಾರನ್ನಾದರೂ ಯೋಗ ತರಬೇತಿಗೆ ಸೇರಿಸಿಕೊಳ್ಳುವ ಮೊದಲು ಅವರ ಜತೆ ಫೋನ್ ಅಥವಾ ವಿಡಿಯೋ ಕಾಲ್ ಮೂಲಕ ಸಮಾಲೋಚಿಸಿ ಅವರ ದೇಹಚರ್ಯೆ, ಆರೋಗ್ಯ ಇತ್ಯಾದಿ ಬಗ್ಗೆ ತಿಳಿದುಕೊಳ್ಳುತ್ತೇನೆ. ಏಕಾಏಕಿ ಯೋಗ ಹೇಳಿಕೊಡುವುದಿಲ್ಲ ಎನ್ನುತ್ತಾರೆ ದೇಲಂಪಾಡಿಯವರು. ಮನೆಯಲ್ಲೇ ಕುಳಿತು ಅನೇಕರಿಗೆ ಡಿಪ್ರೆಶನ್ ಕಾಡುತ್ತದೆ. ಶರೀರಕ್ಕೆ ಚಟುವಟಿಕೆಯಿಲ್ಲದೆ ಜಡ್ಡು ಹಿಡಿದಿರುತ್ತದೆ. ಅಂಥವರಿಗೆ ಯೋಗಾಸನ ಬಹಳ ಒಳ್ಳೆಯದು. ದೇಹ, ಕೀಲುಗಳು, ಸ್ನಾಯುಗಳನ್ನು ಸಡಿಲಗೊಳಿಸಿ ಉಲ್ಲಾಸ ಮೂಡಿಸುತ್ತದೆ. ಯೋಗದ ಜತೆಯಲ್ಲೇ ಪ್ರಾಣಾಯಾಮಗಳು, ಬೀಜ ಮಂತ್ರ ಸಹಿತ, ಇಷ್ಟದೇವತಾ ಪ್ರಾರ್ಥನೆಯೊಂದಿಗೆ ಮುದ್ರೆ, ಕಲರ್ ಥೆರಪಿಯನ್ನೂ ಹೇಳಿಕೊಡುತ್ತೇನೆ ಎನ್ನುತ್ತಾರೆ.

    ದಿನಕ್ಕೆ ಮೂರು ಸೆಷನ್: ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಎರಡು ಹಾಗೂ ಮಧ್ಯಾಹ್ನ ನಂತರ 1 ಹೀಗೆ ದಿನಕ್ಕೆ ಮೂರು ಸೆಷನ್‌ಗಳಲ್ಲಿ ಆನ್‌ಲೈನ್ ಯೋಗ ತರಗತಿ ನಡೆಯುತ್ತದೆ. ಸರಾಸರಿ ಮೂರು ಸೆಷನ್‌ನಲ್ಲಿ 120ರಷ್ಟು ಅಭ್ಯಾಸಿಗಳು ಇರುತ್ತಾರೆ. 2020ರ ಮಾರ್ಚ್‌ನಿಂದ ಈವರೆಗೆ ಸುಮಾರು 5 ಸಾವಿರ ಮಂದಿಗೆ ತರಬೇತಿ ನೀಡಲಾಗಿದೆ. ಹಿರಿಯ ನಾಗರಿಕರಂತೂ ಆನ್‌ಲೈನ್ ತರಗತಿಯಿಂದ ತುಂಬ ಹಗುರಗೊಂಡಿದ್ದಾರೆ, ಓಡಾಡುವ ಕೆಲಸವಿಲ್ಲ, ಮನೆಯಲ್ಲೇ ಇದ್ದು ಯೋಗ ಕಲಿಯುವುದು ಅವರಿಗೆ ಹಾಯೆನಿಸಿದೆ. ವಿದ್ಯಾರ್ಥಿಗಳಿಗೂ ಒಂದಷ್ಟು ಚಟುವಟಿಕೆ ಕೊಡುವುದಕ್ಕೆಂದು ಅನೇಕ ಕಾಲೇಜುಗಳೂ ಈಗ ಆನ್‌ಲೈನ್ ಶಿಬಿರ ಆಯೋಜಿಸಲು ದೇಲಂಪಾಡಿಯವರಿಗೆ ವಿನಂತಿ ಮಾಡಿದ್ದು, ಅದನ್ನೂ ಅವರು ನಡೆಸಿಕೊಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts