More

  ಹೋಮ್ ಸ್ಟೇ, ರೆಸಾರ್ಟ್ ವಹಿವಾಟು ಚೇತರಿಕೆ

  ಚಿಕ್ಕಮಗಳೂರು: ಲಾಕ್​ಡೌನ್​ನಿಂದ ಸ್ಥಗಿತಗೊಂಡಿದ್ದ ಹೋಮ್ ಸ್ಟೇ, ರೆಸಾರ್ಟ್​ಗಳು ಈಗ ಚೇತರಿಕೆಯಲ್ಲಿವೆ. ಪ್ರವಾಸೋದ್ಯಮಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದರಿಂದ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿರುವುದು ಹೆಚ್ಚುತ್ತಿದೆ. ಹೀಗಾಗಿ ಕಾಫಿ ನಾಡಿನ ವಹಿವಾಟಿಗೆ ಬೂಸ್ಟ್ ನೀಡಿದಂತಾಗಿದೆ.

  ಲಾಕ್​ಡೌನ್ ಸಡಿಲಗೊಳಿಸಿದಂತೆಲ್ಲ ಒಂದೊಂದೇ ವಹಿವಾಟು ಆರಂಭವಾಗಿ ವ್ಯಾಪಾರಸ್ಥರು ಕೊಂಚ ನಿರಾಳರಾದರು. ಇದೇ ರೀತಿ ಸದ್ಯ ಕಾಫಿನಾಡಿನ ಹೋಮ್ ಸ್ಟೇ, ರೆಸಾರ್ಟ್​ಗಳು ಚೇತರಿಸಿಕೊಳ್ಳುತ್ತಿವೆ.

  ಗಾಂಧಿ ಜಯಂತಿ ದಿನದಿಂದ ಮೂರು ದಿನ ರಜೆ ಇದ್ದುದರಿಂದ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸಿದ್ದರಿಂದ ಜಿಲ್ಲೆಯಲ್ಲಿರುವ 500ಕ್ಕೂ ಹೆಚ್ಚು ಹೋಮ್ ಸ್ಟೇಗಳಲ್ಲಿ ಶೇ.90 ರಷ್ಟು ಭರ್ತಿಯಾಗಿದ್ದವು. ಮೂರು ತಿಂಗಳಿಂದ ಆರ್ಥಿಕವಾಗಿ ಉಸಿರುಗಟ್ಟಿದ್ದ ಮಾಲೀಕರು ನೆಮ್ಮದಿ ನಿಟ್ಟುಸಿರು ಬಿಡುತ್ತಿದ್ದಾರೆ. ಜಿಲ್ಲೆಯಲ್ಲಿರುವ 15ಕ್ಕೂ ಹೆಚ್ಚು ರೆಸಾರ್ಟ್​ಗಳಲ್ಲಿ ತಾಲೂಕಿನಲ್ಲೇ 10 ಇದ್ದು ಬಹಳಷ್ಟು ಭರ್ತಿಯಾಗಿವೆ. ನಗರದ ಬಹುತೇಕ ಲಾಡ್ಜ್​ಗಳು ತುಂಬಿದ್ದವು.

  ಮೂರು ದಿನದಲ್ಲಿ 5 ಸಾವಿರಕ್ಕೂ ಹೆಚ್ಚು ವಾಹನಗಳು ಗಿರಿ ಪ್ರದೇಶಕ್ಕೆ ಬಂದಿದ್ದು ನೂರಾರು ಪ್ರವಾಸಿ ಕುಟುಂಬಗಳಿಗೆ ತಂಗಲು ಹೋಮ್ ಸ್ಟೇ, ರೆಸಾರ್ಟ್​ಗಳು ಸಿಗದೆ ಶುಕ್ರವಾರ ಹಾಗೂ ಶನಿವಾರ ರಾತ್ರಿ ನೂರಾರು ಪ್ರವಾಸಿಗರು ವಾಹನದಲ್ಲೇ ನಿದ್ರೆ ಮಾಡಿ ಗಿರಿಶ್ರೇಣಿಯ ಬೆಟ್ಟಗುಡ್ಡಗಳಲ್ಲಿ ಕುಳಿತು ಆಹಾರ ಸೇವಿಸಿದರೆ, ಮತ್ತೆ ಕೆಲವರು ರಸ್ತೆಯಲ್ಲಿ ಕುಳಿತು ಊಟಸೇವಿಸಿ ಹಿಂತಿರುಗಿದ್ದಾರೆ.

  ಲಾಕ್​ಡೌನ್ ನಂತರ ಮೊದಲ ಬಾರಿ ಭರ್ತಿ: ಒಂದು ದಿನ ವಸತಿ, ಊಟೋಪಚಾರ ಸೇರಿ ಹೋಮ್ ಸ್ಟೇಗಳಲ್ಲಿ ಓರ್ವನಿಗೆ 1500 ರೂ.ನಿಂದ 2 ಸಾವಿರ ರೂ. ಪಡೆಯುತ್ತಾರೆ. ಪ್ರತಿ ಹೋಮ್ ಸ್ಟೇನಲ್ಲಿ 10 ರಿಂದ 25 ಮಂದಿ ತಂಗಲು ಅವಕಾಶವಿದೆ. ರೆಸಾರ್ಟ್​ಗಳಲ್ಲಿ 25 ರಿಂದ 50 ಮಂದಿಗೆ ಸ್ಥಳಾವಕಾಶವಿದ್ದು ತಲಾ 4 ರಿಂದ 5 ಸಾವಿರ ರೂ. ಪಡೆಯುತ್ತಾರೆ. ಇದರಲ್ಲಿ ಆರ್ಥಿಕವಾಗಿ ಸಬಲರಾಗಿರುವ ನೂರಾರು ಜನ ತಂಗುತ್ತಾರೆ. ನಗರದಲ್ಲಿ 40ಕ್ಕೂ ಹೆಚ್ಚು ಲಾಡ್ಜ್​ಗಳಿದ್ದು, ಹೋಮ್ ಸ್ಟೇ, ರೆಸಾರ್ಟ್ ಸೇರಿ ಕಳೆದ ಮೂರು ದಿನಗಳಿಂದ ಶೇ.80 ರಷ್ಟು ಭರ್ತಿಯಾಗಿದ್ದವು. ಲಾಕ್​ಡೌನ್ ನಂತರ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ವಹಿವಾಟು ನಡೆದಿದೆ.

  ಸಣ್ಣ ಕಾಫಿ ಬೆಳೆಗಾರರಿಗೆ ಆಸರೆ: ಕಾಫಿ ಬೆಳೆಯುವ ಪ್ರದೇಶಗಳಾದ ಚಿಕ್ಕಮಗಳೂರು, ಕೊಡಗು, ಹಾಸನದ ಸಕಲೇಶಪುರಗಳಲ್ಲಿ ಅತಿವೃಷ್ಟಿಯಿಂದ ಬೆಳೆಹಾನಿ, ಕಾಫಿ ಧಾರಣೆ ಕುಸಿತದ ಪರಿಣಾಮ ಹಲವು ಸಣ್ಣ ಬೆಳೆಗಾರರಿಗೆ ಪರ್ಯಾಯ ಮಾರ್ಗ ತೋಚದೆ ಸಾಲ ಮಾಡಿ ಹೋಮ್ ಸ್ಟೇಗಳನ್ನು ನಡೆಸುತ್ತಿದ್ದಾರೆ. 5 ಎಕರೆಯಿಂದ 20 ಎಕರೆ ಕಾಫಿತೋಟ ಹೊಂದಿರುವ ಶೇ.75 ರಷ್ಟು ಬೆಳೆಗಾರರು ಎರಡು ಎಕರೆಯಲ್ಲಿ ಗಿಡಗಳನ್ನು ತೆರವು ಮಾಡಿ 15 ರಿಂದ 20 ಲಕ್ಷ ರೂ. ಬಂಡವಾಳ ತೊಡಗಿಸಿ ನಾಲ್ಕಾರು ರೂಮ್ಳ ಹೋಮ್ ಸ್ಟೇ ನಿರ್ವಿುಸಿಕೊಂಡಿದ್ದಾರೆ. ಇವರಿಗೆ ಹೋಮ್ ಸ್ಟೇ ಆಧಾರವಾಗಿದೆ.

  2005ರಲ್ಲಿ ಬೆರೆಳೆಣಿಕೆಯಷ್ಟಿದ್ದ ಹೋಮ್ ಸ್ಟೇ: 2005ರಲ್ಲಿ ಬೆರಳೆಣಿಕೆಯಷ್ಟಿದ್ದ ಹೋಮ್ ಸ್ಟೇ 2015ರಲ್ಲಿ ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ 1500ಕ್ಕೂ ಹೆಚ್ಚು ತಲೆ ಎತ್ತಿವೆ. ಇದರಲ್ಲಿ ಶೇ.60ರಷ್ಟು ಪರವಾನಗಿ ಹೊಂದಿವೆ. ಜಿಲ್ಲೆಯಲ್ಲಿರುವ 500 ಹೋಮ್ ಸ್ಟೇಗಳಲ್ಲಿ 200 ರಷ್ಟು ಪರವಾನಗಿ ಹೊಂದಿ ಶೇ.75ರಷ್ಟು ಕಾಫಿ ಬೆಳೆಗಾರರು ಇದನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts