More

    ಸಹಜ ಸ್ಥಿತಿಯತ್ತ ಜನಜೀವನ

    ಮಂಗಳೂರು/ಉಡುಪಿ: ಲಾಕ್‌ಡೌನ್ ನಿಯಮಾವಳಿಯಲ್ಲಿ ಸಡಿಲಿಕೆಯಾದ ಹಿನ್ನೆಲೆಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸುಮಾರು 40 ದಿನಗಳ ಬಳಿಕ ಜನಜೀವನ ಸಹಜ ಸ್ಥಿತಿಯತ್ತ ಮರಳಲು ಆರಂಭಿಸಿದೆ. ವ್ಯಾಪಾರ ವಹಿವಾಟು, ಖಾಸಗಿ ವಾಹನಗಳ ಸಂಚಾರ ಮತ್ತೆ ಆರಂಭವಾಗಿದ್ದು, ಮೊದಲ ದಿನವಾದ ಸೋಮವಾರ ಹೆಚ್ಚಿನ ಎಲ್ಲ ಚಟುವಟಿಕೆಗಳು ಸರಾಗವಾಗಿ ನಡೆದವು.

    ದ.ಕ. ಜಿಲ್ಲೆಯಲ್ಲಿ ಬೆಳಗ್ಗೆ 7ರಿಂದ ಸಂಜೆ 7ರವರೆಗೆ, ಉಡುಪಿ ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ವ್ಯಾಪಾರ ವಹಿವಾಟು ಮತ್ತು ಸಾರ್ವಜನಿಕರ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಹೋಟೆಲ್‌ಗಳು, ಬಟ್ಟೆ ಅಂಗಡಿಗಳು, ಸಲೂನ್, ಬ್ಯೂಟಿ ಪಾರ್ಲರ್‌ಗಳು, ಬಾರ್ ರೆಸ್ಟೋರೆಂಟ್ ಮತ್ತಿತರ ನಿರ್ಬಂಧ ಇರುವುದು ಹೊರತು ಪಡಿಸಿ ಉಳಿದ ಅಂಗಡಿಗಳು ತೆರೆದು ಕಾರ್ಯಾಚರಿಸಿದವು.

    ದಿನಸಿ, ತರಕಾರಿ, ಹಣ್ಣು ಹಂಪಲು ಅಂಗಡಿಗಳ ಜತೆಗೆ, ಮೊಬೈಲ್ ಶೋರೂಂ, ಇಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟ ಮಳಿಗೆ, ವಾಹನಗಳ ಶೋರೂಂ, ಬಿಡಿಭಾಗಗಳ ಮಾರಾಟ ಮಳಿಗೆ, ಗ್ಯಾರೇಜ್‌ಗಳು, ಸ್ಟೇಷನರಿ ಅಂಗಡಿಗಳು, ಸೋಡಾ ಶಾಪ್-ಜ್ಯೂಸ್ ಸೆಂಟರ್‌ಗಳ ಸಹಿತ ಬಹುತೇಕ ಅಂಗಡಿ ಮುಂಗಟ್ಟು ತೆರೆದಿದ್ದವು. ಮಳಿಗೆಗಳಲ್ಲಿ ಕನಿಷ್ಠ ಸಿಬ್ಬಂದಿ ಇದ್ದು, ಗ್ರಾಹಕರ ಸಂಖ್ಯೆಯೂ ಕಡಿಮೆ ಇತ್ತು. ಹೋಟೆಲ್‌ಗಳಲ್ಲಿ ಈ ಹಿಂದಿನಂತೆ ಪಾರ್ಸೆಲ್‌ಗೆ ಮಾತ್ರ ಅವಕಾಶವಿತ್ತು.

    ಬೆಳ್ತಂಗಡಿ ವಾರದ ಸಂತೆ ಸೋಮವಾರ ಎಪಿಎಂಸಿ ಪ್ರಾಂಗಣದಲ್ಲೇ ಮುಂದುವರಿಯಿತು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿದರು.
    ಮಂಗಳೂರು ನಗರ ವ್ಯಾಪ್ತಿಯ ಕೆಲವು ಐಟಿ ಕಂಪನಿಗಳು ಕಡಿಮೆ ಸಿಬ್ಬಂದಿಯೊಂದಿಗೆ ರೊಟೇಶನ್ ಪದ್ಧತಿಯಲ್ಲಿ ಹಗಲು ಶಿಫ್ಟ್‌ನಲ್ಲಿ ಕೆಲಸ ಆರಂಭಿಸಿವೆ. ಕೈಗಾರಿಕಾ ವಲಯದಲ್ಲೂ ಮೊದಲ ದಿನ ಹಲವು ಕಂಪನಿಗಳು ಮತ್ತೆ ಆರಂಭವಾಗಿದ್ದು, ಉತ್ಪಾದನಾ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದೆ. ಮೊಬೈಲ್ ಸರ್ವೀಸ್ ಸೆಂಟರ್‌ಗಳಲ್ಲಿ ರಿಪೇರಿ ಮಾಡಿಸಲು ಬಂದವರ ಸಂಖ್ಯೆ ಹೆಚ್ಚಿತ್ತು. ಗ್ಯಾರೇಜ್, ವಾಹನ ಸರ್ವೀಸ್ ಸೆಂಟರ್‌ಗಳಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಸೈಬರ್ ಸೆಂಟರ್‌ಗಳಲ್ಲಿ ಅಂತರ್ ರಾಜ್ಯ/ಜಿಲ್ಲೆಯ ಕಾರ್ಮಿಕರು ತಮ್ಮ ನೋಂದಣಿ ಮಾಡಿಸಲು ಸೇರಿದ್ದರು.

    ಸರ್ಕಾರಿ ಕಚೇರಿಗಳತ್ತ ಜನ: ಕರೊನಾ ಭೀತಿ ತಗ್ಗದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಸೇವೆ ತಕ್ಷಣಕ್ಕೆ ಆರಂಭಿವುದಿಲ್ಲ ಎಂದು ದ.ಕ. ಜಿಲ್ಲಾಡಳಿತ ಭಾನುವಾರವೇ ತಿಳಿಸಿದೆ. ಆದರೂ ಹಲವರು ಕೆಲಸಕಾರ್ಯಗಳಿಗಾಗಿ ಡಿಸಿ ಕಚೇರಿ, ಮಿನಿ ವಿಧಾನಸೌಧ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ವಾಪಸಾಗಿದ್ದಾರೆ. ಕಚೇರಿಗಳಲ್ಲಿ ಸೋಮವಾರ ಹೆಚ್ಚಿನ ಸಿಬ್ಬಂದಿ ಹಾಜರಾಗಿದ್ದಾರೆ. ಮುಂದಿನ ದಿನಗಳಲ್ಲಿ ಬೆಳವಣಿಗೆಗಳನ್ನು ಗಮನಿಸಿ ಸರ್ಕಾರಿ ಸೇವೆಗಳನ್ನು ಒಂದೊಂದಾಗಿ ಆರಂಭಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಉಡುಪಿಯ ಬನ್ನಂಜೆಯಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿ ಹೊರ ಜಿಲ್ಲೆ/ರಾಜ್ಯ ಪ್ರಯಾಣದ ಪಾಸ್‌ಗಾಗಿ ಮುಗಿಬಿದ್ದಿದ್ದರು.

    ಟ್ರಾಫಿಕ್ ಜಾಮ್: ಮಂಗಳೂರು, ಉಡುಪಿ, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಸಹಿತ ಪ್ರಮುಖ ನಗರ/ಪಟ್ಟಣಗಳಲ್ಲಿ ಮೊದಲ ದಿನವೇ ಟ್ರಾಫಿಕ್ ಜಾಮ್ ಉಂಟಾಯಿತು. ಬಸ್ ಸಂಚಾರ ಇಲ್ಲದ ಕಾರಣ, ಹೆಚ್ಚಿನವರು ತಮ್ಮ ಸ್ವಂತ ವಾಹನಗಳನ್ನು ಅವಲಂಬಿಸಿದ್ದರು. ಕೆಲವೆಡೆ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರೂ ಹರಸಾಹಸಪಟ್ಟರು. ಹೆದ್ದಾರಿಗಳಲ್ಲೂ ಲಾರಿ, ಟ್ರಕ್, ಟ್ಯಾಂಕರ್ ಸೇರಿದಂತೆ ಘನ ವಾಹನ ಸಂಚಾರ ಹೆಚ್ಚಾಗಿತ್ತು. ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಬಂಟ್ವಾಳ – ಪುಂಜಾಲಕಟ್ಟೆ ಸಂಪರ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಇತ್ತು. ಬಂಟ್ವಾಳ ಪೇಟೆ ಸೀಲ್‌ಡೌನ್ ಆಗಿರುವುದರಿಂದ ಎಲ್ಲ ವಾಹನಗಳು ಬೈಪಾಸ್ ರಸ್ತೆಯ ಮೂಲಕವೇ ಸಾಗುತ್ತಿದ್ದು, ಕಚ್ಚಾರಸ್ತೆಯಂತಾಗಿರುವ ರಸ್ತೆಯಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿತ್ತು.

    ಬೇಕಾಬಿಟ್ಟಿ ವಾಹನ ಸಂಚಾರ:  ಸ್ಟಾೃಂಡ್‌ಗಳಲ್ಲಿ ಆಟೋಗಳ ಸಂಖ್ಯೆ ಕಡಿಮೆ ಇತ್ತು. ದ್ವಿಚಕ್ರ ವಾಹನ, ಆಟೋ, ಕಾರುಗಳಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದು ಕಂಡುಬಂತು. ಉಡುಪಿ ಕಲ್ಸಂಕದಲ್ಲಿ ಹೆಚ್ಚು ಪ್ರಯಾಣಿಕರು ಇರುವ ರಿಕ್ಷಾ ತಡೆದ ಪೊಲೀಸರು ದಂಡ ವಿಧಿಸಿದರು. ಬಸ್ ಸಂಚಾರವಿಲ್ಲದ ಕಾರಣ, ಜಿಲ್ಲೆಯ ಗ್ರಾಮಾಂತರ ಭಾಗಗಳಿಂದ ನಗರ ಪ್ರದೇಶಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ.

    ಸಾಮಾಜಿಕ ಅಂತರ ದೂರ: ಲಾಕ್‌ಡೌನ್ ಸಡಿಲಗೊಳಿಸಿದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಜಿಲ್ಲಾಡಳಿತಗಳ ಮನವಿ ಹೆಚ್ಚಿನವರಿಗೆ ಮನವರಿಕೆಯಾದಂತಿಲ್ಲ. ಕೆಲವು ಕಡೆ ಮಾತ್ರ ಅಂತರ ಕಾಯ್ದುಕೊಂಡಿರುವುದು ಕಂಡುಬಂತು. ಇನ್ನು ಮಾಸ್ಕ್ ಧರಿಸದೆ ಹೊರಗಡೆ ಬಂದವರ ಸಂಖ್ಯೆಯೂ ಹೆಚ್ಚು ಇತ್ತು.

    ಕಂಟೇನ್ಮೆಂಟ್ ಜೋನ್ ಯಥಾಸ್ಥಿತಿ: ಕರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಹಲವು ಪ್ರದೇಶಗಳನ್ನು ಕಂಟೋನ್ಮೆಂಟ್ ಜೋನ್ ಎಂದು ಗುರುತಿಸಿ ಸೀಲ್‌ಡೌನ್ ಮಾಡಲಾಗಿದ್ದು, ಆ ಪ್ರದೇಶಗಳಿಗೆ ಸಡಿಲಿಕೆ ನಿಯಮಾವಳಿಗಳು ಅನ್ವಯವಾಗದ ಕಾರಣ ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದವು, ವಾಹನ ಸಂಚಾರ ಇರಲಿಲ್ಲ.

    ಪೊಲೀಸ್ ಬಂದೋಬಸ್ತ್: ಲಾಕ್‌ಡೌನ್ ನಿಯಮಾವಳಿಯಲ್ಲಿ ಸಡಿಲಿಕೆಯಾದರೂ, ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ. ಹಿಂದಿನಂತೆ ಎಲ್ಲೂ ಪಾಸ್ ಪರಿಶೀಲನೆ ನಡೆಸುತ್ತಿರಲಿಲ್ಲ. ಆದರೆ ಟ್ರಾಫಿಕ್ ಕ್ಲೀಯರ್ ಮಾಡುವತ್ತ ಗಮನ ಹರಿಸುತ್ತಿದ್ದರು. ಹಿಂದೆ ನಗರ ಪ್ರದೇಶಗಳಲ್ಲಿ ಮುಚ್ಚಿದ್ದ ರಸ್ತೆಗಳಲ್ಲಿ ಹೆಚ್ಚಿನವುಗಳನ್ನು ತೆರೆದು ವಾಹನ ಸಂಚಾರಕ್ಕೆ ಮುಕ್ತವಾಗಿಸಲಾಗಿದೆ. ಸಾಯಂಕಾಲ 7ರ ಬಳಿಕ ಮತ್ತೆ ಬ್ಯಾರಿಕೇಡ್ ಅಳವಡಿಸಲಾಯಿತು.

    ಕಾಸರಗೋಡು ಪ್ರವೇಶಕ್ಕೆ ನೋಂದಣಿ ಕಡ್ಡಾಯ:  ಕಾಸರಗೋಡು ಜಿಲ್ಲೆ ಪ್ರವೇಶಿಸಲು ಬಯಸುವವರು ಡಿಡಿಡಿ.್ಟಛಿಜಜಿಠಿಛ್ಟ್ಞಿಟ್ಟಚ್ಟಟಟಠಿ.ಟ್ಟಜ, ್ಚಟಜಿ19್ಜಜ್ಟಠಿ.ಛ್ಟಿಚ್ಝ.್ಞಜ್ಚಿ.ಜ್ಞಿ ಪೋರ್ಟಲ್‌ಗಳಲ್ಲಿ ನೋಂದಣಿ ನಡೆಸಬೇಕು. ಹೆಲ್ಪ್‌ಡೆಸ್ಕ್ ಗಳಲ್ಲಿ ಸ್ಪಾಟ್ ರಿಜಿಸ್ಟ್ರೇಷನ್ ವ್ಯವಸ್ಥೆ ಮಾಡಿದ್ದರೂ, ಈಗಾಗಲೇ ನೋಂದಣಿಯಾಗದವರಿಗೆ ಆದ್ಯತೆ ನೀಡಲಾಗುವುದು. ನಂತರ ಉಳಿದವರನ್ನು ಪರಿಶೀಲಿಸಲಾಗುತ್ತದೆ. ಅನುಮತಿ ಸಿಗದವರು ತಲಪಾಡಿ ಚೆಕ್‌ಪೋಸ್ಟ್‌ಗೆ ಬರದಿರುವುದು ಉತ್ತಮ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.

    ಹೆಜಮಾಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ
    ಪಡುಬಿದ್ರಿ: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸುವ ಗಡಿ ಹೆಜಮಾಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಆರಂಭಿಸಲಾಗಿದ್ದು, ಉಡುಪಿ ಜಿಲ್ಲೆ ಪ್ರವೇಶಿಸಿದ ಅನ್ಯ ಜಿಲ್ಲೆಗಳ ಸುಮಾರು 220 ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿದ ಐದು ಜನರಿಗೆ ಮೊಹರು ಹಾಕಿ ಸೋಮವಾರ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಲಾಕ್‌ಡೌನ್ ವಿನಾಯಿತಿಯಿಂದ ಎರಡೂ ಜಿಲ್ಲೆ ಪ್ರವೇಶಿಸುವ ತಪಾಸಣಾ ಕೇಂದ್ರಗಳಲ್ಲಿ ಜನ ನಿಬಿಡತೆ ಹೆಚ್ಚಿತ್ತು. ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆಯೂ ಉಂಟಾಯಿತು. ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸುವ ತಪಾಸಣಾ ಕೇಂದ್ರದಲ್ಲಿ ಅನ್ಯ ಜಿಲ್ಲೆಗಳಿಂದ ಮಂಗಳೂರಿಗೆ ಆಗಮಿಸಿದ ಜನರನ್ನು ಕ್ವಾರಂಟೈನ್‌ಗೆ ಒಳಪಡಿಸುವ ಪ್ರಕ್ರಿಯೆ ಸೋಮವಾರ ಆರಂಭಿಸಲಾಗಿದೆ. ಜಿಲ್ಲಾಡಳಿತ ಸೂಚನೆಯಂತೆ ಜಿಲ್ಲೆಗೆ ಪ್ರವೇಶಿಸುವ ವಾಹನ ಹಾಗೂ ಜನರ ವಿವರಗಳನ್ನು ಸಂಗ್ರಹಿಸುವ ಕಾರ್ಯ ಕಂದಾಯ ಇಲಾಖೆ ಸಿಬ್ಬಂದಿ ಕೈಗೊಂಡಿದ್ದಾರೆ.

    ವೈದ್ಯಕೀಯ ತಪಾಸಣೆಗೆ ಸಂಕಷ್ಟ: ವೈದ್ಯಕೀಯ ತಪಾಸಣೆಗಾಗಿ ವಾಹನಗಳಲ್ಲಿ ಎಷ್ಟು ಜನ ಸಂಚರಿಸಬೇಕು? ಯಾವ ರೀತಿ ಪರವಾನಗಿ ಪಡೆಯಬೇಕು ಎಂಬ ಬಗ್ಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸೂಕ್ತ ಆದೇಶವಿಲ್ಲದೆ ಅನಾರೋಗ್ಯ ಪೀಡಿತರು ಗಡಿಯಲ್ಲಿನ ತಪಾಸಣಾ ಕೇಂದ್ರಗಳಲ್ಲಿ ಸಂಕಷ್ಟಕ್ಕೊಳಗಾದರು. ತಪಾಸಣೆ ಕೇಂದ್ರದ ಸಿಬ್ಬಂದಿಗೆ ಈ ಬಗ್ಗೆ ಸ್ಪಷ್ಟ ನಿರ್ದೇಶನವಿಲ್ಲದೆ ಆಸ್ಪತ್ರೆಗೆ ತೆರಳಲಾಗದೆ ಕೆಲವರು ಹಿಂದಕ್ಕೆ ಹೋಗಬೇಕಾದ ಪರಿಸ್ಥಿತಿಯೂ ಉಂಟಾಯಿತು. ಎರಡೂ ಜಿಲ್ಲಾಡಳಿತ ತುರ್ತಾಗಿ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು ಎಂದು ತಪಾಸಣಾ ಕೇಂದ್ರದ ಸಿಬ್ಬಂದಿ ತಿಳಿಸಿದರು.

    ಚಾರ್ಮಾಡಿ ಚೆಕ್‌ಪೋಸ್ಟ್ ಕಟ್ಟುನಿಟ್ಟಿನ ತಪಾಸಣೆ
    ಬೆಳ್ತಂಗಡಿ: ಚಿಕ್ಕಮಗಳೂರು ಹಾಗೂ ಇನ್ನಿತರ ಜಿಲ್ಲೆಗಳಿಂದ ದ.ಕ ಜಿಲ್ಲೆಗೆ ಪ್ರವೇಶಿಸಲು ಇರುವ ಚಾರ್ಮಾಡಿ ಚೆಕ್‌ಪೋಸ್ಟ್‌ನಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ದಿನದ 24 ಗಂಟೆ ಬಿಗು ತಪಾಸಣೆ ನಡೆಸುತ್ತಿದೆ.
    ಮೂರು ಪಾಳಿಯಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಪ್ರತಿಯೊಬ್ಬರ ದಾಖಲೆ ಪರಿಶೀಲಿಸಲಾಗುತ್ತಿದೆ. ಸರಕು, ತರಕಾರಿ ಸಾಗಾಟ ವಾಹನ ಓಡಾಟಕ್ಕೆ ಅವಕಾಶ ಇದೆ. ಹೊರಜಿಲ್ಲೆಗಳಿಂದ ಅನುಮತಿ ಪಡೆದು ಬರುವವರನ್ನು ತಪಾಸಣೆಗೆ ಒಳಪಡಿಸಿ, ಕೈಗೆ ಮುದ್ರೆ ಹಾಕಿ ಕಡ್ಡಾಯ ಕ್ವಾರಂಟೈನ್ ವಿಧಿಸಲಾಗುತ್ತಿದೆ. ಜ್ವರದ ಲಕ್ಷಣ ಕಂಡುಬಂದವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ 108 ಆಂಬುಲೆನ್ಸ್‌ನಲ್ಲಿ ನಿಗದಿಪಡಿಸಿದ ಆಸ್ಪತ್ರೆಗೆ ಕಳುಹಿಸಿಕೊಡುತ್ತಾರೆ. ಸ್ಥಳಕ್ಕೆ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಸಾಸ್ತಾನ ಟೋಲ್ ರಷ್
    ಕೋಟ: ಸೋಮವಾರ ಉಭಯ ಜಿಲ್ಲೆಗಳ ಎಲ್ಲ ಟೋಲ್‌ಗೇಟ್‌ಗಳಲ್ಲಿ ವಾಹನ ದಟ್ಟಣೆ ಕಂಡುಬಂತು. ಸುಮಾರು ಒಂದು ಕಿ.ಮೀ ದೂರದವರೆಗೂ ವಾಹನಗಳ ಸಾಲು ಉಂಟಾಗಿ ಒಂದಿಷ್ಟು ಗೊಂದಲ ಸೃಷ್ಟಿಯಾದರೂ ಪೋಲಿಸ್ ಹಾಗೂ ಟೋಲ್ ಸಿಬ್ಬಂದಿ ಅದನ್ನು ತಿಳಿಗೊಳಿಸಿದರು. ಸಾಸ್ತಾನದಲ್ಲಿ ವಾಹನಗಳ ಸರತಿ ಸಾಲಿನಲ್ಲಿ ಆಂಬುಲೆನ್ಸ್ ಸಿಕ್ಕಿ ಹಾಕಿಕೊಂಡ ಘಟನೆಯೂ ನಡೆಯಿತು. ಸುಮಾರು ಐದು ನಿಮಿಷ ಸಿಕ್ಕಿ ಹಾಕ್ಕಿಕೊಂಡ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಹರಸಾಹಸದಿಂದ ಅದನ್ನು ಬೇರೆ ಗೇಟ್ ಮೂಲಕ ತೆರವುಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts